ಕಾರ್ಕಳ : ಕಾರ್ಕಳ ಉತ್ಸವ -2022 ಕರ್ನಾಟಕ ಕರಾವಳಿಯ ವಿಶೇಷ ಉತ್ಸವ.
ಇದು ಭಾಷೆ ಕಲೆ ಸಂಸ್ಕೃತಿ ಗಳ ಸಂಭ್ರಮ ಇದೀಗ ಕಡಲ ತಡಿಯ ಶಾಂತ ಅಲೆಗಳಂತೆ ಬೀಸುವ ತಂಗಾಳಿಯಂತೆ ತೇಲಿ ಬರುವ ಹತ್ತು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರಿಗೂ ಮುದ ನೀಡುತ್ತಿದೆ.

ಕಾರ್ಕಳ ಕಲಾ ಪರಂಪರೆಯನ್ನು ಬಿಂಬಿಸಲು ಉತ್ಸವದ ಯಶಸ್ಸಿಗಾಗಿ ಉತ್ಸಾಹದಿಂದ ಸೃಜನಶೀಲ ಉತ್ಸಾಹಿ ಮನಸ್ಸುಗಳು ನಿತ್ಯವೂ ಸರ್ವರನ್ನು ಸ್ವಾಗತಿಸುತ್ತಿದ್ದಾರೆ.
ನಿತ್ಯ ನಿರಂತರ ವಿವಿಧ ಜವಾಬ್ದಾರಿಗಳಲ್ಲಿ ತೊಡಗಿ ಯಶಸ್ವಿಗೊಳಿಸುತ್ತಿದ್ದಾರೆ. ಇದಕ್ಕೆಲ್ಲ ಕಳಶಪ್ರಾಯರಾದವರು ಕರ್ನಾಟಕ ಸರಕಾರದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶ್ರೀ ವಿ.ಸುನೀಲ್ ಕುಮಾರ್ ಅವರು.
ಇದೊಂದು ಕಾರ್ಕಳದ ಜನತೆಗೆ ಸಂಭ್ರಮವನ್ನು ಸವಿಯುವ ಒಂದು ಸುವರ್ಣಾವಕಾಶ.
ಇಡೀ ರಾಜ್ಯದಲ್ಲೇ ವಿನೂತನವೆನಿಸುವ ಅಂತೆಯೇ ದೇಶವ್ಯಾಪಿಯಾಗಿ ಕಾರ್ಕಳದ ಸಾಂಸ್ಕೃತಿಕ ಪರಂಪರೆಯನ್ನು ಹಾಗೂ ಕಾರ್ಕಳದಲ್ಲಿ ಅಭಿವೃದ್ದಿಗೊಂಡ ಜನಪರ ಕಾರ್ಯಕ್ರಮಗಳನ್ನು ಮಾದರಿಯಾಗಿಸುವ ಕಾರ್ಯಕ್ರಮ ಇದಾಗಿದೆ. ಹಾಗಾಗಿ ಇದೀಗ ಕಾರ್ಕಳ ಉತ್ಸವಕ್ಕೆ ದೂರದ ಊರುಗಳಿಂದಲೂ, ಬೇರೆ ಬೇರೆ ರಾಜ್ಯಗಳಿಂದಲೂ ದೂರದ ವಿದೇಶದಲ್ಲಿರುವವರು ಕೂಡ ಕಾರ್ಕಳ ಕಾರ್ಯಕ್ರಮ ವನ್ನು ಸವಿಯಲು ಆಗಮಿಸುತ್ತಿದ್ದಾರೆ.

ಇದೀಗ ಕಾರ್ಕಳ ನಗರವನ್ನು ವಿಶೇಷ ಅಲಂಕಾರಿಕ ವಿದ್ಯುತ್ ದೀಪಗಳಿಂದ ಅಲಂಕರಿಸಿ ಮೈಸೂರು ದಸರಾ ಎಷ್ಟೊಂದು ಸುಂದರ ಹಾಡಿದ ಜನರು ಇದೀಗ ಕಾರ್ಕಳ ಉತ್ಸವ ಎಷ್ಟೊಂದು ಉತ್ಸಾಹ ಸಂಭ್ರಮಗರಿಗೆದರಿದೆ.

ಮುಖ್ಯವಾಗಿ ತಾಲೂಕಿನ ಕಲ್ಲು ಕಲ್ಲುಗಳಲ್ಲೂ ಕಾರ್ಕಳ ಉತ್ಸವದ ಸಂಭ್ರಮದ ಸಡಗರದ ವರ್ಣನೆಗಳ ಮಾತುಗಳಾಗಿ ಕೇಳಿ ಬರುತ್ತಿದೆ.
ಎಲ್ಲೆಲ್ಲೂ ಎಲ್ಲೆಂದರಲ್ಲೂ ಕಾರ್ಕಳ ಉತ್ಸವದ ನಿರೀಕ್ಷೆಯಲ್ಲಿ ಸಂಭ್ರಮ ದಿಂದ ಬರುವವರನ್ನು ಸ್ವಾಗತಿಸುತ್ತಿದ್ದಾರೆ. ಕರಿಯಕಲ್ಲಿನ ನಾಡಿನಲಿ ಗೊಮ್ಮಟಗಿರಿಯ ಊರಿನಲಿ ಕಾರ್ಕಳ ರಾಜ ಪರಂಪರೆಯ ಬೀಡಿನಲಿ ಅಮೋಘವಾದ ಅದ್ಭುತವಾದ ಸಾಂಸ್ಕೃತಿಕ ಕಲರವ.

ಇಂತಹ ಕಾರ್ಕಳವು ಎಲ್ಲಾ ಕಾಲದಲ್ಲೂ ಪ್ರಕೃತಿ ಐಸಿರಿಯ ಸೊಬಗಿನಿಂದ ಕಂಗೊಳಿಸುತ್ತ ಇದೀಗ ಮತ್ತಷ್ಟು ಐಸಿರಿಯನ್ನು ತುಂಬಿಕೊಂಡಿದೆ.
ಕಾರ್ಕಳ ಮದುವಣಗಿತ್ತಿಯಂತೆ ಅಲಂಕಾರಗೊಂಡಿದೆ. ಈ ಮದುಮಗಳಿಗೆ ಮೆಹೆಂದಿ ಸಂಭ್ರಮವೂ ಕಾರ್ಕಳ ಉತ್ಸವದ ಸಂಭ್ರಮಕ್ಕೆ ಮಿರುಗುವ ಚುಕ್ಕಿಯಾಗಿದೆ.

ಮತ್ತೆ ನೆನಪಾಗಿಸುವ ಕಾರ್ಕಳದ ರಾಜಬೀದಿಗಳ ಚೆಲುವು ಪ್ರತಿ ಸಂಜೆಯಿಂದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ.
ಕೋಟಿ ಚೆನ್ನಯ್ಯ ಥೀಂ ಪಾರ್ಕ್ ನಲ್ಲಿ ತುಳುನಾಡ ಗ್ರಾಮ ಮುಂದುವರಿದ ಜಗತ್ತಿನ ಮಧ್ಯೆ ಹಿಂದಿನ ಜನಪದ ಬದುಕನ್ನು ನೆನಪಿಸುವಂತಿದೆ. ರಾಮ ಸಮುದ್ರ ಬೋಟಿಂಗ್ ವಿಹಾರದ ಕಡೆ ಜನಸಾಲು ಸಾಲಾಗಿ ಸಾಗುತ್ತಿದ್ದಾರೆ.

ಕಾರ್ಕಳ ಮುಖ್ಯ ನಗರವನ್ನು ಕೇಂದ್ರಿಕರಿಸಿಕೊಂಡು ಮುಖ್ಯ ಪೇಟೆಗೆ ಬರುವ ಸುತ್ತಮುತ್ತಲ ಎಲ್ಲಾ ರಸ್ತೆಗಳ ಇಕ್ಕೆಲ್ಲಗಳೂ ದೀಪಾಲಂಕಾರಗಳಿಂದ ಕಾರ್ಕಳ ಉತ್ಸವಕ್ಕೆ ಎಲ್ಲರನ್ನೂ ಕೈ ಬೀಸಿ ಕರೆಯುವಂತಿದೆ. ಪೊಟೋ ಶೂಟ್ ನಿತ್ಯ ನಿರಂತರವಾಗಿದೆ.
ಗೊಮ್ಮಟೇಶ್ವರ ಬೆಟ್ಟ ಚತುಮುರ್ಖ ಬಸದಿ, ಆನೆಕೆರೆ ಜೋಡುರಸ್ತೆ ಬಣ್ಣ ಬಣ್ಣಗಳಿಂದ ಕಂಗೊಳಿಸುತ್ತಿದೆ.
ಸಂಜೆಯ ಹೊತ್ತು ಮನೆಮಂದಿಗಳೆಲ್ಲರೂ ಪ್ರತೀ ಗಾಂಧಿ ಮೈದಾನ,ಸ್ವರಾಜ್ ಮೈದಾನದಲ್ಲಿ ಸೇರುತ್ತಾರೆ.

