ಕಾನೂನು ಕಣಜ – ಪ್ರಕರಣದ ವಿಚಾರಣೆಯಲ್ಲಿ ಸಾಕ್ಷ್ಯದ ಮಹತ್ವ

ಕಾನೂನಿನ ನಿಯಮಾನುಸಾರ ಯಾವುದೇ ಸಿವಿಲ್ ಅಥವಾ ಕ್ರಿಮಿನಲ್ ಪ್ರಕರಣಗಳಲ್ಲಿ ನ್ಯಾಯಾಧೀಶರು ನೀಡುವ ತೀರ್ಪು ಆಯಾಯ ಪ್ರಕರಣಕ್ಕೆ ಸಂಬಂಧಪಟ್ಟ ಪಕ್ಷಗಾರರು ಇತ್ಯರ್ಥಪಡಿಸಬೇಕಾಗಿರುವ ವಿವಾದಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯಕ್ಕೆ ಒದಗಿಸುವ ಅಥವಾ ನೀಡುವ ಸಾಕ್ಷಾಧಾರಗಳ ಮೇಲೆ ಅವಲಂಭಿತವಾಗಿರುತ್ತದೆ. ಸಾಕ್ಷ್ಯ ಎಂಬುವುದು ಪಕ್ಷಗಾರರು ನ್ಯಾಯಾಧೀಶರ ಸಮಕ್ಷಮ ನೀಡುವ ಬಾಯ್ದೆರೆ ಹೇಳಿಕೆ ಮತ್ತು ತಮ್ಮ ಹೇಳಿಕೆಗೆ ಪೂರಕವಾಗಿ ಒದಗಿಸುವ ದಾಖಲೆಗಳು ಇತ್ಯಾದಿ ಒಳಗೊಂಡಿರುತ್ತದೆ. ಕೆಲವು ಪ್ರಕರಣಗಳಲ್ಲಿ ಸಂಬಂಧಪಟ್ಟ ಪಕ್ಷಗಾರರು ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡುವ ಸಂದರ್ಭದಲ್ಲಿ ತಮ್ಮಲ್ಲಿರುವ ಅತ್ಯಮೂಲ್ಯವಾದ ಸಾಕ್ಷ್ಯವನ್ನು ಸಮರ್ಪಕವಾಗಿ ಮತ್ತು ಕ್ಲಪ್ತ ಸಮಯದಲ್ಲಿ ನ್ಯಾಯಾಲಯಕ್ಕೆ ಹಾಜರು ಪಡಿಸುವಲ್ಲಿ ವಿಫಲರಾಗಿ ಅನಾವಶ್ಯಕವಾಗಿ ಅನ್ಯಾಯಕ್ಕೆ ಒಳಗಾಗುವ ಸಂದರ್ಭಗಳನ್ನು ನಾವು ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಯಾವುದೇ ವ್ಯಕ್ತಿ ಸಾಕ್ಷ್ಯ ನೀಡುವ ಸಂದರ್ಭದಲ್ಲಿ ಈ ಕೆಳ ಕಾಣಿಸಿದ ವಿಷಯಗಳನ್ನು ಅಗತ್ಯವಾಗಿ ತಮ್ಮ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.

