ಕಾರ್ಕಳ : ಶ್ರದ್ಧೆಯಿಂದ ಮಾಡಿದ ಕೆಲಸವು ಭಗವಂತನ ಆರಾಧನೆಗೆ ಸಮವಾದುದು. ನಾನು ಜೀವನಪೂರ್ತಿ ಸಾಹಿತ್ಯದ ಸೇವೆಯನ್ನು ಮಾಡಿದ್ದು ಶಾರದೆಯ ಕೃಪೆಯಿಂದ ಹೊರತು ಬೇರೆ ಯಾವುದೇ ಶಕ್ತಿಯಿಂದ ಅಲ್ಲ ಎಂದು ಕವಿ ಸೂಡಾ ಸದಾನಂದ ಶೆಣೈ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ‘ಹಿರಿಯರೆಡೆಗೆ ಸಾಹಿತ್ಯದ ನಡೆ’ ಕಾರ್ಯಕ್ರಮದ ಅಂಗವಾಗಿ ನಿವೃತ್ತ ಶಿಕ್ಷಕ ಮತ್ತು ಸರಸ ಕವಿ, ಶಿಶುಗೀತಾ ಕವಿ ಸೂಡಾ ಸದಾನಂದ ಶೆಣೈ ಅವರನ್ನು ಪಳ್ಳಿಯಲ್ಲಿರುವ ಅವರ ಮನೆ ‘ಲಕ್ಷ್ಮೀ ಕೃಪಾದಲ್ಲಿ’ ಸನ್ಮಾನಿಸಿ, ಸಂವಾದ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಶೆಣೈ ಅವರು ತಾವೇ ಬರೆದ ಸುಂದರ ಕವಿತೆಗಳನ್ನು ಹಾಡಿ, ಶಿಶು ಸಾಹಿತ್ಯವುಳ್ಳ ಮುದ್ದುಮರಿ ಕವಿತೆಗಳ ಪುಸ್ತಕ ವನ್ನು ಎಲ್ಲರಿಗೂ ವಿತರಿಸಿದರು.
ಶಿಕ್ಷಕ ರಾಜೇಂದ್ರ ಭಟ್ ಅವರು ಕನ್ನಡದ ‘ಅಭಿಮಾನ ದಿನದ’ ಬಗ್ಗೆ ಮಾತಾಡಿ ನಾಡಿನ ಶ್ರೇಷ್ಠ ನಟ ಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಕನ್ನಡ ಸ್ವಾಭಿಮಾನ ದಿನಾಚರಣೆಯೆಂದು ಸ್ಮರಿಸಿಕೊಂಡರು.
ತಾಲೂಕು ಘಟಕ ಕ.ಸಾ.ಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಪ್ರಶಸ್ತಿ ವಿಜೇತ ಶಿಕ್ಷಕ ರವೀಂದ್ರ ಹೆಗ್ಡೆ ಹಾಗೂ ಪಳ್ಳಿಯ ಸಾಮಾಜಿಕ ಮುಖಂಡ ಪಳ್ಳಿ ಜಗದೀಶ್ ಹೆಗ್ಡೆ, ಪಳ್ಳಿ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಆನಂದ ಶೆಟ್ಟಿ, ಜಿಲ್ಲಾ ಕ. ಸಾ.ಪ. ಕೋಶಾಧಿಕಾರಿ ಮನೋಹರ್ ಪಿ., ಶಿಕ್ಷಕ ದೇವದಾಸ್ ಕೆರೆಮನೆ, ಸಚ್ಚಿದಾನಂದ ಶೆಣೈ ನಿಂಜೂರು, ಶಿಕ್ಷಕ ಶಿವಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.
ನಕ್ರೆ ಸರಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ವಿಜಯ ಹೆಗ್ಡೆ ಪ್ರಾರ್ಥಿಸಿ, ಕಸಾಪ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಅವರು ಸ್ವಾಗತಿಸಿದರು. ಶಿಕ್ಷಕ ಗಣೇಶ್ ಜಾಲ್ಸೂರು ಕಾರ್ಯಕ್ರಮ ನಿರೂಪಿಸಿ, ತಾಲೂಕು ಕಾರ್ಯದರ್ಶಿ ಶಿಕ್ಷಕ ಸುಬ್ರಹ್ಮಣ್ಯ ಉಪಾಧ್ಯಾಯ ಅವರು ಧನ್ಯವಾದ ಅರ್ಪಿಸಿದರು.