ಕಗ್ಗದ ಸಂದೇಶ – ಸೂತ್ರಧಾರ ಪರಮಾತ್ಮನ ಎದುರು ಸಕಲರು ಪಾತ್ರಧಾರಿಗಳು

“ನಾಟಕವ ನೋಡು ಬ್ರಹ್ಮಾಂಡ ರಂಗಸ್ಥಳದಿ|
ಕೋಟಿ ನಟರಾಂತಿಹರು ಚಿತ್ರ ಪಾತ್ರಗಳ?||
ಆಟಕ್ಕೆ ಕಥೆಯಿಲ್ಲ ಮೊದಲಿಲ್ಲ ಕಡೆಯಿಲ್ಲ|
ನೋಟಕರು ಮಾಟಕರೆ- ಮಂಕುತಿಮ್ಮ”

ಈ ಭವ್ಯವಾದ ಬ್ರಹ್ಮಾಂಡವೆಂಬ ರಂಗಸ್ಥಳದಲ್ಲಿ ಬೃಹತ್ ನಾಟಕ ನಡೆಯುತ್ತಿದೆ. ಕೋಟಿ ಕೋಟಿ ನಟರು ವಿವಿಧ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಈ ನಾಟಕಕ್ಕೆ ಕತೆಯಿಲ್ಲ, ಆರಂಭ ಹಾಗೂ ಅಂತ್ಯವೂ ಇಲ್ ಲ.ಈ ನಾಟಕವನ್ನು ನೋಡಿ ಆನಂದಿಸುವ ಸಭಿಕರೇ ಇದರ ರಚನಕಾರರು ಎಂದು ಮಾನ್ಯ ಡಿವಿಜಿ ಅವರು ಲೋಕ ನಾಟಕದ ಮಹಿಮೆಯನ್ನು ಈ ಮುಕ್ತಕದಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾರೆ.

ಜಗತ್ತೆಂಬ ಈ ನಾಟಕ ಶಾಲೆಯಲ್ಲಿ ಇಲ್ಲಿರುವ ಎಲ್ಲರೂ ಅಂದರೆ ಪರಮಾತ್ಮನ ಸೃಷ್ಟಿಯ ಸಕಲ ಜೀವ ರಾಶಿಗಳೂ ಪಾತ್ರಧಾರಿಗಳೇ. ಒಂದೊಂದು ಜೀವಿಯದೂ ಒಂದೊಂದು ವೇಷ. ಸೂತ್ರಧಾರನಾದ ಆ ಪರಮಾತ್ಮನು ಅಡಿಸಿದಂತೆ ಆಡುವುದಷ್ಟೆ ಎಲ್ಲರ ಕರ್ತವ್ಯ. ಪಾತ್ರ ನಿರ್ವಹಣೆಯಲ್ಲಿ ವಂಶವಾಹಿಗಳ ಮೂಲಕ ಬಂದ ಗುಣಲಕ್ಷಣಗಳೊಂದಿಗೆ ಪರಸ್ಪರ ನೋಡಿ ಮತ್ತು ಪೂರ್ವ ಕತೆಗಳನ್ನು ಓದಿ ಪಡೆದ ಅರಿವು ಪ್ರಭಾವ ಬೀರುತ್ತದೆ. ಮುಗ್ದ ಪಾತ್ರಧಾರಿಯಾಗಿ ಪ್ರವೇಶ ಪಡೆದು ಇಲ್ಲಿನ ನಾಟಕ ಶಾಲೆಯಲ್ಲಿ ತಾಲೀಮು ಪಡೆದು ಏನೇನೋ ಕಲಿತು ಅದನ್ನು ಪ್ರದರ್ಶನವನ್ನು ಮಾಡಿ ಹೊಗಳಿಕೆಗೊ ತೆಗಳಿಕೆಗೊ ಪಾತ್ರವಾಗುವುದು ಸಾಮಾನ್ಯ. ಕೆಲವು ಪಾತ್ರಗಳು ಒಳ್ಳೆಯದನ್ನು ಅರಿತು ರೂಢಿಸಿಕೊಂಡು ಅದ್ಭುತ ನಿರ್ವಹಣೆಯ ಮೂಲಕ ಶಾಶ್ವತವಾಗಿ ಉಳಿಯುವಂತಹ ಸಾಧನೆ ಮಾಡಿರುವುದನ್ನು ಗಮನಿಸಬಹುದು.

