ಪೊಲೀಸ್ ಇಲಾಖೆಯು ಸರಕಾರದ ವಿವಿಧ ಇಲಾಖೆಗಳ ಪೈಕಿ ಒಂದಾಗಿರುತ್ತದೆ. ಈ ಇಲಾಖೆಯು ಸಮಾಜದ ಶಾಂತಿ ಮತ್ತು ಕಾನೂನು ಪಾಲನೆಗಳ ನಿರ್ವಹಣೆ ಇತ್ಯಾದಿ ಮಹತ್ವಪೂರ್ಣ ಜವಾಬ್ದಾರಿಯನ್ನು ಹೊಂದಿರುವ ಸರಕಾರದ ಅತ್ಯಂತ ಪ್ರಮುಖವಾದ ಇಲಾಖೆಯಾಗಿರುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ಪೊಲೀಸ್ ಅಧಿನಿಯಮದ ಪ್ರಕಾರ ಪೊಲೀಸ್ ಅಧಿಕಾರಿಗಳು ಕೆಳಗೆ ವಿವರಿಸಿದ ಕರ್ತವ್ಯಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಬೀದಿಯಲ್ಲಿರುವ ಸಮಾಜದ ದುರ್ಬಲ ಅಥವಾ ಅಸಹಾಯಕ ವ್ಯಕ್ತಿಗಳಿಗೆ ತನ್ನಿಂದ ಸಾದ್ಯವಾದಷ್ಟು ರೀತಿಯ ಎಲ್ಲಾ ಸಹಾಯ ಮಾಡುವುದು ಹಾಗೂ ಅಪಾಯಕಾರಿಯಾಗಿ ಅಥವಾ ಮಾನಸಿಕ ನಿಯಂತ್ರಣವನ್ನು ಕಳೆದುಕೊಂಡು ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಅಸಮರ್ಥರಾಗಿ ಅಲೆದಾಡುತ್ತಿರುವ ವ್ಯಕ್ತಿಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳುವುದು. ಈ ರೀತಿಯಾಗಿ ವಶಕ್ಕೆ ಪಡೆದ ವ್ಯಕ್ತಿಯು ಗಾಯಗೊಂಡಿದ್ದರೆ ಅಥವಾ ಮಾನಸಿಕ ಅಥವಾ ಶಾರೀರಿಕವಾಗಿ ಅಸ್ವಸ್ಥನಾಗಿದ್ದರೆ ಅಂತಹ ವ್ಯಕ್ತಿಗೆ ಅವಶ್ಯಕವಿರುವ ವೈದ್ಯಕೀಯ ಮತ್ತಿತರ ಅವಶ್ಯಕ ಸಹಾಯವನ್ನು ದೊರಕಿಸಲು ತಕ್ಕ ವ್ಯವಸ್ಥೆಯನ್ನು ಕೂಡಲೇ ಕೈಗೊಳ್ಳುವುದು ಮತ್ತು ಅಂತಹ ವ್ಯಕ್ತಿಗಳನ್ನು ಪಹರೆ ಮಾಡುವಾಗ ಅಥವಾ ಇತರ ಕಡೆಗೆ ಕರೆದೊಯ್ಯುವಾಗ ಆತನ ಆರೋಗ್ಯ ಮತ್ತು ರಕ್ಷಣೆಯ ಸ್ಥಿತಿಯನ್ನು ಗಮನದಲ್ಲಿಡುವುದು. ಮತ್ತು ಆತನಿಗೆ ಊಟ ಹಾಗೂ ವಸತಿಯ ಬಗ್ಗೆ ಸೂಕ್ತ ವ್ಯವಸ್ಥೆ ಮಾಡುವುದು. ಪೊಲೀಸ್ ವಶದಲ್ಲಿರುವ ಸಂದರ್ಭದಲ್ಲಿ ಅಂತಹ ವ್ಯಕ್ತಿಯೊಂದಿಗೆ ಅನಾವಶ್ಯಕವಾಗಿ ಉದ್ಘಟತನದಿಂದ ವರ್ತಿಸದಿರುವುದು ಹಾಗೂ ಅನಾವಶ್ಯಕವಾಗಿ ಕಿರುಕುಳವನ್ನು ಕೊಡದಿರುವುದು. ಹೆಂಗಸರು ಹಾಗೂ ಮಕ್ಕಳೊಂದಿಗಿನ ವರ್ತನೆಯಲ್ಲಿ ಸಭ್ಯತೆಯನ್ನು ಪಾಲಿಸುವುದು, ಯೋಗ್ಯ ಸೌಮ್ಯತೆಯಿಂದ ನಡೆದುಕೊಳ್ಳುವುದು. ಸಾರ್ವಜನಿಕರಿಗೆ ಯಾವುದೇ ಅಪಘಾತ ಅಥವಾ ಅಪಾಯವನ್ನು ತಪ್ಪಿಸಲು ತನ್ನ ಎಲ್ಲಾ ಪ್ರಯತ್ನ ಮಾಡುವುದು. ಬೆಂಕಿಯಿಂದ ಸಾರ್ವಜನಿಕ ಜೀವ ಅಥವಾ ಸ್ವತ್ತಿಗೆ ಯಾವುದೇ ಹಾನಿ ಅಥವಾ ನಷ್ಟವಾಗುವುದನ್ನು ತಡೆಯಲು ಸಾಧ್ಯವಿದ್ದ ಎಲ್ಲಾ ಪ್ರಯತ್ನಗಳನ್ನು ಮಾಡುವುದು. ಸಾರ್ವಜನಿಕ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿಯಂತ್ರಿಸಿ ಸಾರ್ವಜನಿಕರು ಸಂಚಾರಿ ನಿಯಮವನ್ನು ಪಾಲಿಸುವಂತೆ ಕ್ರಮ ಕೈಗೊಳ್ಳುವುದು. ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಜಾತ್ರೆ, ಸಂತೆ, ಧಾರ್ಮಿಕ ಮತ್ತಿತರ ಸಾರ್ವಜನಿಕ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು.

ಮೊ: 9845232490/ 9611682681