Thursday, May 26, 2022
spot_img
Homeಅಂಕಣಆರೋಗ್ಯಧಾರ - ಹಣ್ಣುಗಳನ್ನು ಹೀಗೆ ಸೇವಿಸಿ

ಆರೋಗ್ಯಧಾರ – ಹಣ್ಣುಗಳನ್ನು ಹೀಗೆ ಸೇವಿಸಿ

ಸಾಮಾನ್ಯವಾಗಿ ಹಣ್ಣುಗಳು ಎಲ್ಲರಿಗೂ ಇಷ್ಟ. ಹಣ್ಣುಗಳು ಆರೋಗ್ಯದ ಜೊತೆಗೆ ಸೌಂದರ್ಯವನ್ನೂ ಹೆಚ್ಚಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ನಾವು ಹಣ್ಣುಗಳನ್ನು ಸರಿಯಾದ ರೀತಿಯಲ್ಲಿ ಸೇವಿಸಿದರೆ ಮಾತ್ರ ಆರೋಗ್ಯ ವೃದ್ಧಿಸಲು ಸಾಧ್ಯ. ಹಾಗಾದ್ರೆ ಹಣ್ಣುಗಳನ್ನು ಉಪಯೋಗಿಸುವುದು ಹೇಗೆ. ಈ ಬಗ್ಗೆ ಆಯುರ್ವೇದ ಏನು ಹೇಳುತ್ತದೆ ಎಂದು ತಿಳಿದುಕೊಳ್ಳೋಣ.
ಆಯುರ್ವೇದದಲ್ಲಿ ಫಲಗಳ ಬಗ್ಗೆ ಸವಿಸ್ತಾರವಾಗಿ ವರ್ಣಿಸಲಾಗಿದೆ. ಫಲಗಳ ಗುಣಗಳು, ಯಾವಾಗ ಸೇವಿಸಬೇಕು, ಹೇಗೆ ಸೇವಿಸಬೇಕು, ಯಾವ ರೋಗಿಗಳಿಗೆ ಯಾವ ಹಣ್ಣಿನ ಉಪಯೋಗ ಹಿತಕರವೆಂದು ತಿಳಿಸಿದ್ದಾರೆ.

ಯಾವ ಹಣ್ಣನ್ನು ಸೇವಿಸಬೇಕು
ನಾವು ವಾಸಿಸುವ ಪ್ರದೇಶದಲ್ಲಿ ಬೆಳೆಯುವ ಹಣ್ಣುಗಳು ನಮ್ಮ ಆರೋಗ್ಯ‌ದ ದೃಷ್ಟಿಯಿಂದ ಉತ್ತಮ. ಇದನ್ನು ದೇಶ ಸಾತ್ಮ್ಯ ವೆಂದು ಆಯುರ್ವೇದದಲ್ಲಿ ಹೇಳಲಾಗಿದೆ. ಬೇರೆ ದೇಶಗಳಲ್ಲಿ ಬೆಳೆದ ಹಣ್ಣುಗಳು, ನಮ್ಮ ಪ್ರದೇಶದಿಂದ ಬಹಳ ದೂರ ಬೆಳೆದಿರುವ ಹಣ್ಣುಗಳ ಸೇವನೆ, ನಮ್ಮಲ್ಲೇ ಬೆಳೆದ ಹಣ್ಣುಗಳ ಸೇವನೆಯಷ್ಟು ಹಿತಕರವಲ್ಲ. ಉದಾಹರಣೆಗೆ ಕಾಶ್ಮೀರದಲ್ಲಿ ಬೆಳೆಯುವ ಸೇಬು ನಮ್ಮ ಪ್ರದೇಶ ದಕ್ಷಿಣ ಭಾರತದ ಜನರಿಗೆ ಹಿತಕರವಲ್ಲ.
ಯಾವ ಋತುವಿನಲ್ಲಿ ಯಾವ ಹಣ್ಣುಗಳು ದೊರೆಯುತ್ತದೆಯೋ ಆ ಹಣ್ಣುಗಳನ್ನು ಸೇವಿಸುವುದು ಉತ್ತಮ. ನಮ್ಮ ದೇಹಪ್ರಕೃತಿಗೆ ಅನುಸಾರವಾಗಿ ಸೇವಿಸುವುದು ಕೂಡ ಅಷ್ಟೇ ಪ್ರಮುಖ ಪಾತ್ರವಹಿಸುತ್ತದೆ. ಪ್ರಸ್ತುತ ದಿನಗಳಲ್ಲಿ ಎಲ್ಲಾ ತರಹದ ಫಲಗಳು ಎಲ್ಲ ಕಾಲದಲ್ಲಿಯೂ ದೊರೆಯುತ್ತದೆ. ಸೇವಿಸದೇ ಇರಲು ಸಾಧ್ಯವಿಲ್ಲ. ಆದರೆ ಕಡಿಮೆ ಸೇವಿಸುವ ಪ್ರಯತ್ನವನ್ನು ಮಾಡಿ.

