Saturday, May 21, 2022
spot_img
Homeಸ್ಥಳೀಯ ಸುದ್ದಿತೆಳ್ಳಾರು : ಸಾಮಾನ್ಯ ಕೃಷಿಕ ಕುಟುಂಬದ ಮಹಿಳೆ - ಕಾರ್ಕಳ ಉತ್ಸವದ ಬಗ್ಗೆ ಬರೆದ ನೈಜ್ಯ...

ತೆಳ್ಳಾರು : ಸಾಮಾನ್ಯ ಕೃಷಿಕ ಕುಟುಂಬದ ಮಹಿಳೆ – ಕಾರ್ಕಳ ಉತ್ಸವದ ಬಗ್ಗೆ ಬರೆದ ನೈಜ್ಯ ಬರಹ ಮತ್ತು ಮನದಾಳದ ಮಾತು

ನೆನಪುಗಳ ಪಳಿಯುಳಿಕೆ ಇಂದು ಕಳೆಗಟ್ಟಿತು ಬಾನ ಚಿತ್ತಾರದಿ ಮಡುಗಟ್ಟಿತು ಮನ ಬೇಸರದಿ ಮುಗಿದ ಅಧ್ಯಾಯವ ನೆನೆದು.
ಒಹ್ 10 ದಿನಗಳ ಕಾಲ ನಮ್ಮ ಕಾರ್ಕಳ ಇಂದ್ರನಗರ ಮಹೇಂದ್ರ ನಗರದಂತೆ ಕಂಗೊಳಿಸುತ್ತಿತ್ತು. ಏನಿತ್ತು ಅನ್ನುವುದಕ್ಕಿಂತ ಏನಿಲ್ಲ ಅನ್ನುವುದಿತ್ತು. 10 ದಿನದಿಂದ ಜನರಿಂದ ತುಂಬಿ ತುಳುಕುತ್ತಿದ್ದ ನಗರ ಇಂದು ಮೆಲ್ಲನೆ ಸುಖದ ಭರವ ಕಳೆದು ಮೈಕೊಡವಿ ತನ್ನ ಅಸ್ತಿತ್ವಕ್ಕೆ ಮರಳುವ ಸನ್ನಾಹದಲ್ಲಿದೆ. ಕಾರ್ಕಳ ಕುವರ ಹೆಮ್ಮೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಇಂಧನ ಸಚಿವ ಸುಗುಣ ಸುನಿಲ್‌ ಕುಮಾರ್ ಕಾರ್ಕಳದ ಹೆಸರನ್ನು ಅಂತರಾಷ್ಟ್ರೀಯ ಮಟ್ಟಕ್ಕೇರಿಸಲು ಅವರು ಮಾಡಿರುವ ಶ್ರಮ ಅಪಾರ. ಕೆಲವೊಂದು ಕೆಲಸ ಒಬ್ಬನಿಂದ ಮಾಡಲು ಖಂಡಿತ ಅಸಾಧ್ಯ. ಅದಕ್ಕೆ ಸರಿಯಾಗಿ ಸಹಚರರು ತನ್ನ ಸಂಕಲ್ಪಕೆ ಸಾಕಾರ ರೂಪ ನೀಡಲು ಸಹಕರಿಸುವವರು ಬೇಕು. ಮಂತ್ರದಿಂದ ಮಾವಿನಕಾಯಿ ಉದುರಲು ಸಾಧ್ಯವಿಲ್ಲವಲ್ಲ. ಕೇವಲ ಧನವಿದ್ದರೆ ಸಾಲದು ಸದ್ಗುಣ ಸಮ್ಮಿಲಿತವಾದರೆ ಮಾತ್ರ ಜನ ಇವ ನಮ್ಮವನೆಂಬ ಭಾವದಿ ಎಲ್ಲರೂ ಸಹಕರಿಸುವರು.
