Tuesday, May 17, 2022
spot_img
Homeಸುದ್ದಿದೇವಸ್ಥಾನದ ಟ್ರಸ್ಟಿಯಿಂದಲೇ ದೇವರ ಹುಂಡಿಗೆ ಕನ್ನ

ದೇವಸ್ಥಾನದ ಟ್ರಸ್ಟಿಯಿಂದಲೇ ದೇವರ ಹುಂಡಿಗೆ ಕನ್ನ

ಮಂಗಳೂರು: ದೇವರ ಕಾಣಿಕೆ ಹುಂಡಿಗೆ ದೇವಸ್ಥಾನದ ಟ್ರಸ್ಟಿಯೇ ಕನ್ನ ಹಾಕಿದ ಘಟನೆ ಕದ್ರಿ ಮಂಜುನಾಥ ಕ್ಷೇತ್ರದಲ್ಲಿ ನಡೆದಿದೆ.
ದೇವಸ್ಥಾನಗಳ ಹುಂಡಿಗೆ ಹಣ ಹಾಕಬೇಡಿ ಅದು ಹಜ್‌ ಯಾತ್ರೆಗೆ ಹೋಗುವ ಮುಸ್ಲಿಮರಿಗೆ ಹೋಗುತ್ತದೆ ಎಂದು ಆರೋಪ ಮಾಡಿ ಗೆದ್ದಿರುವ ಆಡಳಿತ ಪಕ್ಷದವರೇ ಶಿಫಾರಸು ಮಾಡಿರುವ ವ್ಯವಸ್ಥಾಪನಾ ಸಮಿತಿ ಸದಸ್ಯೆ, ಮಹಿಳಾ ಟ್ರಸ್ಟಿಯಿಂದ ಈ ಕೆಲಸ ನಡೆದಿದ್ದು, ಇದಕ್ಕೆ ಸಂಘಪರಿವಾರದ ಬೆಂಬಲದಿಂದ ಆಯ್ಕೆಯಾದ ಟ್ರಸ್ಟಿಗಳು ತೀವ್ರ ವಿರೋಧ ವ್ಯಕ್ತಪಡಿಸಿ ಈ ಕುರಿತು ತನಿಖೆ ನಡೆಸುವಂತೆ ದೇವಸ್ಥಾನದ ಆಡಳಿತಾಧಿಕಾರಿಗೆ ದೂರು ನೀಡಿದ್ದಾರೆ.
ಫೆ. 24ರಂದು ದೇವಸ್ಥಾನದಲ್ಲಿ ಕಾಣಿಕೆ ಡಬ್ಬಿಯ ಹಣದ ಲೆಕ್ಕಾಚಾರ ನಡೆದಿತ್ತು. ಇದಾದ ಎರಡು ದಿನಗಳ ಬಳಿಕ ಟ್ರಸ್ಟಿಯೊಬ್ಬರಿಗೆ ಅನಾಮಧೇಯ ಮಹಿಳೆಯೊಬ್ಬರ ಕರೆ ಬಂದಿದ್ದು, ಅದರಲ್ಲಿ 500 ರು. ನೋಟುಗಳನ್ನು ಮಹಿಳಾ ಟ್ರಸ್ಟಿ ಕದ್ದಿಯುತ್ತಿರುವುದನ್ನು ನಾನು ನೋಡಿದ್ದೇನೆ, ಬೇಕಾದರೆ ಸಿ.ಸಿ. ಕ್ಯಾಮೆರಾ ಪರಿಶೀಲಿಸಿ ಎಂದು ಸಲಹೆ ನೀಡಿದ್ದರು.
ಇದಾದ ಬಳಿಕ ಟ್ರಸ್ಟಿಗಳು ಸೇರಿ ಸಿ.ಸಿ. ಟೀವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿ ಮಹಿಳಾ ಟ್ರಸ್ಟಿ ನೋಟಿನ ಬಂಡಲ್‌ಗಳಲ್ಲಿ ಒಂದನ್ನು ಬ್ಯಾಗ್‌ಗೆ ಹಾಕುತ್ತಿರುವ ದೃಶ್ಯ ಕಂಡು ಬಂದಿತ್ತು. ತಕ್ಷಣ ವ್ಯವಸ್ಥಾಪನ ಆಡಳಿತ ಸಮಿತಿಯ ತುರ್ತು ಸಭೆ ಕರೆಯಲಾಗಿದ್ದು, ಈ ಸಭೆಯಲ್ಲಿ ವಾದ- ವಿವಾದ ನಡೆದು ರಾಜೀನಾಮೆ ನೀಡುವುದಾಗಿ ಮಹಿಳಾ ಟ್ರಸ್ಟಿ ಒಪ್ಪಿದ್ದರು. ವಾರ ಕಳೆದರೂ ರಾಜೀನಾಮೆ ನೀಡದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪ್ರತ್ಯಕ್ಷ ದರ್ಶಿಗಳು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು. ಇದಾದ ಬಳಿಕ ಮುಜರಾಯಿ ಇಲಾಖೆಯ ಪಿಎಸ್‌ ಕದ್ರಿ ಕ್ಷೇತ್ರದ ಆಡಳಿತಾಧಿಕಾರಿಗೆ ಕರೆ ಮಾಡಿ ತನಿಖೆ ನಡೆಸುವಂತೆ ಮೌಖಿಕವಾಗಿ ಹೇಳಿರುವುದು ದೇವಸ್ಥಾನದ ಅಂಗಣದೊಳಗೆ ಸುದ್ದಿಯಾಗಿತ್ತು. ಬಳಿಕ ಟ್ರಸ್ಟಿಯ ಬೆಂಬಲಕ್ಕೆ ಸಮಿತಿ ಅಧ್ಯಕ್ಷರುಶಿಫಾರಸು ಮಾಡಿದ ಪಕ್ಷದ ಅಧ್ಯಕ್ಷರು ಬೆಂಬಲವಾಗಿ ನಿಂತ ಕಾರಣ ವಿಚಾರಣೆ ಅಲ್ಲಿಯೇ ನಿಂತುಹೋಗಿತ್ತು.