ಹೀಗೇ ಪ್ರತೀ ದಿನ ಹತ್ತು ಸಾವಿರಕ್ಕೂ ಮಿಕ್ಕಿ ಪ್ರೇಕ್ಷಕರು ಕಾರ್ಯಕ್ರಮ ನೋಡಲು ಬರುತ್ತಿದ್ದಾರೆ.ಇನ್ನು ಆಹಾರ ಮೇಳ ,ಗಾಳಿಪಟ ಉತ್ಸವ ಗೂಡುದೀಪ ಉತ್ಸವ, ಶ್ವಾನ ಪ್ರದರ್ಶನ, ವಸ್ತು ಪ್ರದರ್ಶನ ಪ್ರದರ್ಶಿನಿ ಉತ್ಸವದ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ಎಲ್ಲಕ್ಕಿಂತಲೂ ಮುಖ್ಯವಾಗಿ ಜನರಿಂದ ಭೇಷ್ ಎನ್ನುವಂತೆ ಎಲ್ಲಾ ಸ್ವಯಂಸೇವಕರ ಮೂವತ್ತೇಳು ಸಮಿತಿಗಳು ಜಿಲ್ಲಾ ಡಳಿತ ತಾಲೂಕು ಆಡಳಿತ ಹಾಗೂ ಸಂಘ ಸಂಸ್ಥೆಗಳ ಪ್ರತೀ ತಂಡದ ಸಂಚಾಲಕರ ಸಹಕಾರದಿಂದ ತಂಡ ತಂಡವಾಗಿ ಕಾರ್ಯಪ್ರವೃತ್ತವಾಗಿದೆ.
ಸ್ವಚ್ಛತೆಯ ತಂಡ ಸದಾ ಹಗಲಿರುಳು ಸ್ವಚ್ಛತೆ ಗೆ ಒಂದು ಹೆಜ್ಜೆ ಮುಂದೆ ಎನ್ನುವಂತೆ ಹಗಲಿರುಳು ಶ್ರಮಿಸುತ್ತಿದ್ದಾರೆ.

ಒಟ್ಟಿನಲ್ಲಿ ಹತ್ತು ದಿನಗಳ ಕಾರ್ಕಳ ಉತ್ಸವ ಹತ್ತೂರಿಗೆ ಪಸರಿಸಿದೆ. ಕಾರ್ಕಳ ಉತ್ಸವ ಸಂಭ್ರಮದಲ್ಲಿ ಎಲ್ಲರೂ ಉತ್ಸಾಹದಿಂದ ಭಾಗಿಗಳಾಗುತ್ತಿದ್ದಾರೆ. ಇಂತಹ ಸ್ವರ್ಗಸದೃಶವಾದ ವೈಭೋವೋಪೇತ ಸಂಭ್ರಮವನ್ನು ಕಾರ್ಕಳದೂರಿಗೆ ಕಲ್ಪಸಿಕೊಟ್ಟವರು ಸನ್ಮಾನ್ಯ ಸಚಿವರಾದ ಶ್ರೀ ವಿ ಸುನಿಲ್ ಕುಮಾರ್ ಅವರು.

ಈ ಕಾರ್ಯಕ್ರಮ ಹೇಗಿದೆಯೆಂದರೆ ಕಳೆದ ಮೂರು ವರ್ಷಗಳಿಂದ ಕೊರೋನಾ ಕೊರೋನಾ ಎಂಬ ಪೆಡಂಭೂತದ ಕಬಂಧ ಬಾಹುಗಳಲ್ಲಿ ಸಿಲುಕಿ ತತ್ತರಿಸಿ ನಲುಗಿ ಭಯಭೀತರಾಗಿ ಮನೆಯೊಳಗೆ ಬಂಧಿಯಾಗಿ ಉಲ್ಲಾಸ ಉತ್ಸಾಹ ಗಳೆಲ್ಲವೂ ಮೂಲೆಗುಂಪಾಗಿ ಎಲ್ಲರಿಂದಲೂ ದೂರವಾಗಿ ಮನೆಯೊಳಗೆಯೇ ಬಂಧಿಯಾದ ನಮಗೆ ಮತ್ತೆ ಆತಂಕವೆಲ್ಲವೂ ಮರೆಯಾಗಿ ಭರವಸೆಯ ಬೆಳಕು ಮೂಡಿ ಬಂದಂತಾಯಿತು. ಎಲ್ಲರೊಂದಿಗೆ ಮತ್ತೆ ನಗೆಬೀರಿ ಸಂಭ್ರಮ ಗಳನ್ನು ಹಂಚುಕೊಳ್ಳುವಂತಾಯಿತು. ಆದರೂ ಎಚ್ಚರದಿಂದ ಮತ್ತೆ ಹೆಜ್ಜೆ ಯಿಡುತ್ತಾ ಸಾಗಬೇಕು. ಈ ಉತ್ಸವ ಯಶಸ್ಸಿನ ರಹಸ್ಯವೇ ಎಲ್ಲರೊಂದಿಗಿನ ಒಲವಿನ ನಂಟು, ಕಾರ್ಯಕ್ರಮಗಳೆಲ್ಲವೂ ಅಚ್ಚುಕಟ್ಟು, ಇದೇ ಕಾರ್ಕಳ ಉತ್ಸವದ ಒಳಗುಟ್ಟು.
-ಗಣೇಶ್ ಜಾಲ್ಸೂರು
ಶಿಕ್ಷಕರು ಕಾರ್ಕಳ