ಬಿಸಿಯೂಟ ಯೋಜನೆಗೆ ಸಿದ್ದಗಂಗಾ ಶ್ರೀ‌ಗಳ ಹೆಸರು : ಸಿಎಂ ಬೊಮ್ಮಾಯಿ

ತುಮಕೂರು : ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ವಿತರಿಸುವ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ನಡೆದಾಡುವ ದೇವರೆಂದೇ ಹೆಸರು ಪಡೆದ ತ್ರಿವಿಧ ದಾಸೋಹಿ ತುಮಕೂರಿನ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗಳ ಹೆಸರನ್ನಿಡಲು ನಿರ್ಧರಿಸಿದೆ.
ತುಮಕೂರಿನಲ್ಲಿಂದು ಡಾ. ಶಿವಕುಮಾರ ಸ್ವಾಮೀಜಿಗಳ 115ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಘೋಷಣೆ ಮಾಡಿದ್ದಾರೆ.

ಶಿವಕುಮಾರ ಸ್ವಾಮೀಜಿಗಳು ಕಷ್ಟದಲ್ಲಿರುವವರಿಗೆ ಬದುಕು ಕಟ್ಟಿಕೊಡುತ್ತಿದ್ದರು. ಲಕ್ಷಾಂತರ ಮಕ್ಕಳಿಗೆ ತ್ರಿವಿಧ ದಾಸೋಹಗಳಲ್ಲಿ ಒಂದಾಗಿರುವ ಅನ್ನ ದಾಸೋಹವನ್ನು ಕೂಡ ಮಾಡಿದವರು. ಮಧ್ಯಾಹ್ಯದ ಬಿಸಿ ಊಟದ ಯೋಜನೆಗೆ ಶಿವಕುಮಾರ ಸ್ವಾಮೀಜಿ ಹೆಸರು ಇಡಲು ಸರ್ಕಾರ ಮುಂದಾಗುತ್ತದೆ. ಈ ಬಗ್ಗೆ ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದೆ. ಈ ಬಗ್ಗೆ ಆದೇಶ ಹೊರಡಿಸುತ್ತೇನೆ ಎಂದು ತಿಳಿಸಿದರು.

ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ನಡೆದಾಡಿದ ನೆಲದಲ್ಲಿ ಸ್ಪೂರ್ತಿ, ಹೆಮ್ಮೆ ಇದೆ. ಸುಮಾರು 88 ವರ್ಷ ಈ ಮಠದ ಸೇವೆ ಮಾಡಿದ್ದಾರೆ. ಇದು ದಾಖಲೆ. ಇಡಿ ದೇಶದಲ್ಲೇ ಈ ಕೆಲಸ ಯಾರು ಮಾಡಿಲ್ಲ. ಆ ದಾಖಲೆ ನಮ್ಮ‌ ಶಿವಕುಮಾರ ಸ್ವಾಮಿಗಳು ಮಾಡಿದ್ದಾರೆ. ಶ್ರೀಗಳು ಹಚ್ಚಿದ ಒಲೆಯ ಕಿಚ್ಚು ನಿರಂತರವಾಗಿ ನಡೆಯುತ್ತಿವೆ. ಅವರು ನಮ್ಮ‌ ನಡುವೆ ಜೀವಂತ ಆಗಿದ್ದಾರೆ. ಅವರು ದೈಹಿಕವಾಗಿ ಇಲ್ಲದೆ ಇದ್ದರೂ ಅವರ ನಡೆ ಗೌರವ ನಮ್ಮ‌ ಜೊತೆ ಸದಾ ಇರುತ್ತದೆ. ಇಂದು ಅವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯಾಗಿ ಅಲ್ಲ, ಭಕ್ತನಾಗಿ ಭಾಗಿಯಾಗುತ್ತಿರುವುದು ನನ್ನ ಪಾಲಿನ ಪುಣ್ಯ ಎಂದು ಮುಖ್ಯಮಂತ್ರಿಗಳು ಹೇಳಿದರು.

ಶಿವಕುಮಾರ ಸ್ವಾಮಿಗಳ ಜನ್ಮದಿನವನ್ನು ರಾಜ್ಯದಲ್ಲಿ ದಾಸೋಹ ದಿನವನ್ನಾಗಿ ಆಚರಿಸಲಾಗುವುದು ಎಂದು ಸಹ ಮುಖ್ಯಮಂತ್ರಿಗಳು ಘೋಷಿಸಿದರು. 

ಇದಕ್ಕೂ ಮುನ್ನ ಮಧ್ಯಾಹ್ನ ಬಿಸಿಯೂಟ ಯೋಜನೆಗೆ ಸಿದ್ದಗಂಗಾ ಶ್ರೀಗಳ ಹೆಸರನ್ನಿಡಬೇಕೆಂದು ಬಿಜೆಪಿ ನಾಯಕ ಬಿ ವೈ ವಿಜಯೇಂದ್ರ ಬೇಡಿಕೆ ಮುಂದಿಟ್ಟರು.

error: Content is protected !!
Scroll to Top