ಆಯುಕ್ತರಿಗೆ ದೂರು
ಕಾಣಿಕೆ ಹುಂಡಿಯಲ್ಲಿ ಹಣ ಎಗರಿಸಲಾಗಿದೆ ಎಂಬ ಕುರಿತು ಟ್ರಸ್ಟಿಯೊಬ್ಬರು ದೂರು ನೀಡಿದ್ದು ಹೌದು. ಟ್ರಸ್ಟಿಗಳನ್ನು ಧಾರ್ಮಿಕ ಪರಿಷತ್‌ ನೇಮಕ ಮಾಡುವುದರಿಂದ ನಮಗೆ ವಿಚಾರಣೆ ನಡೆಸುವ ಅಧಿಕಾರ ಇಲ್ಲ. ನಾವು ಈ ದೂರನ್ನು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ಕಳುಹಿಸಿದ್ದೇವೆ ಎಂದು ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಪ್ರತಿಕ್ರಿಯಿಸಿದ್ದಾರೆ.

ಹುಂಡಿ ಎಣಿಕೆಗೆ ತಪ್ಪದೆ ಹಾಜರ್‌
ಹಿಂದಿನ ಬಿಜೆಪಿ ಸರಕಾರ ಇದ್ದ ಅವಧಿಯಲ್ಲಿಯೂ ಮಹಿಳೆ ವ್ಯವಸ್ಥಾಪನ ಸಮಿತಿಗೆ ನೇಮಕವಾಗಿದ್ದರು. ಕಾಂಗ್ರೆಸ್‌ ಆಡಳಿತ ಇದ್ದ ಸಂದರ್ಭದಲ್ಲಿಯೂ ಕಾಣಿಕೆ ಹುಂಡಿ ಲೆಕ್ಕದ ದಿನ ತಪ್ಪದೆ ಹಾಜರಾಗುತ್ತಿದ್ದರು. ಈ ಬಾರಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗ ಮತ್ತೆ ಟ್ರಸ್ಟಿಯಾಗಿದ್ದರು. ರಾಜ್ಯದೆಲ್ಲೆಡೆ ವ್ಯವಸ್ಥಾಪನ ಸಮಿತಿ ನೇಮಕವಾಗಿದ್ದರೂ ಕದ್ರಿ ಕ್ಷೇತ್ರದಲ್ಲಿ ಮಾತ್ರ ಸಂಘಪರಿವಾರದ ಮುಖಂಡರಿಗೆ ಅಧ್ಯಕ್ಷ ಸ್ಥಾನ ಕೊಡಬೇಕೋ ಕಾಂಗ್ರೆಸ್‌ ಮುಖಂಡರಿಗೆ ಕೊಡಬೇಕೋ ಎಂಬ ವಿಚಾರದಲ್ಲಿ ಹಗ್ಗ ಜಗ್ಗಾಟವಾಗಿ 8 ತಿಂಗಳ ಹಿಂದಷ್ಟೇ ವ್ಯವಸ್ಥಾಪನ ಸಮಿತಿ ರಚಿಸಲಾಗಿತ್ತು.

ಉಸ್ತುವಾರಿ ಸಚಿವ ಸುನಿಲ್‌ ಪ್ರತಿಕ್ರಿಯೆ
ದಕ್ಷಿಣ ಕನ್ನ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್‌ ಕುಮಾರ್‌ ಪ್ರತಿಕ್ರಯಿಸಿ, ಈ ಕುರಿತು ಮಾಹಿತಿ ಬಂದಿಲ್ಲ. ಟ್ರಸ್ಟಿಗಳು ತಪ್ಪು ಮಾಡಿದ್ದು ಹೌದಾದರೆ ರಕ್ಷಿಸುವ ಪ್ರಮೇಯವೇ ಇಲ್ಲ, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!