ನಮ್ಮ ದೇಹಪ್ರಕೃತಿಗೆ ಅನುಸಾರವಾಗಿ ಹಣ್ಣನ್ನು ಸೇವಿಸಬೇಕು. ಉದಾಹರಣೆಗೆ ಸೀತಾಫಲ, ಬಾಳೆ ಹಣ್ಣು ಕಫವನ್ನು ಹೆಚ್ಚಿಸುತ್ತದೆ. ಆದ್ದರಿಂದ ಕಫದಿಂದ ಉಂಟಾಗುವ ರೋಗಗಳಲ್ಲಿ ಹಾಗೂ ಕಫ ಪ್ರಕೃತಿಯವರು ಈ ಹಣ್ಣನ್ನು ಕಡಿಮೆ ಸೇವಿಸಬೇಕಾಗುತ್ತದೆ. ವಾತ ಹಾಗೂ ಪಿತ್ತ ಪ್ರಕೃತಿಯವರು ದ್ರಾಕ್ಷಿ, ಖರ್ಜೂರ ಸೇವಿಸಬಹುದು. ಹೀಗೆ ಪ್ರತಿ ಹಣ್ಣುಗಳ ಗುಣ ಧರ್ಮಗಳು ಬೇರೆ ಇರುತ್ತದೆ. ಅದನ್ನು ತಿಳಿದುಕೊಂಡು ಸೇವಿಸಿ.

ಯಾವ ಹಣ್ಣನ್ನು ಸೇವಿಸಬೇಕು
ಬಲಿತ ಹಣ್ಣನ್ನು ಮಾತ್ರ ಸೇವಿಸಬೇಕು. ಅಪಕ್ವ ಹಣ್ಣುಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಬಲಿತ ಹಣ್ಣುಗಳ ಹಾಗೂ ಮಾಗದ ಹಣ್ಣುಗಳ ಗುಣಗಳು ವಿಭಿನ್ನವಾಗಿರುತ್ತದೆ. ಉದಾಹರಣೆಗೆ ಮಾವಿನಕಾಯಿಯು ರಕ್ತ ಹಾಗೂ ಪಿತ್ತವನ್ನು ಪ್ರಕೋಪಗೊಳಿಸುತ್ತದೆ. ಅದೇ ಮಾವಿನ ಹಣ್ಣು ವಾತ ಕಡಿಮೆಗೊಳಿಸಿ ಮಾಂಸ ಧಾತುವನ್ನು ಹೆಚ್ಚಿಸುತ್ತದೆ. ಇದೇ ಮಾವಿನಹಣ್ಣು ಬೇರೆ ಬೇರೆ ಪ್ರದೇಶಗಳಲ್ಲಿ ಆಯಾ ಪ್ರದೇಶದ ಮಣ್ಣಿನ ಗುಣಗಳು ಕೂಡ ಸೇರಿಕೊಳ್ಳುತ್ತದೆ.

ರೋಗಗಳಲ್ಲಿ ಹಣ್ಣಿನ ಸೇವನೆ
ವಾಂತಿ, ಭೇದಿ, ದುರ್ಬಲತೆ, ಹಸಿವಾಗದಿರುವುದು ಈ ರೀತಿಯ ಲಕ್ಷಣಗಳು ಕಂಡು ಬಂದಲ್ಲಿ ಸಿಹಿಯಾದ ದಾಳಿಂಬೆ ಹಣ್ಣನ್ನು ಸೇವಿಸುವುದು ಒಳ್ಳೆಯದು. ನೆಲ್ಲಿಕಾಯಿಯನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಆಯುರ್ವೇದದಲ್ಲಿ ಇದನ್ನು ರಸಾಯನ (ವೃದ್ಧಾಪ್ಯವನ್ನು ದೂರ ಮಾಡುವ ಗುಣ) ಎಂದು ಹೇಳಲಾಗಿದೆ. ನೆಲ್ಲಿಕಾಯಿಯ ಜ್ಯೂಸ್, ಕ್ಯಾಂಡಿ, ಮುರಬ್ಬ, ಚಟ್ನಿ ಸೇವಿಸಬಹುದು.

ಹಣ್ಣನ್ನು ಸೇವಿಸುವ ಸಮಯ
ಊಟ ಮಾಡಿ ಮೂರು ಗಂಟೆಯ ನಂತರ ಹಣ್ಣನ್ನು ಸೇವಿಸುವುದು ಉತ್ತಮ. ರಾತ್ರಿಯಲ್ಲಿ ಸೇವಿಸುವುದು ಒಳ್ಳೆಯದಲ್ಲ. ಹಣ್ಣುಗಳು ಸಾಮಾನ್ಯವಾಗಿ ಮಧುರ ರಸವಿರುವುದರಿಂದ ಜೀರ್ಣಿಸಲು ಅಧಿಕ ಸಮಯ ತಗಲುತ್ತದೆ. ಅಧಿಕ ಹಣ್ಣುಗಳನ್ನು ಸೇವಿಸಬೇಡಿ, ಅದು ಜೀರ್ಣವಾಗುವುದಿಲ್ಲ. ದಿನಕ್ಕೆ ಒಂದು ಅಥವಾ ಎರಡು ಹಣ್ಣನ್ನು ಸೇವಿಸಬಹುದು. ಹಣ್ಣನ್ನು ಜ್ಯೂಸ್ ಮಾಡಿ ಕುಡಿಯುವುದು ಹಿತಕರವಲ್ಲ. ಹಣ್ಣುಗಳ ಮಿಲ್ಕ್ ಶೇಕ್ ಸೇವಿಸುವುದು ಉಚಿತವಲ್ಲ. ಹುಳಿರಸ ಫಲಗಳನ್ನು ಹಾಲಿನಲ್ಲಿ ಬೆರೆಸಿ ಸೇವಿಸಬಾರದು. ಇದು ದೇಹಕ್ಕೆ ವಿರುದ್ಧ ಆಹಾರವೆನಿಸಿಕೊಳ್ಳುತ್ತದೆ. ಮುಂದೆ ಇದು ವಿಷವಾಗಿ ಪರಿವರ್ತನೆಗೊಳ್ಳುತ್ತವೆ. ಬೇರೆ ಬೇರೆ ರೀತಿಯ ಹಣ್ಣುಗಳನ್ನು ಒಟ್ಟಿಗೆ ಸೇರಿಸಿ ಸೇವಿಸುವುದು ಹಿತವಲ್ಲ. ಪ್ರತಿಯೊಂದು ಹಣ್ಣಿನ ಜೀರ್ಣದ ಸಮಯ ಬೇರೆ ಬೇರೆ ಆಗಿರುವುದರಿಂದ ಒಟ್ಟಿಗೆ ಸೇರಿಸಿ ಸೇವಿಸಿದಾಗ ಅದು ಜೀರ್ಣವಾಗುವುದಿಲ್ಲ. ದಿನಕ್ಕೆ ಒಂದು ಸಲಕ್ಕೆ ಒಂದೇ ಬಗೆಯ ಹಣ್ಣನ್ನು ಸೇವಿಸಿ.

ಡಾ. ಹರ್ಷಾ ಕಾಮತ್

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!