ಉತ್ತರಪ್ರದೇಶ : ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿರುವ ಉತ್ತರ ಪ್ರದೇಶದಲ್ಲಿ ದಲಿತ ಬಾಲಕನಿಗೆ ಮೇಲ್ಜಾತಿಯ ತಂಡ ಗಂಭೀರವಾಗಿ ಹಲ್ಲೆ ನಡೆಸಿ, ಮೇಲ್ಜಾತಿಯ ಯುವಕನ ಕಾಲು ನೆಕ್ಕುವಂತೆ ಬಲವಂತ ಮಾಡಿದ ಅಮಾನವೀಯ ಘಟನೆ ರಾಯ್ ಬರೇಲಿಯಲ್ಲಿ ನಡೆದಿದೆ.
ವೀಡಿಯೋದಲ್ಲಿ ದಾಖಲಾದಂತೆ ಸಂತ್ರಸ್ತ ದಲಿತ ಬಾಲಕನಿಗೆ ಮೊದಲಿಗೆ ಬೆಲ್ಟ್ ನಲ್ಲಿ ಹಲ್ಲೆ ನಡೆಸಿ, ಬಳಿಕ ಕಿವಿಯನ್ನು ಹಿಡಿದು ಕುಳಿತುಕೊಳ್ಳುವಂತೆ ಹೇಳಿದ್ದಾರೆ. ಆತನಿಗೆ ಮೋಟಾರ್ ಸೈಕಲ್ನಲ್ಲಿ ಕುಳಿತ ಠಾಕೂರ್ ಸಮುದಾಯಕ್ಕೆ ಸೇರಿದ ಯುವಕ ಕಾಲು ನೆಕ್ಕುವಂತೆ ಬಲವಂತಪಡಿಸುವುದು ಮತ್ತು ಆ ಬಾಲಕ ಆತನ ಕಾಲು ನೆಕ್ಕಯುವ ಹೀನಾಯ ದೃಶ್ಯ ಸೆರೆಯಾಗಿದೆ.
ಈ ಅಮಾನವೀಯ ಘಟನೆ ಎ. 10ರಂದು ನಡೆದಿದ್ದು, ವೀಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಅವರಲ್ಲಿ ಕೆಲವರು ಮೇಲ್ಜಾತಿಗೆ ಸೇರಿದವರೆಂದು ತಿಳಿದುಬಂದಿದೆ. ಸಂತ್ರಸ್ತ ಬಾಲಕ ಪೊಲೀಸರಿಗೆ ಲಿಖಿತ ದೂರು ನೀಡಿದ್ದಾನೆ.
ಸಂತ್ರಸ್ತ ಬಾಲಕ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದು ತನ್ನ ವಿಧವೆ ತಾಯಿಯೊಂದಿಗೆ ವಾಸಿಸುತ್ತಿದ್ದಾನೆ. ಆತನ ತಾಯಿ ಕೆಲ ಆರೋಪಿಗಳ ತೋಟಗಳಲ್ಲಿ ಕೆಲಸ ಮಾಡಿದ್ದು, ಆಕೆ ಮಾಡಿದ ಕೆಲಸಕ್ಕೆ ಹಣ ನೀಡುವಂತೆ ಬಾಲಕ ಕೇಳಿದ್ದಕ್ಕೆ ಆತನ ವಿರುದ್ಧ ಆರೋಪ ಹೊರಿಸಿ ಆತನಿಗೆ ಅವರು ಥಳಿಸಿದ್ದಾರೆ ಎನ್ನಲಾಗಿದೆ.