ಬೆಂಗಳೂರು : ಬೇಸಿಗೆ ಬಿಸಿಲಿನ ಉರಿ ತಾರಕ್ಕೇರಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜ್ವರ, ತಲೆನೋವು, ಕಣ್ಣಿನ ಸಮಸ್ಯೆಯಂತಹ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.
ಮಾರ್ಚ್ ತಿಂಗಳ ಮಧ್ಯ ಭಾಗದಿಂದ ಉಷ್ಣಾಂಶ ಹೆಚ್ಚಾಗಿದ್ದು, ಕನಿಷ್ಠ 19.5 ರಿಂದ ಗರಿಷ್ಠ 40.18 ಡಿಗ್ರಿ ಸೆಲ್ಸಿಯಸ್ವರೆಗೆ ಉಷ್ಣಾಂಶ ದಾಖಲಾಗಿದೆ. ಬಿಸಿಲು ಹೆಚ್ಚಾದಂತೆ ಮಲೇರಿಯಾ, ಡೆಂಗ್ಯೂ, ಕಾಲೆರಾ, ಚಿಕನ್ ಗುನ್ಯಾ ಸೇರಿದಂತೆ ನಾನಾ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದ್ದು ಹಬ್ಬ ಹರಿದಿನ ಜಾತ್ರೆ, ಮದುವೆಯಂತಹ ಜನ ಸೇರುವ ಕಡೆಗಳಲ್ಲಿ ನೀರು ಮತ್ತು ಆಹಾರದ ವ್ಯತ್ಯಾಸದಿಂದ ಈ ರೋಗಗಳು ಬರುವ ಸಾಧ್ಯತೆಯಿರುತ್ತದೆ.
ಇದಲ್ಲದೇ ಕರುಳುಬೇನೆ, ವಾಂತಿ- ಭೇದಿ, ಕಣ್ಣಿನ ಉರಿ, ಚಿಕನ್ ಫಾಕ್ಸ್, ಟೈಫಾಯ್ಡ್, ತಲೆಸುತ್ತು, ಸನ್ ಸ್ಟ್ರೋಕ್, ಚರ್ಮದ ಸಮಸ್ಯೆ, ಮೂಗಿನಲ್ಲಿ ರಕ್ತ, ಮೈಗ್ರೇನ್ನಂತಹ ಕಾಯಿಲೆಗಳು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ ಆರೋಗ್ಯ ಇಲಾಖೆ ಸರಕಾರಿ ಆಸ್ಪತ್ರೆಗಳಿಗೆ ಮುನ್ನೆಚ್ಚರಿಕಾ ಸುತ್ತೋಲೆಗಳನ್ನು ಹೊರಡಿಸಿದೆ.
ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ
ಎಲ್ಲಾ ಆಸ್ಪತ್ರೆಗಳಲ್ಲೂ ಸೂಕ್ತ ಚಿಕಿತ್ಸೆಗಾಗಿ ಜೀವ ರಕ್ಷಕ ಔಷಧ, ಹೆಚ್ಚಿನ ಔಷಧಿಗಳ ಅಗತ್ಯವಿದ್ದರೆ ಕರ್ನಾಟಕ ರಾಜ್ಯ ಡ್ರಗ್ ಮತ್ತು ಲಾಜೆಸ್ಟಿಕ್ ವೇರ್ ಹೌಸ್ ಸೊಸೈಟಿಯಿಂದ ಖರೀದಿಗೆ ಆದೇಶಿಸಲಾಗಿದೆ. ನಿರ್ಜಲೀಕರಣ ಹಾಗೂ ನೀರಿನಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ನಿರ್ವಹಣೆಗಾಗಿ ಓಆರ್ಎಸ್ ಹಾಗೂ ಹಾಲೋಜನ್ ಮಾತ್ರೆಗಳು ಆರೋಗ್ಯ ಸಹಾಯಕರು ಹಾಗೂ ಆಶಾ ಕಾರ್ಯಕರ್ತರ ಬಳಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಆದೇಶ ಹೊರಡಿಸಿದೆ.
ಮುನ್ನೆಚ್ಚರಿಕಾ ಕ್ರಮ
ಬೆವರಿನ ರೂಪದಲ್ಲಿ ನೀರು ಹೊರಹೋಗುವುದರಿಂದ ದೇಹದಲ್ಲಿ ತೇವಾಂಶ ಕಡಿಮೆಯಾಗುತ್ತದೆ. ಹೀಗಾಗಿ ನೀರಿನ ಜೊತೆಗೆ ದೇಹಕ್ಕೆ ಶಕ್ತಿ ತುಂಬುವಂತಹ ಹಣ್ಣಿನ ರಸ, ಪಾನೀಯ ಸೇವನೆ ಮೂಲಕ ನೀರಿನಾಂಶವನ್ನು ಹೆಚ್ಚಿಸಿಕೊಳ್ಳಬೇಕು.