ಮಹಿಳೆಯರಿಗೆ ಮುಟ್ಟಾದಾಗ ಹೊಟ್ಟೆನೋವು, ಕಾಲು ಸೆಳೆತ, ಬೆನ್ನುನೋವು, ಕೆಲಸದಲ್ಲಿ ನಿರುತ್ಸಾಹ ಸಾಮಾನ್ಯವಾಗಿ ಕಂಡುಬರುತ್ತದೆ. ಇದರಿಂದ ಕೆಲವರಿಗೆ ಅಧಿಕ ಸಮಸ್ಯೆಯಾಗಬಹುದು. ಕೆಲವರಿಗೆ ಅಷ್ಟು ಕಾಡದೆನೆ ಇರಬಹುದು. ಇದನ್ನು ಡಿಸ್ಮೆನೋರಿಯಾ ಎಂದು ಹೇಳುತ್ತಾರೆ. ಆಯುರ್ವೇದದಲ್ಲಿ ಇದನ್ನು ಕಷ್ಟಾರ್ಥವ ಎಂದು ಹೆಸರಿಸಲಾಗಿದೆ.
ಕಾರಣಗಳು – ಕಡಿಮೆ ದೈಹಿಕ ಚಟುವಟಿಕೆ ಇದಕ್ಕೆ ಮುಖ್ಯ ಕಾರಣ. ನೀವು ನೋಡಿರಬಹುದು ಅಧಿಕ ದೈಹಿಕ ಶ್ರಮ ಪಡುವವರಿಗೆ ಈ ಮುಟ್ಟಿನ ಸಮಸ್ಯೆ ಕಾಡುವುದು ಕಡಿಮೆ. ಈಗಿನ ಕಾಲದಲ್ಲಿ ಎಲ್ಲರೂ ಕುಳಿತುಕೊಂಡೇ ಕೆಲಸ ಮಾಡುವವರು ಜಾಸ್ತಿ ಅಂಥವರಿಗೆ ಅಧಿಕ ಸಮಸ್ಯೆ ಕಂಡುಬರುವುದು. ಸೇವಿಸಿದ ಆಹಾರ ಜೀರ್ಣವಾಗದೆ ಇರುವುದು ಕೂಡ ಇನ್ನೊಂದು ಕಾರಣ. ಮಲಬದ್ಧತೆ ಇರುವವರಿಗೆ ಈ ಸಮಸ್ಯೆ ಕಾಣಿಸಿಕೊಳ್ಳಬಹುದು.
ನಾಭಿಪ್ರದೇಶದಲ್ಲಿ ಸ್ಥಿತವಾಗಿರುವಂತಹ ಅಪಾನ ವಾಯು ದೃಷ್ಟಿಯಿಂದ ಕಷ್ಟಾರ್ತವ ಆಗುವುದು ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ರೂಕ್ಷ ಆಹಾರ, ಕೋಲ್ಡ್ ಡ್ರಿಂಕ್ಸ್, ಜಿಡ್ಡಿನ ಪದಾರ್ಥ ಸೇವನೆ, ಖಾರ, ಹುಳಿ ಆಹಾರ, ಅಪೌಷ್ಠಿಕತೆ ಇದರ ಇನ್ನಿತರ ಕಾರಣಗಳು.
ಮನೆ ಮದ್ದು –
• ಮುಟ್ಟಾಗುವ ಒಂದು ವಾರ ಮುಂಚೆ ಎರಡು ಚಮಚ ಕರಿ ಎಳ್ಳನ್ನು ಹುರಿದು ಅದಕ್ಕೆ ಬೆಲ್ಲ ಹಾಗೂ ತುಪ್ಪವನ್ನು ಬೆರೆಸಿ ಸೇವಿಸಿ. ಕರಿ ಎಳ್ಳಿನ ಉಂಡೆ ಕೂಡ ಮಾಡಬಹುದು. ಎಂಟು ದಿನಗಳ ಕಾಲ ದಿನಕ್ಕೆ ಎರಡು ಬಾರಿ ಸೇವಿಸಿ.
• ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರಿಗೆ ಒಂದು ಚಮಚ ತುಪ್ಪ ಬೆರೆಸಿ ಸೇವಿಸಿ.
• ದಿನಾಲು ಶುಂಠಿ ಎಣ್ಣೆಯನ್ನು ಹೊಕ್ಕಳಿಗೆ ಹಾಕಿ ಸುತ್ತಲೂ ಸವರುವುದರಿಂದ ಮುಟ್ಟಿನ ಸಮಯದಲ್ಲಿ ಆಗುವಂತಹ ಹೊಟ್ಟೆನೋವು ಕಡಿಮೆಯಾಗುವುದು. ಶುಂಠಿ ಎಣ್ಣೆಯನ್ನು ಮನೆಯಲ್ಲಿಯೇ ಮಾಡಬಹುದು. ಶುಂಠಿಯನ್ನು ಚಿಕ್ಕ ಚಿಕ್ಕ ತುಂಡುಗಳನ್ನು ಮಾಡಿ ತೆಂಗಿನೆಣ್ಣೆ ಅಥವಾ ಎಳ್ಳೆಣ್ಣೆಯಲ್ಲಿ ಹಾಕಿ ಬಿಸಿ ಮಾಡಿ ಎಣ್ಣೆಯನ್ನು ತಯಾರಿಸಿ. ಕಹಿಬೇವಿನ ಪೇಸ್ಟ್ ನಾಭಿಪ್ರದೇಶದ ಮೇಲೆ ಸವರಬಹುದು ಅಥವಾ ಕರಿಬೇವಿನ ಪೇಸ್ಟ್ ಅರ್ಧಚಮಚ ಒಂದು ಕಪ್ ಮಜ್ಜಿಗೆಯಲ್ಲಿ ಬೆರೆಸಿ ಸೇವಿಸಬಹುದು.
