Saturday, May 21, 2022
spot_img
Homeಸುದ್ದಿಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ - ಸುನೀಲ್‌ ಕುಮಾರ್

ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ – ಸುನೀಲ್‌ ಕುಮಾರ್

ಕಾರ್ಕಳ : ಸಂಸ್ಕೃತಿ ಇಲಾಖೆಯು ಅಕಾಡೆಮಿಗಳ ಮೂಲಕ ಹೊಸ ರೀತಿಯ ಪರಿಕಲ್ಪನೆಯಿಟ್ಟುಕೊಂಡು ಕಾರ್ಯಕ್ರಮ ನಡೆಸಲು ಪ್ರಯತ್ನಿಸುತ್ತಿದೆ. ಅಮೃತ ಮಹೋತ್ಸವದ ಸಂದರ್ಭದಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ಎಂಬ ಘೋಷಣೆಯ ಮೂಲಕ ವರ್ಷಪೂರ್ತಿ ಕಾರ್ಯಕ್ರಮ ನಡೆಸಲಾಗುವುದು. ಎಂದು ಸಚಿವ ವಿ. ಸುನೀಲ್‌ ಕುಮಾರ್‌ ಹೇಳಿದರು.
ಅವರು ಭುವನೇಂದ್ರ ಕಾಲೇಜಿನಲ್ಲಿ ಶುಕ್ರವಾರ ರಾಜ್ಯ ಯಕ್ಷಗಾನ ಅಕಾಡೆಮಿಯು ಕೊಡಮಾಡುವ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರಶಸ್ತಿ ವಿತರಿಸಿ ಮಾತನಾಡಿದರು.
ಮಕ್ಕಳಿಗೆ ಸ್ಫೂರ್ತಿ ಆಸಕ್ತಿ ಮೂಡಿಸಲು ಬರೆಹಗಾರರ ಸಮ್ಮೇಳನ ನಡೆಸಲಾಗುವುದು. ಸಾಹಿತ್ಯ, ಸಂಗೀತ ಹಾಗೂ ಸಂಸ್ಕೃತಿಗೆ ಸಂಬಂಧಿಸಿ ರಾಜ್ಯದ ಎಲ್ಲಾ ಕಡೆ ಜಿಲ್ಲಾ ಉತ್ಸವಗಳನ್ನು ನಡೆಸಲಾಗುವುದು. ಸಾಹಿತ್ಯ, ಸಂಗೀತ ಹಾಗೂ ಸಂಸ್ಕೃತಿಯಲ್ಲಿ ಕರ್ನಾಟಕ ಇತರ ರಾಜ್ಯಗಳಿಗಿಂತ ಮುಂದಿದೆ. ಇದು ದೇಶದ ಸಾಂಸ್ಕೃತಿಕ ರಾಯಭಾರಿಯಾಗಿ ಇತರ ರಾಜ್ಯಗಳಿಗೆ ನೇತೃತ್ವವನ್ನು ವಹಿಸಬೇಕು. ಇದಕ್ಕೆ ಪೂರಕವಾದ ಪ್ರಯತ್ನವನ್ನು ಎಲ್ಲ ಕೇತ್ರಗಳಲ್ಲೂ ಮಾಡಲಾಗುತ್ತಿದೆ ಎಂದವರು ತಿಳಿಸಿದರು.

