ಬೆಂಗಳೂರು : ಎ. 22ರಿಂದ ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿದ್ದು, ವಿದ್ಯಾರ್ಥಿಗಳು ಹಿಜಾಬ್ ಸೇರಿದಂತೆ ಯಾವುದೇ ಧರ್ಮ ಸೂಚಕ ವಸ್ತ್ರಗಳನ್ನು ಧರಿಸುವಂತಿಲ್ಲ ಎಂದು ಸರ್ಕಾರ ತಿಳಿಸಿದೆ.
ರಾಜ್ಯದೆಲ್ಲೆಡೆ ಸುಮಾರು 1076 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 6,84,255 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 6,00,519 ಸಕ್ರಿಯ ವಿದ್ಯಾರ್ಥಿಗಳು, 61,808 ಪುನರಾವರ್ತಿತ ವಿದ್ಯಾರ್ಥಿಗಳು, 21,928 ಮಂದಿ ಖಾಸಗಿ ವಿದ್ಯಾರ್ಥಿಗಳು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿದ್ದಾರೆ.
ಪರೀಕ್ಷಾ ಕೇಂದ್ರದಲ್ಲಿನ ಅಕ್ರಮ ತಡೆಯಲು ಸುತ್ತಮುತ್ತ ಸಿಸಿಟಿವಿ ಅಳವಡಿಸಲಾಗಿದೆ. ಪರೀಕ್ಷಾ ಕೇಂದ್ರಗಳ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಮೇ 18 ರ ವರೆಗೂ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸಮೀಪದ ಫೋಟೋಕಾಪಿ ಶಾಪ್ಗಳನ್ನು ತೆರೆದಂತೆಯೂ ಸೂಚಿಸಲಾಗಿದೆ.
ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ
ರಾಜ್ಯ ಸರಕಾರದಿಂದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಪರೀಕ್ಷಾ ದಿನಗಳಲ್ಲಿ ಕೆ ಎಸ್ಆರ್ಟಿಸಿ ಬಸ್ ನಲ್ಲಿ ತಮ್ಮಲ್ಲಿನ ಹಾಲ್ ಟಿಕೆಟ್, ಕಾಲೇಜು ಗುರುತಿನ ಚೀಟಿಯನ್ನು ತೋರಿಸಿ ಮನೆಯಿಂದ ಪರೀಕ್ಷೆ ಕೇಂದ್ರ ಹಾಗೂ ಮರಳಿ ಮನೆಗೆ ಉಚಿತವಾಗಿ ಟಿಕೆಟ್ ರಹಿತ ಪ್ರಯಾಣ ಮಾಡಬಹುದು. ಕೆಎಸ್ಆರ್ಟಿಸಿ ನಿಗಮದ ನಗರ ಸಾರಿಗೆ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಕೋರಿಕೆ ಮೇರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಒದಗಿಸುತ್ತಿದ್ದು, ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳ ಹತ್ತಿರವೇ ಹತ್ತಲು ಮತ್ತು ಇಳಿದುಕೊಳ್ಳಲು ಅವಕಾಶ ಇರುತ್ತದೆ.