ಕಲಬುರಗಿ : ಉಡುಪಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ಇಂದು ಶುಕ್ರವಾರ ಹಿಜಾಬ್ ಧರಿಸಲು ಅವಕಾಶ ನೀಡದಿರುವುದಕ್ಕೆ ಪರೀಕ್ಷೆ ಬರೆಯದೆ ಹೊರನಡೆದ ಘಟನೆಗೆ ಸಂಬಂಧಿಸಿದಂತೆ ಶಿಕ್ಷಣ ಸಚಿವರ ನಿರ್ಧಾರವೇ ಅಂತಿಮ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಎ. 22ರಂದು ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ಆದೇಶದ ಪ್ರಕಾರ ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಯೊಳಗೆ ಹಿಜಾಬ್ ಧರಿಸುವಂತಿಲ್ಲ. ಉಡುಪಿಯಲ್ಲಿ ಇಬ್ಬರು ಹಿಜಾಬ್ ಧರಿಸುವ ವಿದ್ಯಾರ್ಥಿನಿಯರನ್ನು ವಾಪಾಸ್ ಕಳುಹಿಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ದ್ವಿತೀಯ ಪಿಯುಸಿ ಪರೀಕ್ಷೆ ಇಂದು ಆರಂಭವಾಗಿದ್ದು, ಮರು ಪರೀಕ್ಷೆ ಬಗ್ಗೆ ಶಿಕ್ಷಣ ಸಚಿವರೇ ನಿರ್ಧರಿಸುತ್ತಾರೆ ಎಂದರು.
ಉಡುಪಿಯ ವಿದ್ಯೋದಯ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಿಂದ ವಾಣಿಜ್ಯ ವಿಭಾಗದ ಅಲಿಯಾ, ರೇಶಮ್ ಅವರು ಹಿಜಾಬ್ ಧರಿಸಿ ಪರೀಕ್ಷೆ ಬರೆಯುವುದಾಗಿ ಹಠ ಹಿಡಿದಿದ್ದರಿಂದ ಅವರನ್ನು ವಾಪಸ್ ಕಳುಹಿಸಿದ ಪ್ರಸಂಗ ನಡೆಯಿತು. ಬೆಳಗ್ಗೆ 10.45ರವರೆಗೆ ಕಾದು ಪರೀಕ್ಷಾ ಕೇಂದ್ರದಿಂದ ಹೊರ ಕಳುಹಿಸಲಾಯಿತು.