Thursday, May 26, 2022
spot_img
Homeಸಾಹಿತ್ಯ/ಸಂಸ್ಕೃತಿಸಚಿವ ಸುನಿಲ್‌ ಕುಮಾರ್‌ ಅವರ ಕಲ್ಪನೆಯ ಪ್ರತಿರೂಪ ಕಾರ್ಕಳ ಉತ್ಸವ

ಸಚಿವ ಸುನಿಲ್‌ ಕುಮಾರ್‌ ಅವರ ಕಲ್ಪನೆಯ ಪ್ರತಿರೂಪ ಕಾರ್ಕಳ ಉತ್ಸವ

✒️ಅರುಣ್‌ ಮಾಂಜ

ಸರ್ವಧರ್ಮಗಳ ನೆಲೆಬೀಡು, ಸೌಹಾರ್ದತೆ ಮೆರೆದ ಪಾಂಡ್ಯ ನಗರಿ ಕಾರ್ಕಳದಲ್ಲಿ ಇದೀಗ ಇತಿಹಾಸದ ವೈಭವ, ಕಲಾತಂಡಗಳ ಪ್ರದರ್ಶನದ ಮೇಳೈಕೆ, ಸಂಗೀತ, ವೈವಿಧ್ಯಮಯ ಕಾರ್ಯಕ್ರಮಗಳ ರಸದೌತಣ, ಜೊತೆಗೆ ಸಂಭ್ರಮದ ಹೊನಲು ತೇಲುತ್ತಿರುವ ವಾತಾವರಣ ನಿರ್ಮಾಣವಾಗುವ ಮೂಲಕ ಹೊಸ ಇತಿಹಾಸವೊಂದನ್ನು ಸೃಷ್ಟಿಸಿದೆ.

ಕೊರೊನಾದಿಂದ ಜರ್ಜರಿತವಾಗಿ ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಜನತೆ ಸಂಭ್ರಮೊಲ್ಲಾಸದಿಂದ ಮಿಂದೆಳುವಂತೆ ಮಾಡಿದೆ. ಮನೆಯಂಗಳದ ಮೇಲೆ ಸದ್ದು ಮಾಡುತ್ತಾ ಹಾರಾಡುತ್ತಿರುವ ಹೆಲಿಕಾಪ್ಟರ್‌, ಮಕ್ಕಳಿಂದ ಹಿಡಿದು ವಯೋವೃದ್ಧರ ಕಣ್ಣುಗಳನ್ನು ಆಗಸದತ್ತ ನೋಡುವಂತೆ ಮಾಡಿದೆ. ಇದನ್ನು ನೋಡುತ್ತಾ ತಾಯಿಯ ಕೈ ತುತ್ತು ಮಗುವಿನ ಬಾಯಿಗೆ ಅರಿವಿಲ್ಲದೇ ಸೇರಿದೆ. ಸಾವಿರಾರು ಮಂದಿ ಲೋಹದ ಹಕ್ಕಿಯ ಮೇಲೆ ಕುಳಿತು ಧನ್ಯರಾಗಿದ್ದಾರೆ. ವರ್ಣರಂಜಿತ ವಿದ್ಯುತ್ ದೀಪದ ಬಳ್ಳಿಗಳನ್ನು ತನ್ನ ಮೈಗೆ ಸುತ್ತಿಕೊಂಡಂತೆ ಕಂಡುಬರುವ ಕಾರ್ಕಳ ನಗರಿ ಬೆಳಕಿನ ಚಿತ್ತಾರದಿಂದ ಸ್ವರ್ಗವೇ ಧರೆಗಿಳಿದಂತೆ ಕಂಗೊಳಿಸುವಂತಾಗಿದೆ.

