ಕಾರ್ಕಳ : ಕಾರ್ಕಳ ಉತ್ಸವದ ಆರನೇ ದಿನವಾದ ಮಾ. 16ರಂದು ಸಚಿವ ಸುನಿಲ್ ಕುಮಾರ್ ಅವರ ಕರೆಯಂತೆ ಕಾರ್ಕಳ ಹೆಬ್ರಿ ಉಭಯ ತಾಲೂಕಿನಾದ್ಯಂತ ಜನತೆ ಮೆಹೆಂದಿ ಹಚ್ಚಿ ಸಂಭ್ರಮಪಟ್ಟರು. ವರ್ಧಮಾನ್ ವಿದ್ಯಾಸಂಸ್ಥೆಯಲ್ಲಿ ಸಚಿವ ಸುನಿಲ್ ಕುಮಾರ್ ಅವರ ಪತ್ನಿ ಪ್ರಿಯಾಂಕ ಸುನಿಲ್ ಕುಮಾರ್ ಮಕ್ಕಳ ಕೈಗೆ ಮೆಹೆಂದಿ ಹಚ್ಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ವರ್ಧಮಾನ್ ಶಿಕ್ಷಣ ಸಂಸ್ಥೆಯಲ್ಲಿ ನಾಡಿನ ಕಲೆ, ಸಂಸ್ಕೃತಿ, ರಾಷ್ಟ್ರೀಯ ಮತ್ತು ಧಾರ್ಮಿಕ ಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಈ ಮೂಲಕ ಎಳವೆಯಲ್ಲೇ ನಮ್ಮ ಸಂಸ್ಕೃತಿ ಕುರಿತು ಅರಿವು ಮೂಡಿಸುವ ಕಾರ್ಯವಾಗುತ್ತಿರುವುದು ಉತ್ತಮ ವಿಚಾರವೆಂದರು.
ಚೈತನ್ಯ ತುಂಬುವ ಕಾರ್ಯ
ವರ್ಧಮಾನ್ ವಿದ್ಯಾಸಂಸ್ಥೆಯ ಸಂಚಾಲಕಿ ಶಶಿಕಲಾ ಹೆಗ್ಡೆ ಮಾತನಾಡಿ, ಸ್ವರ್ಣ ಕಾರ್ಕಳದ ಕಲ್ಪನೆಯೊಂದಿಗೆ ಹೊಸತನ ಮೂಡಿಸಿದ ಸಚಿವ ಸುನಿಲ್ ಕುಮಾರ್ ಇದೀಗ ಕಾರ್ಕಳ ಉತ್ಸವದ ಮೂಲಕ ಇಡೀ ರಾಜ್ಯವೇ ಕಾರ್ಕಳದತ್ತ ನೋಡುವಂತೆ ಮಾಡಿದ್ದಾರೆ. ಅದ್ಧೂರಿ ಉತ್ಸವ ಆಯೋಜಿಸುವ ಮೂಲಕ ಕೊರೊನಾ ಕಾರಣದಿಂದ ಜಿಡ್ಡುಗಟ್ಟಿದ ವಾತಾವರಣದಲ್ಲಿ ಚೈತನ್ಯ, ಉತ್ಸಾಹ ತುಂಬುವ ಕಾರ್ಯವಾಗಿದೆ ಎಂದರು.
ವರ್ಧಮಾನ್ ಶಿಕ್ಷಣ ಸಂಸ್ಥೆಯ ಕುಮಾರಯ್ಯ ಹೆಗ್ಡೆ, ಜಗದೀಶ್ ಹೆಗ್ಡೆ, ಗುರು ಸ್ಟುಡಿಯೋ ಮಾಲಕ ಶರತ್ ಕಾನಂಗಿ, ನಮ್ಮ ಕಾರ್ಲ ಚಾನೆಲ್ ಮುಖ್ಯಸ್ಥರಾದ ಅರ್ಚನಾ ಶೆಟ್ಟಿ, ರಕ್ಷಾ ಶೆಟ್ಟಿ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಚಿತ್ರ ಪೈ, ಸನ್ನಿಧಿ, ಸುಮತಿ ಪ್ರಾರ್ಥಿಸಿದರು. ಶಿಕ್ಷಕಿ ಮೀನಾಕ್ಷಿ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

