ಬೆಂಗಳೂರು : ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಏರಿಕೆ ಕಂಡಿದ್ದು, ಕೇವಲ ಮೂರು ತಿಂಗಳುಗಳಲ್ಲಿ 907 ಪ್ರಕರಣಗಳು ವರದಿಯಾಗಿದೆ.
2021ರಲ್ಲಿ ಐದು ತಿಂಗಳಿಗೆ ಇಷ್ಟು ಪ್ರಕರಣಗಳು ವರದಿಯಾದರೆ, ವರ್ಷದಲ್ಲಿ ಒಟ್ಟು 7,189 ಮಂದಿ ಡೆಂಗ್ಯೂ ಪೀಡಿತರಾಗಿದ್ದು, ಐವರು ಸಾವನ್ನಪ್ಪಿದ್ದರು.
2022ರಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಡೆಂಗ್ಯೂ ಪತ್ತೆಯಾಗಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಲಾ 70, ಮೈಸೂರು 83, ಬಿಬಿಎಂಪಿ ವ್ಯಾಪ್ತಿಯಲ್ಲಿ 205, ಬಳ್ಳಾರಿ 68, ಚಿತ್ರದುರ್ಗ 64, ಕೊಪ್ಪಳ 62, ಹಾಗೂ ಇತರ ಜಿಲ್ಲೆಗಳಲ್ಲಿ 50ಕ್ಕಿಂತ ಕಡಿಮೆ ಪ್ರಕರಣಗಳಿದ್ದು ಎಲ್ಲಿಯೂ ಮರಣ ಪ್ರಕರಣ ವರದಿಯಾಗಿಲ್ಲ.
ರಾಜ್ಯದ 22 ಜಿಲ್ಲೆಗಳಲ್ಲಿ ಚಿಕನ್ ಗುನ್ಯಾ ಪ್ರಕರಣಗಳಿದ್ದು, 232 ಮಂದಿ ಜ್ವರಕ್ಕೆ ತುತ್ತಾಗಿದ್ದಾರೆ. ಕೋಲಾರ 42, ವಿಜಯಪುರ 40, ತುಮಕೂರು 28, ಬೆಂಗಳೂರು ಗ್ರಾಮಾಂತರ 27, ಚಿತ್ರದುರ್ಗ 17, ಹಾಗೂ ದಾವಣಗೆರೆಯಲ್ಲಿ 14 ಪ್ರಕರಣಗಳು ವರದಿಯಾದರೆ ಉಳಿದ ಜಿಲ್ಲೆಗಳಲ್ಲಿ 10ಕ್ಕಿಂತ ಕಡಿಮೆ ಪ್ರಕರಣಗಳಿವೆ.
ಈಡಿಸ್ ಸೊಳ್ಳೆಗಳಿಂದ ಡೆಂಗ್ಯೂ
ಮನೆಯ ಸುತ್ತ ಮುತ್ತಲಿನ ಘನ ತ್ಯಾಜ್ಯ ವಸ್ತುಗಳಲ್ಲಿ ಸಂಗ್ರಹವಾಗುವ ನೀರಿನಲ್ಲಿ ಈಡಿಸ್ ಜಾತಿಯ ಸೊಳ್ಳೆಗಳು ಉತ್ಪತ್ತಿಯಾಗಿ ಅವುಗಳ ಕಡಿತದಿಂದ ಡೆಂಗ್ಯೂ ಜ್ವರ ಕಾಣಿಸಿಕೊಳ್ಳುತ್ತದೆ. ಮನೆಯ ಸುತ್ತಮುತ್ತ ಸ್ವಚ್ಚವಾಗಿಟ್ಟುಕೊಂಡು ಮುಂಜಾಗೃತ ಕ್ರಮವನ್ನು ಅನುಸರಿಸಿದ್ದಲ್ಲಿ ಡೆಂಗ್ಯೂ ಜ್ವರವನ್ನು ತಡೆಗಟ್ಟಬಹುದು.