ಒಂದಕ್ಕೊಂದು ಸ್ಪರ್ಧೆಯನ್ನು ಒಡ್ಡುವಂತೆ ರಸ್ತೆಗಳಲ್ಲಿ ನಿಂತಿರುವ ಸ್ವಾಗತ ದ್ವಾರಗಳು, ದೀಪಗಳಿಂದ ಕಂಗೊಳಿಸುತ್ತಿರುವ ಗೋಮಟೇ‍ಶ್ವರ ಬೆಟ್ಟ, ಚತುರ್ಮುಖ ಬಸದಿ, ಮಹಾತ್ಮರ, ಸಾಧಕರ ದೀಪಾಂಲಕಾರದ ಪ್ರತಿಮೆ, ಸಂಸ್ಕøತಿ ಸಂಪ್ರದಾಯ ಪರಂಪರೆಯನ್ನು ಬಿಂಬಿಸುವ ವಸ್ತು ಪ್ರದರ್ಶನ, ಬಾಯಲ್ಲಿ ನೀರೂರಿಸುವ ವಿವಿಧ ಖಾದ್ಯಗಳ ಪಾಕಶಾಲೆ, ಇತಿಹಾಸ ಪ್ರಸಿದ್ಧ ಶಾಂತತೆಯ ರಾಮಸಮುದ್ರದಲ್ಲಿ ಕಲರವ ಸೃಷ್ಟಿಸಿದ ಬೋಟಿಂಗ್, ಮೆಹೆಂದಿ ಪರಿಕಲ್ಪನೆ ಎಲ್ಲವೂ ಮನಮೋಹಕ. ಸ್ಮರಣೀಯ.

ಕೋಟಿ ಚೆನ್ನಯ ಥೀಮ್‌ ಪಾರ್ಕ್‌ನಲ್ಲಿ ತುಳುನಾಡಿನ ಸಂಸ್ಕೃತಿ, ಅಂದಿನ ಜೀವನ ಪದ್ಧತಿ ಸಾರುವ ಕಲಾಕೃತಿಗಳು, ಕಾರ್ಕಳದ ಸಾಧಕರ ಹೆಸರಲ್ಲಿ ನಿರ್ಮಾಣವಾದ ಬೃಹತ್‌ ಆಕರ್ಷಕ ವೇದಿಕೆಗಳು, ಬಾನೆತ್ತರಕ್ಕೆ ನಿಂತಿರುವ ಅಮ್ಯೂಸ್‍ಮೆಂಟ್ ಪಾರ್ಕ್, ಚಲನಚಿತ್ರೋತ್ಸವ, ಚಿತ್ರಸಂತೆ, ಬಾನಂಗಳದಲ್ಲಿ ಚಿತ್ತಾರ ಮೂಡಿಸಿದ ಗಾಳಿಪಟ, ಆಕರ್ಷಕ ಸಿಡಿಮದ್ದು ಪ್ರದರ್ಶನ, ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಂಡ ಮುದ್ದು ಮುದ್ದು ನಾಯಿಮರಿಗಳು, ಕಣ್ಣಿಗೆ ಇಂಪು ನೀಡುವ ಫಲ ಪುಷ್ಪ ಹಾಗೂ ಗೂಡುದೀಪ ಪ್ರದರ್ಶನ, ರಾಜ ಬೀದಿಯ ನೆನಪನ್ನು ಮರುಕಳಿಸುವಂತೆ ಮಾಡಿದ ಕುದುರೆ ಟಾಂಗಾಗಳು ಉತ್ಸವಕ್ಕೆ ವಿಶೇಷ ಮೆರುಗು ನೀಡಿದೆ.

ವಸ್ತು ಪ್ರದರ್ಶನ ಬದಿಯಲ್ಲಿ ಕೇಳಿಬರುತ್ತಿದ್ದ ಡಿ.ಜೆ. ಯುವಕರ ಆಕರ್ಷಕ ತಾಣವಾಗಿತ್ತು. ಡಿಜೆ ಸೌಂಡ್‌ಗೆ ಯುವಕರು ಹುಚ್ಚೆದ್ದು ಕುಣಿಯುತ್ತಿದ್ದ ದೃಶ್ಯ ಕಂಡುಬರುತ್ತಿತ್ತು. ಐತಿಹಾಸಿಕ ಉತ್ಸವ ಮೆರವಣಿಗೆ, ಅರಣ್ಯ ಇಲಾಖೆಯವರು ಅದ‍್ಭುತವಾಗಿ ನಿರ್ಮಿಸಿದ ಮಾದರಿ ಗ್ರಾಮ ಎಲ್ಲವೂ ಸುಂದರ, ವಿನೂತನ.