ಈ ಜೀವನ ನಾಟಕದಲ್ಲಿ ನಾವೆಲ್ಲರೂ ಕೌಟುಂಬಿಕವಾಗಿ ಮತ್ತು ಸಾಮಾಜಿಕವಾಗಿ ಅನೇಕ ಪಾತ್ರಗಳನ್ನು ನಿರ್ವಹಿಸಬೇಕಾಗುತ್ತದೆ. ಪ್ರತಿ ಪಾತ್ರದ ಹಿನ್ನೆಲೆಯನ್ನು ಅರ್ಥ ಮಾಡಿಕೊಂಡು ನಿಷ್ಠೆಯಿಂದ ಆ ಪಾತ್ರವನ್ನು ನಿರ್ವಹಿಸುವುದಷ್ಟೆ ನಮ್ಮೆಲ್ಲರ ಕರ್ತವ್ಯ.”ಕುಳಿತು ಪರದೆಯ ಹಿಂದೆ ಯಾರೊ ಸ್ವಿಚ್ಚೊತ್ತುವರು| ಆಗ ದಿಗ್ಗನೆ ದೀಪ ಎಲ್ಲೆಂದರಲ್ಲಿ, ಮುಗಿಯಿತೆಂದರೆ ವೇಷ ಮತ್ತೆ ಕತ್ತಲು ಅಲ್ಲಿ| ಬಾಳೊಂದು ನಾಟಕವೊ!-ಮುದ್ದರಾಮ|” ಎಂಬ ಕವಿ ಕೆ. ಶಿವಪ್ಪನವರ ಮಾತಿನಂತೆ ಬದುಕು ಎನ್ನುವುದು ಒಂದು ನಾಟಕ ಇಲ್ಲಿನ ಪಾತ್ರ ಮುಗಿದ ಮೇಲೆ ನಮ್ಮ ಸ್ವಸ್ಥಾನ ಸೇರಲೇಬೇಕು. ‘ಅಲ್ಲಿರುವುದು ನಮ್ಮನೆ ಇಲ್ಲಿ ಬರಿ ಸುಮ್ಮನೆ’ ಎನ್ನುವ ವಾಸ್ತವದ ಅರಿವು ಸದಾ ನಮ್ಮಲ್ಲಿ ಜಾಗೃತವಾಗಿರಬೇಕು.

“ಅವರವರಗೆ ಸರಿಯಾಗಿ ಅವರವರ ಪಾತ್ರ| ವಹಿಸಿಕೊಂಡರೆ ಸಾಕು, ಎಲ್ಲಾ ಸುಸೂತ್ರ| ರಣರಂಗದಲಿ ಬೇಕು ಅಪ್ರತಿಮ ವೀರ| ಲೋಕಸಭೆಯಲ್ಲಿ ಸಾಕು ವ್ಯಾಖ್ಯಾನಕಾರ|” ಎಂಬ ಕವಿ ದಿನಕರ ದೇಸಾಯಿಯವರ ಮಾತನ್ನರಿತು, ಅವರವರಿಗೆ ದೊರೆತ ಪಾತ್ರವನ್ನು ಸಂತೋಷದಿಂದ ವಹಿಸಿಕೊಂಡು ಸುಸೂತ್ರವಾಗಿ ನಿರ್ವಹಿಸಿದಾಗಲೇ ಜೀವನ ಸಾರ್ಥಕವಾಗುವುದಲ್ಲವೇ?

ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು, ಕಸಾಪ, ಕಾರ್ಕಳ ಘಟಕ








































































































































































error: Content is protected !!
Scroll to Top