• ಶುಂಠಿ ಚಹಾ ಕೂಡ ಕುಡಿಯಬಹುದು. ಬಿಸಿನೀರು ಸ್ವಲ್ಪ ಸ್ವಲ್ಪ ಕುಡಿದರೆ ಹೊಟ್ಟೆ ನೋವು ಕಡಿಮೆಯಾಗುವುದು.
• ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡೆರಡು ಹನಿ ತುಪ್ಪವನ್ನು ಮೂಗಿಗೆ ಹಾಕಿ.
• ಒಂದು ಚಮಚ ಜೀರಿಗೆ ಒಂದು ಕಪ್ ನೀರಿಗೆ ಹಾಕಿ ಅರ್ಧ ಕಪ್ ಬರುವವರೆಗೆ ಕುದಿಸಿ ಸೋಸಿ ದಿನಕ್ಕೆರಡು ಬಾರಿ ಸೇವಿಸಿ.
• ಅಮೃತಬಳ್ಳಿಯ ಕಷಾಯ ದಿನಕ್ಕೆ ಒಂದು ಬಾರಿ ಸೇವಿಸಿದರೆ ಕೂಡ ಸಮಸ್ಯೆ ಪರಿಹಾರವಾಗುವುದು. ಅಮೃತಬಳ್ಳಿಯನ್ನು ಚಿಕ್ಕ ಚಿಕ್ಕ ತುಂಡುಗಳನ್ನು ಮಾಡಿ ಒಂದು ಕಪ್ ನೀರಿಗೆ ಹಾಕಿ ಕಾಲು ಕಪ್ ಆಗುವವರೆಗೆ ಕುದಿಸಿ ಸೋಸಿ ಬಿಸಿ ಇರುವಾಗಲೇ ಸೇವಿಸಿ.
• ಯೋಗಾಸನ ಮಾಡುವುದರಿಂದ ಹೊಟ್ಟೆ ನೋವು ದೂರ ಸರಿಯುತ್ತದೆ. ದಿನಾಲು ಯೋಗಾಸನವನ್ನು ಮಾಡುವ ರೂಢಿ ಮಾಡಿಕೊಳ್ಳಿ. ಧನುರಾಸನ, ಭುಜಂಗಾಸನ, ಮತ್ಸ್ಯಾಸನ, ಬಾಲಾಸನ, ಇದರಿಂದ ಅನೇಕರಿಗೆ ಮುಟ್ಟಿನ ಸಮಸ್ಯೆ ಬರುವುದು ನಿಂತುಹೋಗಿದೆ ಮಾಡಿನೋಡಿ.
• ದಿನಾಲು ವ್ಯಾಯಾಮ ಮಾಡಿ.
• ಮಲಬದ್ಧತೆ ಇದ್ದವರು ರಾತ್ರಿ ಅರ್ಧ ಚಮಚ ತ್ರಿಫಲಾ ಚೂರ್ಣವನ್ನು ಅರ್ಧ ಕಪ್ ಬಿಸಿ ನೀರಿನ ಜೊತೆ ಸೇವಿಸಿ.
• ಬಿಸಿನೀರಿನ ಶಾಖ ಕೂಡ ಬಹಳ ಒಳ್ಳೆಯದು. ಹತ್ತಿ ಬಟ್ಟೆಯನ್ನು ಮೊದಲಿಗೆ ಬಿಸಿನೀರಿನಲ್ಲಿ ಅದ್ದಿ ನಾಭಿಪ್ರದೇಶದ ಮೇಲೆ ಇಟ್ಟು ತದನಂತರ ಅದೇ ಬಟ್ಟೆಯನ್ನು ತಣ್ಣೀರಿನಲ್ಲಿ ಅದ್ದಿ ನಾಭಿಪ್ರದೇಶದಲ್ಲಿ ಇಡಿ. ಇದನ್ನು ಹತ್ತು ನಿಮಿಷದ ಕಾಲ ಮಾಡಬಹುದು.
• ಪಂಚಕರ್ಮದಲ್ಲಿ ಬಸ್ತಿ ಕರ್ಮ ಮಾಡುವುದರಿಂದ ಅಧಿಕ ಲಾಭವಿದೆ.
• ಮನೆಮದ್ದಿನಿಂದ ಯಾವುದೇ ಪರಿಣಾಮ ಬೀರದಿದ್ದರೆ ಆಯುರ್ವೇದ ವೈದ್ಯರನ್ನು ಸಂಪರ್ಕಿಸಿ ಆಯುರ್ವೇದದಲ್ಲಿ ಪರಿಣಾಮಕಾರಿ ಔಷಧಿಗಳಿವೆ. ಅಶ್ವಗಂಧಾರಿಷ್ಟ, ಲೋಹಾಸವ, ಚಿತ್ರಕಾದಿವಟಿ, ರಜಃಪ್ರವೃತ್ತಿ ವಟಿ, ಕುಮಾರಿಕಾ ವಟಿ ಮುಂತಾದವುಗಳು ಬಳಸಲಾಗುತ್ತದೆ.
ಆರೋಗ್ಯಕರ ಜೀವನಶೈಲಿ ಪಾಲಿಸಿದರೆ ಯಾವುದೇ ಸಮಸ್ಯೆ ಬರುವುದಿಲ್ಲ.
