ಉಡುಪಿ : ಇಂದು ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭಗೊಂಡಿದ್ದು, ಪರೀಕ್ಷಾ ಕೇಂದ್ರದೊಳಗೆ ಹಿಜಾಬ್ ಗೆ ಅವಕಾಶವಿಲ್ಲವೆಂದು ಸರಕಾರ ನಿಯಮ ಜಾರಿ ಮಾಡಿತ್ತು. ಆದರೆ ಕರಾವಳಿಯ ಉಡುಪಿ ಜಿಲ್ಲೆಯಲ್ಲಿ ಹಿಜಾಬ್ ಹೋರಾಟಗಾರ್ತಿಯರು ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯಲು ಅವಕಾಶಕ್ಕಾಗಿ ಕೇಳಿಕೊಂಡಿದ್ದಾರೆ.
ಹಿಜಾಬ್ ಹೋರಾಟದ ವಿದ್ಯಾರ್ಥಿನಿಯರಾದ ಅಲಿಯಾ ಅಸಾದಿ ಹಾಗೂ ರೇಶಮ್ ಇಂದು ಬೆಳಗ್ಗೆ ಕೊನೇ ಕ್ಷಣದಲ್ಲಿ ಹಾಲ್ ಟಿಕೆಟ್ ಪಡೆದು ಪರೀಕ್ಷಾ ಕೇಂದ್ರ ವಿದ್ಯೋದಯ ಕಾಲೇಜಿಗೆ 10.15ಕ್ಕೆ ತೆರಳಿ ಪ್ರಾಂಶುಪಾಲರಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿಯನ್ನು ಕೇಳಿದ್ದಾರೆ. ಆದರೆ ಪ್ರಾಂಶುಪಾಲರು ಅನುಮತಿ ನಿರಾಕರಿಸಿದ್ದು, ಉಡುಪಿ ತಹಶೀಲ್ದಾರ್, ಸರ್ಕಲ್ ಇನ್ಸ್ಪೆಕ್ಟರ್ ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸಿದರೂ ವಿದ್ಯಾರ್ಥಿಗಳು ಒಪ್ಪದೇ 10.55ಕ್ಕೆ ಕಾಲೇಜಿನಿಂದ ಹೊರ ನಡೆದಿದ್ದಾರೆ.
ಮಂಗಳೂರಿನಲ್ಲೂ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು
ಮಂಗಳೂರಿನ ರಥಬೀದಿಯ ಸರಕಾರಿ ಪ.ಪೂ. ಕಾಲೇಜಿಗೆ ಮೂವರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದು, ಕಾಲೇಜ್ ಗೇಟ್ ಆವರಣದಲ್ಲಿ ಭದ್ರತೆಗೆ ನಿಯೋಜಿಸಲ್ಪಟ್ಟ ಪೊಲೀಸರು ಅವರನ್ನು ಗೇಟ್ ಬಳಿ ತಡೆದು ಹಿಜಾಬ್ ತೆಗೆದು ಬಂದರೆ ಕಾಲೇಜ್ ಪ್ರವೇಶಿಸಲು ಅವಕಾಶ ನೀಡುವುದಾಗಿ ತಿಳಿಸಿದ್ದು, ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲು ಒಪ್ಪಿಕೊಂಡಿದ್ದಾರೆ. ಬಳಿಕ ವಿದ್ಯಾರ್ಥಿಗಳು ಹಿಜಾಬ್ ತೆಗೆದಿಟ್ಟು ಬಂದಿದ್ದು, ಅವರಿಗೆ ಪರೀಕ್ಷಾ ಕೆಂದ್ರದ ಒಳಗೆ ಹೋಗಲು ಅವಕಾಶ ಕಲ್ಪಿಸಿದ್ದಾರೆ.
ಶಿಕ್ಷಣ ಸಚಿವ ಆಕ್ರೋಶ
ಈ ಬಗ್ಗೆ ಪ್ರತಿಕ್ರಯಿಸಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಹಿಜಾಬ್ ವಿಚಾರವಾಗಿ ಆರಂಭದಿಂದಲೂ ವಿದ್ಯಾರ್ಥಿಗಳಿಗೆ ಮನವೊಲಿಸುತ್ತಿದ್ದೇವೆ. ಸ್ವತಃ ಅವರದೇ ಧರ್ಮದವರು ಬೆಂಗಳೂರಿನಿಂದ ಬಂದು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವಂತೆ ತಿಳಿಸಿದರೂ ನಮಗೆ ಧರ್ಮವೇ ಮುಖ್ಯವೆಂದು ಪಟ್ಟು ಹಿಡಿದು ಪರೀಕ್ಷೆ ಬರೆಯದೇ ಮರಳಿದ್ದಾರೆ. ಈ 6 ಜನ ವಿದ್ಯಾರ್ಥಿಗಳ ಬಗ್ಗೆ ಯೋಚಿಸುವ ಬದಲು ಉಳಿದ ವಿದ್ಯಾರ್ಥಿಗಳ ಬಗ್ಗೆ ಯೋಚಿಸೋಣ ಎಂದರು.