ಕಾರ್ಕಳ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಮೃತ ಭಾರತೀ, ಕನ್ನಡ ಭಾರತೀ ಮೂಲಕ ವರ್ಷಾಪೂರ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮುಖಾಂತರ ದೇಶದ ಸ್ವಾತಂತ್ರ್ಯಕ್ಕೆ ಕನ್ನಡದ ಕೊಡುಗೆಯನ್ನು ರಾಷ್ಟಕ್ಕೆ ಪರಿಚಯಿಸಲಿದೆ. ಅಕಾಡೆಮಿಗಳ ಮೂಲಕ ಜಿಲ್ಲಾ ಮಟ್ಟದಲ್ಲಿ ಉತ್ಸವವಾದಿಗಳು ನಡೆಯಬೇಕು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಅವರು ಎ. 1ರಂದು ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯು ಆಯೋಜಿಸಿದ 2021 ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ, ಯಕ್ಷಸಿರಿ ಪ್ರಶಸ್ತಿ ಹಾಗೂ 2020ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ರವರಿಗೆ ಪಾರ್ತಿಸುಬ್ಬ ಪ್ರಶಸ್ತಿ, ಸತ್ಯನಾರಾಯಣ ವರದ ಹಾಸ್ಯಗಾರ, ಮುತ್ತಪ್ಪ ತನಿಯ ಪೂಜಾರಿ, ಎಸ್. ಬಿ. ನರೇಂದ್ರ ಕುಮಾರ್, ಮೂಡಲಗಿರಿಯಪ್ಪ, ಎನ್. ಟಿ. ಮೂರ್ತಾಚಾರ್ಯರಿಗೆ ಗೌರವ ಪ್ರಶಸ್ತಿ ಹಾಗೂ ಹಳ್ಳಾಡಿ ಜಯರಾಮ ಶೆಟ್ಟಿ, ಗೋಪಾಲ ಗಾಣಿಗ ಆಜ್ರಿ, ಬೋಳಾರ ಸುಬ್ಬಯ್ಯ ಶೆಟ್ಟಿ, ಸೀತೂರು ಅನಂತ ಪದ್ಮನಾಭರಾವ್, ಕಡತೋಕ ಲಕ್ಷಿ ನಾರಾಯಣ ಶಂಭು ಭಾಗವತರು, ರಾಮ ಸಾಲಿಯಾನ್ ಮಂಗಲ್ಪಾಡಿ, ಕೊಕ್ಕಡ ಈಶ್ವರ ಭಟ್, ಅಡಿಗೋಣ ಬೀರಣ್ಣ ನಾಯ್ಕ, ಭದ್ರಯ್ಯ, ಬಸವರಾಜಪ್ಪ ಸೇರಿದಂತೆ ಯಕ್ಷಸಿರಿ ಪ್ರಶಸ್ತಿ, 2020ನೇ ಸಾಲಿನ 2 ಪುಸ್ತಕ ಬಹುಮಾನಿತರಾದ ಡಾ.ಕೆ.ರಮಾನಂದ ಬನಾರಿ, ಡಾ.ಹೆಚ್.ಆರ್.ಚೇತನ ಪ್ರಶಸ್ತಿ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಮೂಡಬಿದಿರೆ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಬೆಂಗಳೂರು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ, ಭುವನೇಂದ್ರ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸಿ.ಎ.ಶಿವಾನಂದ ಪೈ, ಪ್ರಾಂಶುಪಾಲ ಡಾ.ಮಂಜುನಾಥ್.ಎ.ಕೋಟ್ಯಾನ್ ಉಪಸ್ಥಿತರಿದ್ದರು.