ಸಚಿವ ಸುನಿಲ್‌ ಕುಮಾರ್‌ ಅವರ ಕಲ್ಪನೆಯ ಪ್ರತಿರೂಪ ಕಾರ್ಕಳ ಉತ್ಸವ. ಯಾವುದೇ ಕಾರ್ಯವನ್ನು ಅತ್ಯಂತ ಶಿಸ್ತುಬದ್ಧವಾಗಿ, ಅದ್ಧೂರಿಯಾಗಿ ಸಂಘಟಿಸುವ ಛಾತಿಯಿರುವ ಸುನಿಲ್‌ ಕುಮಾರ್‌ ಅವರ ನೇತೃತ್ವದಲ್ಲಿ ಕಾರ್ಕಳ ಉತ್ಸವ ಅತ್ಯಂತ ಯಶಸ್ವಿಯಾಗಿ ಮುನ್ನಡೆದಿದೆ. ಅತಿ ಕಡಿಮೆ ಅವಧಿಯಲ್ಲಿ ವೈಭವದ ಉತ್ಸವ ನಡೆಯುವುದರ ಮೂಲಕ ಶಿಲ್ಪಕಾಶಿ ಕಾರ್ಕಳದ ಹೆಸರು, ಸಂಸ್ಕೃತಿ, ಕಲೆ ನಾಡಿನಾದ್ಯಂತ ಪಸರಿಸುವಂತಾಗಿದೆ.

ಮೆಚ್ಚುಗೆ ಮಾತು
ಮೈಸೂರು ದಸರಾ, ಹಂಪಿ ಉತ್ಸವದಂತೆ ಕಾರ್ಕಳ ಉತ್ಸವವೂ ವಿಜ್ರಂಭಣೆಯಿಂದ ನಡೆದಿರುವ ಕುರಿತು ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಅತಿಥಿ ಗಣ್ಯರೂ ಇಂತಹ ಉತ್ಸವ ಮುಂದಿನ ಉತ್ಸವಗಳಿಗೆ ಮಾದರಿ ಎಂದಿದ್ದಾರೆ. ಖ್ಯಾತ ಗಾಯಕ ವಿಜಯ ಪ್ರಕಾಶ್‌, ಗಂಗಾವತಿ ಪ್ರಾಣೇಶ್‌, ಗುರುಕಿರಣ್‌ ಸೇರಿದಂತೆ ಹಲವಾರು ಕಲಾವಿದರು ಇಲ್ಲಿನ ವ್ಯವಸ್ಥೆ, ಸಚಿವ ಸುನಿಲ್‌ ಕುಮಾರ್‌ ಅವರ ಸಂಘಟನಾ ಚತುರತೆ, ಕ್ರೀಯಾಶೀಲತೆ, ಶಿಸ್ತಿನ ವೀಕ್ಷಕರ ಕುರಿತು ಒಳ್ಳೆಯ ಮಾತುಗಳನ್ನಾಡಿದ್ದಾರೆ.

ಯಾವುದೇ ಗೊಂದಲಗಳಿಗೆ ಎಡೆಮಾಡದೇ ಸಮರ್ಥವಾಗಿ, ಹಗಲಿರುಳು ಶ್ರಮಿಸಿದ ಆರಕ್ಷಕ ಸಿಬ್ಬಂದಿ ಹಾಗೂ ಉತ್ಸಾಹಿ ಸ್ವಯಂಸೇವಕರ ತಂಡದ ಕಾರ್ಯ ಶ್ಲಾಘನೀಯವಾದುದು. ಮೈಸೂರು ದಸರಾ ನಾಡಹಬ್ಬವಾದರೆ ಕಾರ್ಕಳ ಉತ್ಸವ ನಮ್ಮ ಹಬ್ಬವಾಗಿ ಜನಮಾನಸದಲ್ಲಿ ಅಚ್ಚಳಿಯದೆ ನಿಂತಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಕಾರ್ಕಳ ಪ್ರಮುಖ ಆಕರ್ಷಣ ಕೇಂದ್ರವಾಗಿ ರೂಪಿಸುವಲ್ಲೂ ಈ ಉತ್ಸವ ಅಗಾಧ ಪರಿಣಾಮ ಬೀರಿದೆ. ಒಟ್ಟಾರೆಯಾಗಿ ಭಾಷೆ ಸಂಸ್ಕøತಿ ಕಲೆಯ ಸಂಭ್ರಮ ಕಾರ್ಕಳ ಉತ್ಸವ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿ ಸ್ವರ್ಣ ಕಾರ್ಕಳದ ಪರಿಕಲ್ಪನೆಯತ್ತ ದೃಢ ಹೆಜ್ಜೆಯಿಟ್ಟಿದೆ.

ಅರುಣ್‌ ಮಾಂಜ

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!