ಜನರಿದ್ದರೆ ನಾಯಕ ಆತನ ಆಸ್ತಿಯೇ ಪ್ರಜೆಗಳು. ಇಂತಹದ್ದೊಂದು ಕಾರ್ಯಕ್ರಮ ಜರುಗಲು ಎಷ್ಟು ಕಾಲದ ಸಂಕಲ್ಪವೋ ನಾ ಅರಿಯೆ. ಈ ಮೊದಲೇ ಆಗಬೇಕಿದ್ದ ಈ ಉತ್ಸವ ಒಂದು ಬಾರಿ ಮುಂದೂಡಲ್ಪಟ್ಟು ಈಗ ಸಂಪನ್ನವಾಯಿತು. 2 ವರ್ಷಗಳಿಂದ ಕೊರೋನಾದಿಂದ ಜಡ್ಡುಗಟ್ಟಿರುವ ಮನಕೆ ಮನದಣಿಯೆ ಹಬ್ಬ, ಉದರದಣಿಯೆ ಆಹಾರ. ಕಲ್ಪನೆಗೂ ಮೀರಿ ಜನ ಸಂದಣಿ, ಆಬಾಲ ವೃದ್ಧರಾಗಿ ನಮ್ಮೂರೆಂಬ ಹೆಮ್ಮೆಯೊಳು ಬಂದರೆ ಕೆಲವರು ಮನದೊಳು ವಿರೋಧ ಇದ್ದು ಏನುಂಟು ನೋಡಲೇ ಬೇಕೆಂದು ಬಂದರು. ಕೆಲವರು ಮನೆಯಲ್ಲೆ ಕುಳಿತು ಕೈಲಾಗದವ ಮೈಪರಚಿಕೊಂಡ ಅನ್ನುವ ಭಾವದಿ ಸುಮ್ಮನೆ ದುಡ್ಡು ದಂಡ ಅನ್ನುವ ಜನ. ಹೋಗಲಿ ಬಿಡಿ. ಲೋಕೋಭಿನ್ನರುಚಿ. ಎಷ್ಟೋ ಸಾವಿರ ಜನರಿಗೆ ಉದ್ಯೋಗ ದೊರೆಯಿತು ಅಂತ ಅರಿವಿಲ್ಲ ಒಬ್ಬ ಮನುಷ್ಯ ಅಂದ ಮೇಲೆ ಪರ ವಿರೋಧ ಅಂತ ಇರಲೇ ಬೇಕು. ವಿರೋಧ ಇದ್ದರೆ ಸಾಧಿಸುವ ಛಲ ಬರುವುದು.
ಬಾಲ್ಯದಿಂದಲೂ ಒಂದು ಕನಸಿತ್ತು ಅಂಬರದೊಳು ಹಕ್ಕಿಯಂದದಿ ಹಾರಬೇಕೆಂದು. ಸಹಜವಾಗಿ ಎಲ್ಲರದೂ ಆಸೆ. ಆದರೆ ಆಸೆಯು ಬಂಜೆಯಾಗದೆ ಈಡೇರಿದ ಕ್ಷಣ. ಅದೆಂತಹ ಅವಿಸ್ಮರಣೀಯ. ಧನಿಕರು ಯಾವಾಗಲೂ ಹೋಗಬಹುದು. ಆದರೆ ಸಾಮಾನ್ಯ ನು ………ಇಷ್ಟು ಕಾಲ ಅಸಾಧ್ಯ ಇತ್ತು. ಅಸಾಧ್ಯವಾದುದು ಸಾಧ್ಯವೆಂದು ತೋರಿಸಿದರು ಸಚಿವರು. ಉಷೆ ಹೊರಳಿ ನಿಶೆ ಮರಳಿ ಬರುವಿರೆ ದೇದೀಪ್ಯವಾಗಿ ಕಂಗೊಳಿಪ ನಗರಿ. ಕರಿಕಲ್ಲ ನಗರಿ ಮಹಾನ್ ದಿಗ್ಗಜರ ಸಮ್ಮೇಳದಿ ಸಾರ್ಥಕಗೊಂಡ ಪರಿ. ನಿರಂತರ ಮಾ.10 ನೇ ತಾರೀಕಿನಿಂದ ಮಾ. 20 ರವರೆಗೆ ವೇದಿಕೆಯ ರಂಗೇರಿಸಿದ ಕಲಾವಿದರು. ಇದೆಲ್ಲದರ ನಡುವೆ ವರುಣ ನಾನೂ ಒಮ್ಮೆ ಬರುವೆ ಎಂದು ಹಟದೊಳು ಬಂದು ತಂಪೆರೆದರೂ ತೊಂದರೆಯಾದುದು ಸತ್ಯ.
