Tuesday, July 5, 2022
spot_img
Homeಸಾಹಿತ್ಯ/ಸಂಸ್ಕೃತಿಕಗ್ಗದ ಸಂದೇಶ - ಭಾವಸ್ಪಂದನೆಯ ತುಡಿತ…

ಕಗ್ಗದ ಸಂದೇಶ – ಭಾವಸ್ಪಂದನೆಯ ತುಡಿತ…

“ಹರಿಗೆ ನಿನ್ನನುರಾಗವೆಲ್ಲವನು ಸಲ್ಲಿಸೆನೆ|
ಮರುನುಡಿಯ ನುಡಿವನೇನ್ ಒಡಲ ತೋರದನು?||
ಪರಿತಪಿಸುವುದು ಜೀವ ಜೀವಸರಸವನೆಳಸಿ|
ನರಧರ್ಮಸೂಕ್ಷ್ಮವಿದು- ಮಂಕುತಿಮ್ಮ”||.

ಭಗವಂತನಿಗೆ ನಾವು ನಮ್ಮ ಗಾಢವಾದ ಭಕ್ತಿಯನ್ನು ಸಲ್ಲಿಸಿದರೂ ಅವನು ಪ್ರತ್ಯುತ್ತರ ಕೊಡುವುದಿಲ್ಲ. ನಮ್ಮ ಮುಂದೆ ಕಾಣಿಸಿಕೊಳ್ಳುವುದೂ ಇಲ್ಲ. ಈ ಮನುಷ್ಯ ಜೀವ ತನ್ನ ಹಾಗೆ ಇರುವ ಇನ್ನೊಂದು ಮನುಷ್ಯ ಜೀವದ ಸ್ವಂದನೆಯನ್ನು, ಸರಸ ಸಲ್ಲಾಪವನ್ನು ಬಯಸುತ್ತದೆ ಎಂದು ಮಾನ್ಯ ಡಿವಿಜಿ ಯವರು ಮಾನವ ಧರ್ಮದ ಸೂಕ್ಷ್ಮತೆಯನ್ನು ಈ ಮುಕ್ತಕದಲ್ಲಿ ಚಿತ್ರಿಸಿದ್ದಾರೆ.
ಭಗವಂತನಲ್ಲಿ ನಮ್ಮ ಎಲ್ಲಾ ಭಾವನೆಗಳನ್ನು ಮುಕ್ತವಾಗಿ ಭಕ್ತಿಯಿಂದ ನಿವೇದಿಸಿಕೊಳ್ಳುತ್ತೇವೆ. ನಮ್ಮ ಕಷ್ಟಗಳನ್ನು ಮತ್ತು ಬಯಕೆಗಳನ್ನು ಹೇಳಿಕೊಳ್ಳುತ್ತೇವೆ. ಆದರೆ ಎಂದೂ ಅವನು ಪ್ರತಿನುಡಿಯ ನುಡಿದಿಲ್ಲ. ಪ್ರತ್ಯಕ್ಷವಾಗಿ ನಮ್ಮೆದುರು ಬಂದು ನಿಂತಿಲ್ಲ. ನಮಗೆ ಸಮಾಧಾನದ ಮಾತುಗಳನ್ನು ಹೇಳಿ‌ ಸಂತೈಸಿಲ್ಲ. ಆದಕ್ಕಾಗಿಯೇ ಈ ಮನುಷ್ಯ ಜೀವ ತನ್ನ ಧ್ವನಿಗೆ ಮರುಧ್ವನಿಗೈವ ಹಾಗೂ ಭಾವನೆಗಳಿಗೆ ಸ್ಪಂದಿಸುವ ನಮ್ಮ ಹಾಗೆ ಮನುಷ್ಯ ರೂಪದಲ್ಲಿರುವ ಇನ್ನೊಂದು ಜೀವವನ್ನು ಇಷ್ಟಪಡುತ್ತದೆ. ಆದ್ದರಿಂದ ನಾವು ದೇವರ ಭಕ್ತಿಯೊಂದಿಗೆ ಮನುಷ್ಯ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ಜೀವಾತ್ಮ ಮತ್ತು ಪರಮಾತ್ಮ ಬೇರೆ ಅಲ್ಲ. ಒಂದು ಜೀವಾತ್ಮ ತನ್ನ ಹಾಗೆ ಇರುವ ಇನ್ನೊಂದು ಆತ್ಮದ ಪ್ರೀತಿಯನ್ನು ಮತ್ತು ಸಾಂತ್ವನವನ್ನು ಬಯಸುತ್ತದೆ. ದೇವರ ಭಕ್ತಿಗಿಂತಲೂ, ಮನುಷ್ಯ ಪ್ರೀತಿ ಮುಖ್ಯ ಎನ್ನುವ ಡಿವಿಜಿಯವರು ಎಲ್ಲರೊಳಗೊಂದಾಗು ಎಂದು ನಮಗೆ ಆದೇಶಿಸಿದ್ದಾರೆ.
“ಇವನಿಂದ ಅವನಿಂದ ನಾ ಭಿನ್ನ ಎನ್ನದಿರೊ! ಪ್ರತ್ಯೇಕ ಭಾವನೆಗೆ ಅಂಟಿ ನಿಲ್ಲದಿರೊ! ಎಲ್ಲ ನಮ್ಮವರೆನ್ನು, ನೀ ವಿಶಿಷ್ಟನೊ ಆಗ! ಎಲ್ಲರೊಳಗೊಂದಾಗು-ಮುದ್ದುರಾಮ”| ಎಂಬ ಕವಿ ಕೆ. ಶಿವಪ್ಪನವರ ಮಾತಿನಂತೆ ನಮ್ಮ ಆಕಾರದಲ್ಲಿ ಭಿನ್ನತೆ ಇರಬಹುದು ಆದರೆ ನಮ್ಮೊಳಗಿನ ಭಾವ ಒಂದೆ. ಅದಕ್ಕಾಗಿಯೇ ಪರಸ್ಪರ ಸೆಳೆತಕ್ಕೊಳಗಾಗುವುದು. ನಾವು ಎಷ್ಟೇ ಮೊರೆಯಿಟ್ಟರೂ ಹರಿ ತಿರುಗಿ ಮಾತನಾಡಲಾರ, ಕಣ್ಣೆದುರು ಬಂದು ನಿಲ್ಲಲಾರ. ಹೀಗಾಗಿ ನಮ್ಮೆದುರು ಬಂದು ನಮ್ಮ ಧ್ವನಿಗೆ ಪ್ರತಿಧ್ವನಿಸುವ, ನಮ್ಮ ಭಾವಕ್ಕೆ ಪ್ರತ್ಯಕ್ಷವಾಗಿ ಸ್ಪಂದಿಸುವ ನಮ್ಮ ಹಾಗೆ ದೇಹ ಧರಿಸಿದ ಇನ್ನೊಂದು ಜೀವದತ್ತ ಸೆಳೆತಕ್ಕೆ‌ ಒಳಗಾಗುವುದು. ಯಾರು? ಯಾವಾಗ? ಏಕೆ ? ಹೇಗೆ? ಪರಸ್ಪರ ಆಕರ್ಷಿತರಾಗುತ್ತಾರೆ ಎಂದು ಹೇಳಲಾಗದು. ಇದನ್ನೇ ಡಿವಿಜಿ ಯವರು ‘ನರಧರ್ಮಸೂಕ್ಷ್ಮವಿದು’ ಎಂದಿರುವುದು. ಮನುಷ್ಯ ಗುಣದ ಈ ಸೂಕ್ಷ್ಮತೆಯನ್ನು ಅರ್ಥಮಾಡಿಕೊಂಡು ಮಾನವೀಯ ಬಾಂಧವ್ಯಕ್ಕೆ ಗೌರವವನ್ನು ಕೊಟ್ಟು ಅದರ ಪಾವಿತ್ರ್ಯತೆಯನ್ನು ಕಾಯ್ದುಕೊಂಡಾಗಲೇ ಜೀವನ ಸಾರ್ಥಕವಾಗುವುದಲ್ಲವೇ?

ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಅಧ್ಯಕ್ಷರು, ಕಸಾಪ ಕಾರ್ಕಳ ಘಟಕ.











---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!