ನವದೆಹಲಿ: ಡಿಜಿಟಲ್ ವಹಿವಾಟಿನಿಂದಾಗಿ ಭಾರತದಲ್ಲಿ ನಿತ್ಯ ನಗದು ರಹಿತ 20 ಸಾವಿರ ಕೋಟಿ ರೂ. ಗಳ ವಹಿವಾಟು ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ತಮ್ಮ ತಿಂಗಳ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ನಲ್ಲಿ ನಿನ್ನೆ ಮಾತನಾಡಿದ ಅವರು, ಮಾರ್ಚ್ ತಿಂಗಳಿನಲ್ಲಿ ಯುಪಿಎ ವಹಿವಾಟು 10 ಲಕ್ಷ ಕೋಟಿ ರೂ. ತಲುಪಿದೆ. ಡಿಜಿಟಲ್ ವ್ಯವಸ್ಥೆಯಿಂದಾಗಿ ವ್ಯವಹಾರ ಸರಳಗೊಂಡಿದೆ ಮತ್ತು ಪ್ರಾಮಾಣಿಕವಾಗಿ ವಹಿವಾಟು ನಡೆಯುವುದಕ್ಕೂ ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಸಣ್ಣಪುಟ್ಟ ಆನ್ಲೈನ್ ಪಾವತಿಯೂ ದೊಡ್ಡ ಮಟ್ಟದಲ್ಲಿ ಡಿಜಿಟಲ್ ವ್ಯವಹಾರವನ್ನು ಸಾಧಿಸಲು ಪೂರಕ ವಾತಾವರಣ ನಿರ್ಮಾಣ ಮಾಡಿದೆ. ಇದರಿಂದ ಹೊಸ ಹೊಸ ಫಿನ್ಟೆಕ್ ಸ್ಟಾರ್ಟ್ಅಪ್ಗಳು ಆರಂಭವಾಗಲು ತೊಡಗಿರುವುದಾಗಿಯೂ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಜನರು ಡಿಜಿಟಲ್ ಪಾವತಿಯ ಬಳಕೆಯನ್ನು ಹೆಚ್ಚಿಸಿ, ಕ್ಯಾಶ್ಲೆಸ್ ವ್ಯವಸ್ಥೆಗೆ ಉತ್ತೇಜಿಸುವ ಮೂಲಕ ಮಾದರಿಯಾಗುವಂತೆಯೂ ಅವರು ಕರೆ ನೀಡಿದ್ದಾರೆ.