ಕಗ್ಗದ ಸಂದೇಶ – ನಮ್ಮನ್ನು ನಾವು ಅರಿತುಕೊಳ್ಳೋಣ…

ತನ್ನ ಶಕ್ತಿಯನಳೆದು, ತನ್ನ ಗುಣಗಳ ಬಗೆದು|
ಸನ್ನಿವೇಶದ ಸೂಕ್ಷ್ಮವರಿತು, ಧೃತಿ ತಳೆದು||
ತನ್ನ ಕರ್ತವ್ಯಪರಿಧಿಯ ಮೀರದುಜ್ಜುಗಿಸೆ|
ಪುಣ್ಯಶಾಲಿಯ ಪಾಡು-ಮಂಕುತಿಮ್ಮ||”.

ಪ್ರತಿಯೊಬ್ಬರು ತನ್ನಲ್ಲಿರುವ ಸಾಮರ್ಥ್ಯವನ್ನು ಅರಿತುಕೊಳ್ಳಬೇಕು. ತನ್ನ ಗುಣಾವಗುಣಗಳೇನು ಎನ್ನುವುದನ್ನು ಯೋಚಿಸಿ ತಿಳಿದುಕೊಳ್ಳಬೇಕು. ತಾನಿರುವ ಸನ್ನಿವೇಶದ ಸೂಕ್ಷ್ಮತೆಯನ್ನು ಅರ್ಥಮಾಡಿಕೊಂಡು, ಧೈರ್ಯವನ್ನು ತಂದುಕೊಳ್ಳಬೇಕು. ತನ್ನ ಕರ್ತವ್ಯದ ಪರಿಧಿಯನ್ನು ಮೀರದಂತೆ ಕಾರ್ಯ ನಿರ್ವಹಿಸುವವನು ಪುಣ್ಯಶಾಲಿಯಾಗುತ್ತಾನೆ ಎನ್ನುವುದನ್ನು ಈ ಮುಕ್ತಕದಲ್ಲಿ ಮಾನ್ಯ ಡಿವಿಜಿ ಯವರು ಸುಂದರವಾಗಿ ಚಿತ್ರಿಸಿದ್ದಾರೆ.
ಸ್ವಾಮಿ ಜಗದಾತ್ಮಾನಂದರು ತಮ್ಮ ಬದುಕಲು ಕಲಿಯಿರಿ ಪುಸ್ತಕದಲ್ಲಿ ಸಾವಿಲ್ಲದ ನೋವಿಲ್ಲದ ದೈವೀ ಶಕ್ತಿ ಪ್ರತಿಯೊಬ್ಬರ ಮನಸ್ಸಿನಾಳದಲ್ಲಿದೆ. ಇಂತಹ ಶಕ್ತಿಯಿದ್ದರೂ ಗುಲಾಮರಂತೆ ವರ್ತಿಸುವುದೇಕೆ? ಎಂಬ ಪ್ರಶ್ನೆಗೆ ಅವರೆ ಹೇಳುವಂತೆ ಇದಕ್ಕೆ ಎರಡು ಕಾರಣಗಳು. ಒಂದು ಅಜ್ಞಾನ ಇನ್ನೊಂದು ಬಾಲ್ಯದಿಂದ ಬೆಳೆಸಿಕೊಂಡು ಬಂದ ನಿಷೇಧಾತ್ಮಕ ಭಾವ. ಅಜ್ಞಾನ ಅಂದರೆ ಹೆಚ್ಚಿನವರಿಗೆ ತಮ್ಮಲ್ಲಿರುವ ಶಕ್ತಿಯ ಬಗ್ಗೆ ಅರಿವಿಲ್ಲದಿರುವುದನ್ನು ಗಮನಿಸಬಹುದು. ನಮ್ಮಲ್ಲಿನ ಶಕ್ತಿಯನ್ನು ಅರಿತುಕೊಂಡು ಸಕಾರಾತ್ಮಕ ಮನೋಭಾವದೊಂದಿಗೆ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. “ಓದಲಿಕೆ, ಬರೆಯಲಿಕೆ, ಆಡಲಿಕೆ, ಕೇಳಲಿಕೆ ಒಂದೊಂದಕ್ಕಾಗಿ ನೀ ಇಡು ಇಷ್ಟು ಸಮಯ| ಆತ್ಮಾವಲೋಕನಕೆ ಸಮಯ ಒಂದಿಷ್ಟಿರಲಿ| ಗೌರವಿಸು ಕಾಲವನು-ಮುದ್ದುರಾಮ|”.ಎಂಬ ಕವಿ ಕೆ. ಶಿವಪ್ಪನವರ ಮಾತಿನಂತೆ ನಮ್ಮನ್ನು ನಾವು ಅರಿತುಕೊಳ್ಳುವುದು ಎಲ್ಲದಕ್ಕಿಂತ ಮುಖ್ಯವಾಗುತ್ತದೆ. ಅದಕ್ಕಾಗಿ ನಾವು ಒಂದಿಷ್ಟು ಸಮಯವನ್ನು ಮೀಸಲಿಡಬೇಕು.
ನಮ್ಮ ಸಾಮರ್ಥ್ಯವನ್ನು ಅರಿತು ಅದನ್ನು ಸನ್ನಿವೇಶಕ್ಕೆ ತಕ್ಕಂತೆ ಧೈರ್ಯದಿಂದ ಬಳಸಬೇಕು. ನಮ್ಮ ಶಕ್ತಿಯ ಸದುಪಯೋಗವಾದಾಗಲೇ ಅದು ಬೆಳಕಾಗುವುದು. ನಾವು ಕಾರ್ಯನಿರ್ವಹಿಸುವಾಗ ನಮ್ಮ ಕರ್ತವ್ಯದ ಪರಿಧಿಯನ್ನು ಮೀರದಂತೆ ಎಚ್ಚರಿಕೆ ವಹಿಸಬೇಕು. ನಮ್ಮ ಕರ್ತವ್ಯದ ಇತಿಮಿತಿಯನ್ನು ಅರಿತು; ಅವಗುಣಗಳನ್ನು ತಿದ್ದಿಕೊಂಡು; ನಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯಿಟ್ಡು ಧೈರ್ಯದಿಂದ ಮುನ್ನಡೆದಾಗಲೇ ಜೀವನ ಸಾರ್ಥಕವಾಗುವುದಲ್ಲವೇ?

ಪ್ರಭಾಕರ ಶೆಟ್ಟಿ ಕೊಂಡಳ್ಳಿ
ಅಧ್ಯಕ್ಷರು, ಕಸಾಪ, ಕಾರ್ಕಳ ಘಟಕ.

Latest Articles

error: Content is protected !!