ನವದೆಹಲಿ: ಬೆಂಗಳೂರು – ಮೈಸೂರು ನಡುವೆ ಆರಂಭಿಸಲಾಗಿರುವ ರಾಷ್ಟ್ರೀಯ ಹೆದ್ದಾರಿ – 275 ವಿಸ್ತರಣಾ ಕಾಮಗಾರಿ ಅಕ್ಟೋಬರ್ ವೇಳೆಗೆ ಸಂಪೂರ್ಣವಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಈ ಕಾಮಗಾರಿ ಸಂಪೂರ್ಣವಾದ ಬಳಿಕ ಈ ಎರಡು ಮಹಾನಗರಗಳ ನಡುವಿನ ಸಂಚಾರ ಸಮಯ 75 ನಿಮಿಷಗಳಿಗೆ ಇಳಿಕೆಯಾಗಲಿದೆ. ಒಟ್ಟು 8,350 ಕೋಟಿ ರೂ. ವೆಚ್ಚದಲ್ಲಿ 117 ಕಿ.ಮೀ. ಹೆದ್ದಾರಿಯ ಕಾಮಗಾರಿ ನಡೆಯುತ್ತಿದೆ. ಈ ಯೋಜನೆಯನ್ನು ಪಾರದರ್ಶಕವಾಗಿ ಮತ್ತು ನಿಗದಿತ ಕಾಲಮಿತಿಯಲ್ಲೇ ಸಂಪೂರ್ಣ ಮಾಡುವ ಬದ್ಧತೆ ಕೇಂದ್ರ ಸರ್ಕಾರದ್ದು ಎಂದು ಗಡ್ಕರಿ ಹೇಳಿದ್ದಾರೆ.
ಈ ಕಾಮಗಾರಿ ಸಂಪೂರ್ಣವಾದ ಬಳಿಕ ಪ್ರವಾಸೋದ್ಯಮ, ಆರ್ಥಿಕ ಪುನಶ್ಚೇತನಕ್ಕೂ ಇದು ಅನುಕೂಲಕಾರಿಯಾಗಲಿದೆ. ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿಯೂ ಈ ಯೋಜನೆ ಮಹತ್ವ ಪಡೆಯಲಿದೆ.
ಇದೊಂದು ಅತ್ಯಾಧುನಿಕ ಮಾದರಿಯ ಯೋಜನೆಯಾಗಿದ್ದು, 8 ಕಿಮೀ ಉದ್ದದ ಎಲಿವೇಟೆಡ್ ಕಾರಿಡಾರ್, 9 ಪ್ರಮುಖ ಸೇತುವೆಗಳು, 42 ಸಣ್ಣ ಸೇತುವೆಗಳು, 64 ಅಂಡರ್ ಪಾಸ್ಗಳು, 11 ಮೇಲ್ಸೇತುವೆಗಳು, 4 ರೋಡ್ ಓವರ್ ಬ್ರಿಡ್ಜ್ಗಳನ್ನು ಇದು ಒಳಗೊಂಡಿದೆ. ವಾಯುಮಾಲಿನ್ಯ ನಿಯಂತ್ರಣ ಉದ್ದೇಶದಿಂದ 5 ಬೈಪಾಸ್ಗಳನ್ನು ಸಹ ಈ ರಾಷ್ಟ್ರೀಯ ಹೆದ್ದಾರಿ ಯೋಜನೆಯಡಿ ನಿರ್ಮಾಣ ಮಾಡಲಾಗುತ್ತಿದೆ.