ಮಂಗಳೂರು: ಈ ದೇಶದಲ್ಲಿ ಬದುಕಬೇಕು ಎಂದಾದರೆ ಸಾಮರಸ್ಯದಿಂದ ಜೀವಿಸುವುದನ್ನು ಕಲಿತುಕೊಳ್ಳಿ. ಇಲ್ಲವಾದರೆ ಎಲ್ಲಿ ಬೇಕಾದರೂ ಹೋಗಿ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾಗೆ ಕಲ್ಲಡ್ಕ ಪ್ರಭಾಕರ ಭಟ್ ತಿರುಗೇಟು ನೀಡಿದ್ದಾರೆ.
ಯಾರ ಮೇಲೆ ಯಾರು ಬೇಕಾದರೂ ಕೇಸ್ ದಾಖಲು ಮಾಡಬಹುದು. ಪ್ರಧಾನಿ ಮೋದಿ, ಅಮಿತ್ ಶಾ ಅವರಂತಹ ನಾಯಕರ ಮೇಲೂ ಕೇಸ್ ಇದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಮಾತ್ರಕ್ಕೆ ಅವರನ್ನು ಅಪರಾಧಿ ಎಂದು ಹೇಳಲಾಗುವುದೇ? ಎಂದು ಪ್ರಶ್ನಿಸಿದರು. ನನಗೆ ಯಾವುದೇ ರೀತಿಯ ಕ್ರಿಮಿನಲ್ ಹಿನ್ನೆಲೆಯೂ ಇಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಮಂಗಳೂರು ವಿವಿಯ ಸ್ನಾತಕೋತ್ತರ ವಿದ್ಯಾರ್ಥಿಗಳ ವಿದ್ಯಾರ್ಥಿ ಪರಿಷತ್ ಉದ್ಘಾಟನೆಗೆ ಕಲ್ಲಡ್ಕ ಪ್ರಭಾಕರ ಭಟ್ ಅವರಿಗೂ ಆಹ್ವಾನ ನೀಡಲಾಗಿತ್ತು. ಇದನ್ನು ವಿರೋಧಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಭಟ್ ಅವರು ಕ್ರಿಮಿನಲ್ ಹಿನ್ನೆಲೆ ಹೊಂದಿರುವುದಾಗಿಯೂ ಅವರು ಆರೋಪಿಸಿ, ಗೋ ಬ್ಯಾಕ್ ಘೋಷಣೆ ಕೂಗಿದ್ದರು.