ಅನುಶ್ರೀ ಬರುವಳೆಂದು ಅವಳ ಸಿರಿಮೊಗವ ಕಾಣಲೆಂದು ಕಾದಿದ್ದ ಹೃದಯಗಳೆಷ್ಟೋ, ಅವಳು ಬಾರದೆ ಶಪಿಸಿದವರೆಷ್ಟೋ, ಅಂತೂ ಮರೀಚಿಕೆಯಾಗೇ ಉಳಿದಳು ಕುಡ್ಲದ ಕುವರಿ. ಇದೆಲ್ಲದರ ನಡುವೆ ಸಂಧ್ಯಾ ಕಾಲ ಬೆಂಗಳೂರನ್ನು ನೆನಪಿಸುವಂತಿತ್ತು ವಾಹನ ದಟ್ಟಣೆಯಿಂದ ೨ ನಿಮಿಷದ ದಾರಿ ಕ್ರಮಿಸಲು ಸುತ್ತು ಬಳಸಿನಿಂದ ತೆಗೆದುಕೊಂಡದ್ದು ಭರ್ತಿ ೪೫ ನಿಮಿಷ. ಅಂದರೆ ಅದಾವ ಮಟ್ಟವಿತ್ತು ಕಲ್ಪಿಸಿ. ನಶೆ ಏರದೆ ನಿಶಿಯೊಳು ಚರಿಪ ಕೆಲವರು. ಆ ಜನದಟ್ಟಣೆಯ ನಿವಾರಿಸಲು ಅದೆಷ್ಟು ಆರಕ್ಷಕರು ಆವಿಶ್ರಾಂತವಾಗಿ ದುಡಿದರು. ಅಲ್ಲಿ ಸಿಕ್ಕ ಕೆಲವರು ಮೇಘ ..ಮಂಜು …ಹೋ ಆ ಮರದ ಕೆಳಗೆ ಕುಳಿತಿರುವ ಗುಂಡು ಗುಂಡಾದ ಕೆನ್ನೆಯ ಸವಿತ .. ನಸು ನಗೆ ಬೀರಿ ಮೊಗವರಳಿಸಿ ಆಡುವ ಮಾತೇ ಅಂದ. ಎಲ್ಲಕ್ಕಿಂತ ಹೆಚ್ಚಿನ ಒತ್ತು ಸ್ವಛ್ಛತೆಗೆ ಕೊಟ್ಟದ್ದು. ಅದಕ್ಕೊಂದು ಸಲಾಂ ಹೇಳಲೇ ಬೇಕು. ಅಲ್ಲಲ್ಲಿ ಕಸದ ಬುಟ್ಟಿಗಳು ಸ್ವಯಂ ಸೇವಕರು. ೧೯ ರ ಸಂಜೆ ಅದೆಂತಹ ಜನ ಸಂದೋಹ ಅಗಣಿತ ಅನಂತ ಅಸಂಖ್ಯಾತ ಅಭೂತಪೂರ್ವ.
ಇನ್ನು ನಿಗದಿತ ೨೦ ರ ತಾರೀಕು ನಾಳೆಯಿಂದ ಕಾರ್ಯಕ್ರಮ ಇಲ್ಲ ಅನ್ನುವ ಭಾವದಿ ಬಂದು ಕಾರ್ಯಕ್ರಮ ಸವಿದರೂ ಸುಡುಮದ್ದು ಬಾನಂಗಳದಿ ಚಿತ್ತಾರ ಹೊರಡಿಸಿ ಹೃದಯದೊಳು ತೆರೆಯ ನಿಟ್ಟುಸಿರ ಬಿಟ್ಟಿತು. ಸಂಗೀತದಬ್ಬರಕೆ ಕುಣಿದು ಕುಪ್ಪಳಿಸಿದರು. ಶಾಸಕರನು ಧನ್ಯತೆಯ ಭಾವದಿ ಹೆಗಲಿಗೇರಿಸಿದರು. ವಿಧೇಯ ವಿದ್ಯಾರ್ಥಿಗಳಂತೆ ಶಾಸಕರ ಅಪ್ಪಣೆಯ ಪಾಲಿಸಿ ಎಲ್ಲರೂ ಹೊರಡುವ ಸಮಯ ಸ್ವಚ್ಛತಾ ಕಾರ್ಯಕ್ರಮದಲಿ ತೊಡಗಿ ಭಾರವಾದ ಹೆಜ್ಜೆಯನಿರಿಸಿ ಸರಿದು ಹೋದರು.
ಮಂಗಳವಾಯಿತು ಕಾರ್ಕಳ ಉತ್ಸವ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!