ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಬಾಯಿಂದ ಭ್ರಷ್ಟಾಚಾರದ ಬಗ್ಗೆ ಮಾತುಗಳು ಬರುತ್ತಿರುವುದು, ಭೂತದ ಬಾಯಿಂದ ಭಗವದ್ಗೀತೆ ಬಂದಂತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ.
ನಗರದ ಬಟ್ರಹಳ್ಳಿ ಆಂಜನೇಯ ಸ್ವಾಮೀ ದೇಗುಲದ ಆವರಣದಲ್ಲಿ ಮಾತನಾಡಿದ ಅವರು, ನಮ್ಮ ವಿರುದ್ದ ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡುತ್ತಿರುವ ಡಿ. ಕೆ. ಶಿವಕುಮಾರ್, ತಮ್ಮ ಮೇಲಿರುವ ಆರೋಪಗಳು ಮತ್ತು ಜೈಲಿಗೆ ಹೋಗಿ ಬಂದಿದ್ದರ ಬಗ್ಗೆ ನೆನಪಿಸಿಕೊಳ್ಳಲಿ. ಕೆ.ಎಸ್. ಈಶ್ವರಪ್ಪ ತಮ್ಮ ವಿರುದ್ಧ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪಕ್ಷಕ್ಕೆ ಮುಜುಗರವಾಗಬಾರದು ಎಂದು ರಾಜೀನಾಮೆ ಸಲ್ಲಿಸಿದ್ದು, ಅವರ ವಿರುದ್ದ ಭ್ರಷ್ಟಾಚಾರದ ಆರೋಪ ಮಾಡುವುದರೊಂದಿಗೆ ಅವರ ಬಂಧನಕ್ಕಾಗಿ ಕಾಂಗ್ರೆಸ್ ನಾಯಕರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ದೇಶದ್ರೋಹದ ಆರೋಪ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಕಾಂಗ್ರೆಸ್ ಮಾಜಿ ಸಚಿವ ನವಾಬ್ ಮಲೀಕ್ ಜೈಲುವಾಸ ಅನುಭವಿಸುತ್ತಿದ್ದಾನೆ. ಕೈ ನಾಯಕರ ಪ್ರಕರಣಗಳನ್ನು ಬಯಲಿಗೆಳೆದರೆ ಹಲವಾರು ಮಂದಿ ಜೈಲು ಪಾಲಾಗುತ್ತಾರೆ. ಇನ್ನೂ ಕೆಲವರು ಜಾಮೀನಿಗಾಗಿ ಅಲೆದಾಡಬೇಕಾಗುತ್ತದೆ. ವಿರೋಧ ಪಕ್ಷದ ಸ್ಥಾನದ ಅರ್ಹತೆ ಕಳೆದುಕೊಂಡಿರುವ ಕೈ ನಾಯಕರಿಂದ ನಾವೇನು ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂತೋಷ್ ಆತ್ಮಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಯುತ್ತಿದೆ. ಪ್ರಕರಣದಲ್ಲಿ ಯಾರದೇ ತಪ್ಪಿದ್ದರೂ ಖಂಡಿತ ಶಿಕ್ಷೆಯಾಗಲಿದೆ. ಸಂತೋಷ್ ಸಾವಿನ ಮುನ್ನ ಡೆತ್ ನೋಟ್ ವಾಟ್ಸಾಪ್ಪ್ ಕಳಿಸಿದ್ರಾ ಅಥವಾ ಮೃತಪಟ್ಟ ಬಳಿಕ ಹರಿದಾಡಿತಾ ಎಂಬುದು ತನಿಖೆಯಲ್ಲಿ ಬಯಲಾಗಲಿದೆ ಎಂದರು.
ಭ್ರಷ್ಟಾಚಾರದ ಬಗ್ಗೆ ಡಿಕೆಶಿ ಮಾತು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ: ಸಿ.ಟಿ. ರವಿ ವ್ಯಂಗ್ಯ
Recent Comments
ಕಗ್ಗದ ಸಂದೇಶ
on