ಕಾರ್ಕಳಕ್ಕೆ ಹೆಮ್ಮೆ
ಬೆಂಗಳೂರು ಕೇಂದ್ರಿತ ಕಾರ್ಯಕ್ರಮಗಳನ್ನು ಬದಲಾಯಿಸಿ ರಾಜ್ಯದ ಬೇರೆಡೆ ನಡೆಸಲು ಇದೀಗ ಕಾರ್ಕಳದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಮುಂದಿನ ವಾರ ಕೋಲಾರದಲ್ಲಿ ಜಾನಪದ ಅಕಾಡೆಮಿಯ ಕಾರ್ಯಕ್ರಮ ನಡೆಯಲಿದೆ. ಕಾರ್ಕಳ ಉತ್ಸವದ ಮೂಲಕ ಕಾರ್ಕಳದ ಕೀರ್ತಿಯನ್ನು ಹೆಚ್ಚಿಸುವ ಕೆಲಸ ಮಾಡಲಾಗಿತ್ತು. ಇದೀಗ ಪಾರ್ತಿಸುಬ್ಬ ಪ್ರಶಸ್ತಿಯನ್ನು ಪಡೆಯುತ್ತಿರುವ ವಸಂತ ಭಾರದ್ವಾಜ್ ಅವರು ಕಾರ್ಕಳದವರು ಎನ್ನುವುದು ನಮಗೆ ಹೆಮ್ಮೆಯ ಸಂಗತಿ ಎಂದರು.

ಸಮಾರಂಭವನ್ನು ಉದ್ಘಾಟಿಸಿದ ಮೂಡಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ ಪುರಸ್ಕೃತರ ಸಾಧನೆ ದೊಡ್ಡದು. ಕಾರ್ಕಳದಂತಹ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಕ್ಷೇತ್ರದಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಅಭಿಮಾನ ತಂದಿದೆ ಎಂದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಯನ್ನು – ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಅವರಿಗೆ ಪ್ರದಾನ ಮಾಡಲಾಯಿತು. ಗೌರವ ಪ್ರಶಸ್ತಿಗಳನ್ನು ಸತ್ಯನಾರಾಯಣ ವರದ ಹಾಸ್ಯಗಾರ, ಮುತ್ತಪ್ಪ ತನಿಯ ಪೂಜಾರಿ, ಎಸ್.ಬಿ.ನರೇಂದ್ರ ಕುಮಾರ್, ಮೂಡಲಗಿರಿಯಪ್ಪ, ಎನ್.ಟಿ.ಮೂರ್ತಾಚಾರ್ಯ ಅವರಿಗೆ ನೀಡಲಾಯಿತು.

ವಾರ್ಷಿಕ ಯಕ್ಷಸಿರಿ ಪ್ರಶಸ್ತಿ ವಿಜೇತರಾದ ಹಳ್ಳಾಡಿ ಜಯರಾಮ ಶೆಟ್ಟಿ, ಗೋಪಾಲ ಗಾಣಿಗ ಆಜ್ರಿ, ಬೋಳಾರ ಸುಬ್ಬಯ್ಯ ಶೆಟ್ಟಿ, ಸೀತೂರು ಅನಂತ ಪದ್ಮನಾಭರಾವ್, ಕಡತೋಕ ಲಕ್ಷ್ಮೀನಾರಾಯಣ ಶಂಭು ಭಾಗವತರು, ರಾಮ ಸಾಲಿಯಾನ್ ಮಂಗಲ್ಪಾಡಿ, ಕೊಕ್ಕಡ ಈಶ್ವರ ಭಟ್, ಅಡಿಗೋಣ ಬೀರಣ್ಣ ನಾಯ್ಕ, ಭದ್ರಯ್ಯ, ಬಸವರಾಜಪ್ಪ ಅವರಿಗೆ ಪ್ರದಾನ ಮಾಡಲಾಯಿತು. ೨೦೨೦ನೇ ಸಾಲಿನ ಪುಸ್ತಕ ಬಹುಮಾನ ಪಡೆದ ಡಾ.ಕೆ.ರಮಾನಂದ ಬನಾರಿ, ಡಾ.ಹೆಚ್.ಆರ್.ಚೇತನ ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್. ಹೆಗಡೆ, ಕುಮಟಾ ಅಧ್ಯಕ್ಷತೆಯನ್ನು ವಹಿಸಿದ್ದರು. ಅಕಾಡೆಮಿಯ ಸದಸ್ಯ ಶ್ರೀನಿವಾಸ ಸಾಸ್ತಾನ ಸ್ವಾಗತಿ, ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!