ಬೆಂಗಳೂರು: ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ ಒದಗಿಸಲು ಹಲವು ಖಾಸಗಿ ಕಂಪನಿಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಬುಧವಾರ ಹೇಳಿದ್ದಾರೆ.
ಕೆನರಾ ಬ್ಯಾಂಕ್ ವತಿಯಿಂದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಅಡಿ ಒದಗಿಸಲಾಗಿರುವ 2 ಮಾರುತಿ ಇಕೋ ವಾಹನಗಳನ್ನು ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಮಂಗಳವಾರ (ಮಾ.29) ಕೆನರಾ ಬ್ಯಾಂಕ್ ಅಧಿಕಾರಿಗಳು ಶಿಕ್ಷಣ ಇಲಾಖೆಗೆ ಹಸ್ತಾಂತರಿಸಿದರು.
ಯೋಜನೆ ಕುರಿತು ಮಾತನಾಡಿದ ಸಚಿವ ನಾಗೇಶ್ ಅವರು, ರಾಜ್ಯದ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಗತ್ಯ ಕಟ್ಟಡ ಮತ್ತು ಕೊಠಡಿ, ಆಟದ ಮೈದಾನ, ಕಂಪ್ಯೂಟರ್ ಲ್ಯಾಬ್ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಹೊಂದಿರುವ ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಲಾಗುತ್ತದೆ. ಆ ಶಾಲೆಗಳಲ್ಲಿ ತರಗತಿಗೊಬ್ಬ ಶಿಕ್ಷಕರನ್ನು ನೇಮಿಸಲಾಗುತ್ತದೆ. ಇದರಿಂದ ಆ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಳವಾಗುತ್ತದೆ. ಅಂತಹ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಿ ಶಾಲೆಗೆ ಕರೆ ತರಲು ವಾಹನಗಳ ವ್ಯವಸ್ಥೆ ಮಾಡಲಾಗುತ್ತದೆ.
ಕಾರ್ಪೊರೇಟ್ ಕಂಪನಿಗಳು, ಬ್ಯಾಂಕ್ಗಳು, ಕಂಪನಿಗಳು, ಕೈಗಾರಿಕೆಗಳು, ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಆಸಕ್ತಿ ಹೊಂದಿರುವ ಸಂಸ್ಥೆಗಳು, ವ್ಯಕ್ತಿಗಳ ಮೂಲಕ ಮಾದರಿ ಶಾಲೆಗಳಿಗೆ ವಾಹನಗಳ ವ್ಯವಸ್ಥೆ ಮಾಡಲಾಗುತ್ತದೆ. ನಿರ್ದಿಷ್ಟ ಅವಧಿಗೆ ವಾಹನಕ್ಕೆ ಚಾಲಕರು, ಇಂಧನ ಮತ್ತು ನಿರ್ವಹಣೆಯನ್ನು ಆಯಾ ಸಂಸ್ಥೆಗಳೆ ನಿರ್ವಹಿಸುವ ಕುರಿತು ಒಪ್ಪಂದ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು.