ಕಾರ್ಕಳ : ಕಾರ್ಕಳ ಉತ್ಸವದ ಆರನೇ ದಿನವಾದ ಮಾ.15ರ ಮಂಗಳವಾರ ಗಾಂಧಿಮೈದಾನದಲ್ಲಿ ಬೆಳಗ್ಗೆ 9 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಯಕ್ಷ ವೈಭವ, ಗಾನ, ನಾಟ್ಯ, ಹಾಸ್ಯ ಮತ್ತು ತಾಳ ಮದ್ದಳೆ ನಡೆಯಲಿದೆ.
ಸ್ವರಾಜ್ ಮೈದಾನದಲ್ಲಿ ಗಾಳಿಪಟ ಉತ್ಸವ ಹಾಗೂ ಶ್ವಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 2 ಗಂಟೆಗೆ ಶ್ವಾನ ಪ್ರದರ್ಶನ ನಡೆಯಲಿದ್ದು, ಸುಮಾರು 25ಕ್ಕೂ ಹೆಚ್ಚು ಜಾತಿಯ 150ಕ್ಕೂ ಹೆಚ್ಚಿನ ಶ್ವಾನಗಳು ಭಾಗವಹಿಸಲಿದೆ. ಎಲ್ಲ ಜಾತಿಯ ಶ್ವಾನಗಳಿಗೆ ಪ್ರತ್ಯೇಕ ಸ್ಪರ್ಧೆ ನಡೆಸಿ ಬಹುಮಾನ ವಿತರಣೆಯಾಗಲಿದೆ.
ಮಧ್ಯಾಹ್ನ 3 ಗಂಟೆ ಗೆ ಸ್ವರಾಜ್ ಮೈದಾನದಲ್ಲಿ ಗಾಳಿಪಟ ಉತ್ಸವ ನಡೆಯಲಿದ್ದು, ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಗಾಳಿಪಟ ಹಾರಿಸುವ ಬಗ್ಗೆ ತರಬೇತಿ ನೀಡಲಾಗುವುದು. ಗುಜರಾತ್, ಸೂರತ್, ರಾಜ್ ಕೋಟ್, ಬೆಳಗಾಂ ನಿಂದಲೂ ಗಾಳಿಪಟ ಪ್ರೇಮಿಗಳು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಶಾಲಾ ಮಕ್ಕಳಲ್ಲಿ ಗೂಡುದೀಪ ದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಮಾ. 16ರಂದು ಗೂಡುದೀಪ ಉತ್ಸವ ನಡೆಯಲಿದೆ. ಕಾರ್ಕಳ ಕ್ಷೇತ್ರದ 1 ರಿಂದ 10 ನೇ ತರಗತಿಯ ಮಕ್ಕಳಿಗೆ ಪ್ರತಿ ಶಾಲೆಯಿಂದ ತಲಾ ಒಂದು ಗೂಡುದೀಪ ದ ನೋಂದಾವಣೆಯೊಂದಿಗೆ ಗೂಡುದೀಪದ ಸ್ಪರ್ಧೆ ನಡೆಸಲಾಗುವುದು. ಸ್ವರಾಜ್ ಮೈದಾನ ಬಳಿಯ ಪೆರ್ವಾಜೆ ಶಾಲೆಯಲ್ಲಿ ಮಾ. 15 ರಂದು ಸ್ಪರ್ಧೆ ನಡೆಯಲಿದ್ದು, ವಿಜೇತರಿಗೆ ಮಾ. 20 ರಂದು ಬಹುಮಾನ ವಿತರಣೆಯಾಗಲಿದೆ.
ಮಾ. 16 ರಂದು ಸ್ವರಾಜ್ ಮೈದಾನದಲ್ಲಿ ಗೂಡುದೀಪ ಉತ್ಸವ ಆರಂಭವಾಗಲಿದೆ. ಇದರಲ್ಲಿ ಸ್ಪರ್ಧೆಯ ಗೂಡುದೀಪಗಳಲ್ಲದೇ ಮಂಗಳೂರು ನಮ್ಮ ಕುಡ್ಲದ ತಂಡದಿಂದ ಸುಮಾರು 100 ದೊಡ್ಡ ಗಾತ್ರದ ಸಾಂಪ್ರದಾಯಿಕ ಹಾಗೂ ಆಧುನಿಕ ಗೂಡುದೀಪ ಗಳ ಪ್ರದರ್ಶನವಿರಲಿದೆ.