  1. ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡುವ ಸಂದರ್ಭದಲ್ಲಿ ತಾನು ಪ್ರಕರಣಕ್ಕೆ ಸಂಬಂಧಪಟ್ಟ ವಿಚಾರ/ವಿಷಯವನ್ನು ಹೊರತುಪಡಿಸಿ ಬೇರೆ ಯಾವುದೇ ಅನಗತ್ಯ ವಿಚಾರ/ವಿಷಯಗಳ ಬಗ್ಗೆ ಆಲೋಚಿಸಬಾರದು. ತನ್ನ ಮನಸ್ಸನ್ನು ಸಂಪೂರ್ಣವಾಗಿ ಪ್ರಕರಣಕ್ಕೆ ಸಂಬಂಧಪಟ್ಟ ವಿಷಯದ ಕುರಿತು ಕೇಂದ್ರೀಕರಿಸಬೇಕು.
  2. ಸಾಮಾನ್ಯವಾಗಿ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಎದುರು ಪಕ್ಷಗಾರರ ವಕೀಲರು ಪಾಟೀ ಸವಾಲು (cross cxamination) ಮಾಡುವ ಸಂದರ್ಭದಲ್ಲಿ ಕೇಳುವಂತಹ ಯಾವುದೇ ಪ್ರಶ್ನೆಗಳು ನೇರ ಮತ್ತು ಸುಲಭದಲ್ಲಿ ಅರ್ಥ ಆಗುವ ರೀತಿಯಲ್ಲಿ ಇರುವುದಿಲ್ಲ. ಹೀಗಾಗಿ ಎದುರು ಪಕ್ಷಗಾರರ ವಕೀಲರು ಕೇಳುವ ಪ್ರಶ್ನೆಯನ್ನು ಸರಿಯಾಗಿ ಕೇಳಿಸಿಕೊಂಡು ಮತ್ತು ಅರ್ಥ ಮಾಡಿಕೊಂಡು ಉತ್ತರಿಸಬೇಕಾಗುತ್ತದೆ. ಒಂದು ವೇಳೆ ಕೇಳುವ ಪ್ರಶ್ನೆಯು ನಮಗೆ ಸರಿಯಾಗಿ ಅರ್ಥವಾಗದಿದ್ದಲ್ಲಿ ನಾವು ನ್ಯಾಯಾಧೀಶರಲ್ಲಿ ನನಗೆ ಪ್ರಶ್ನೆ ಅರ್ಥವಾಗಿಲ್ಲ ಎಂದು ತಿಳಿಸಿದರೆ ನ್ಯಾಯಾಧೀಶರು ಪುನಃ ಪ್ರಶ್ನೆ ಕೇಳುವಂತೆ ವಕೀಲರಿಗೆ ಸೂಚಿಸಬಹುದು. ಕೇಳುವ ಪ್ರಶ್ನೆ ತನಗೆ ಅರ್ಥ ಆಗದಿದ್ದರೆ ಈ ಬಗ್ಗೆ ಪ್ರಶ್ನೆಯನ್ನು ಪುನಃ ಕೇಳಿ ಅರ್ಥೈಸಿಕೊಂಡು ಉತ್ತರ ನೀಡುವ ಹಕ್ಕು ಪ್ರತಿಯೊಬ್ಬರಿಗೆ ಇರುತ್ತದೆ.
  3. ಎದುರು ಪಕ್ಷಗಾರರ ವಕೀಲರು ಪಾಟೀ ಸವಾಲು ಮಾಡುವ ಸಂದರ್ಭದಲ್ಲಿ ಕೇಳುವಂತಹ ಯಾವುದೇ ಪ್ರಶ್ನೆಗಳಿಗೆ ನಾವು ತಟ್ಟನೆ “ಸರಿ” ಅಥವಾ “ಹೌದು” ಎಂದು ಉತ್ತರ ನೀಡುವ ಮುನ್ನ ಆ ಪ್ರಶ್ನೆಯನ್ನು ಪೂರ್ತಿಯಾಗಿ ಕೇಳಿ ಅರ್ಥ ಮಾಡಿಕೊಳ್ಳಬೇಕು.
  4. ಎದುರುದಾರ ವಕೀಲರು ಯಾವುದಾದರೂ ಅನಾವಶ್ಯಕವಾದ ಅಥವಾ ಕೇಸಿಗೆ ಸಂಬಂಧಪಡದ ವಿಚಾರದ ಬಗ್ಗೆ ನಮಗೆ ಪ್ರಶ್ನೆ ಕೇಳಿದರೆ ನಾವು ಗಡಿಬಿಡಿಯಾಗದೆ ಸಮಾಧಾನವಾಗಿ “ಈ ಬಗ್ಗೆ ನನಗೆ ಗೊತ್ತಿಲ್ಲ” ಅಥವಾ “ನನಗೆ ಈಗ ನೆನಪಿರುವುದಿಲ್ಲ” ಎಂತ ಉತ್ತರಿಸಬಹುದು.
  5. ಎದುರು ವಕೀಲರು ಪಾಟೀ ಸವಾಲು ಮಾಡುವ ಸಂದರ್ಭದಲ್ಲಿ ನಮಗೆ ಯಾವುದಾದರೂ ಪುರಾವೆ ಅಥವಾ ದಾಖಲೆ ಅಥವಾ ಪೋಟೋಗಳನ್ನು ಅಥವಾ ಸಹಿ ಇರುವ ಯಾವುದೇ ಕಾಗದ ಪತ್ರಗಳನ್ನು ತೋರಿಸಿದರೆ ಅದನ್ನು Confrontation ಎನ್ನುತ್ತಾರೆ. ಈ ಸಂದರ್ಭದಲ್ಲಿ ನಾವು ಅದನ್ನು ಒಪ್ಪಿದಲ್ಲಿ ನ್ಯಾಯಾಲಯವು ಸದರಿ ಪೋಟೋ ಅಥವಾ ಪತ್ರ ಅಥವಾ ದಾಖಲೆಯನ್ನು ನಮ್ಮ ವಿರುದ್ಧವಾಗಿ ದಾಖಲೆಯಾಗಿ ಪರಿಗಣಿಸಿ ಸ್ವೀಕರಿಸುವ ಸಾಧ್ಯತೆ ಇರುತ್ತದೆ.
ಕೆ. ವಿಜೇಂದ್ರ ಕುಮಾರ್, ಹಿರಿಯ ವಕೀಲರು,
ಮೊ: 98452 32490/ 9611682681




























































































































































































































error: Content is protected !!
Scroll to Top