ಕಾರ್ಕಳ : ಕಲೆ, ಸಂಸ್ಕೃತಿ ಮತ್ತು ಸಾಹಿತ್ಯ ಕ್ಷೇತ್ರದ ಉನ್ನತಿಗಾಗಿ ನಡೆಸಲಾಗುವ ಇಂತಹ ಉತ್ಸವಗಳು ದೇಶದ ಪ್ರತಿಯೊಂದು ರಾಜ್ಯದಲ್ಲೂ ನಡೆಯಬೇಕಾಗಿದೆ ಎಂದು ಕರ್ನಾಟಕ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಹೇಳಿದರು.
ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ಕಾರ್ಕಳ ಉತ್ಸವದ 5ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕರ್ನಾಟಕದ ಸಂಸ್ಕೃತಿ ಬಹು ಪ್ರಾಚೀನವಾದವು. ಇದನ್ನು ಬಲಹೀನಗೊಳಿಸುವ ಪ್ರಯತ್ನ ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ಕಾರಣದೊಂದಿಗೆ ನಡೆಸಲಾಗಿದೆ. ಭಾರತದ ಆಚಾರ – ವಿಚಾರ, ವೇಷ ಭೂಷಣಗಳು ಭಿನ್ನವಾಗಿದ್ದರೂ ದೇಶದ ಯಾವುದೇ ಮೂಲೆಗೆ ಹೋದರೂ ಭಾರತದ ಸಂಸ್ಕೃತಿ ಕಂಡುಬರುತ್ತಿದೆ. ಕಾರ್ಕಳ ಶಿಲ್ಪಕಲೆಗೆ ಪ್ರಸಿದ್ಧಿ ಪಡೆದಿದೆ. ಸತ್ಯ, ಅಹಿಂಸೆಯ ಸಂದೇಶವನ್ನು ಸಾರುವ ಕಾರ್ಕಳದ ಭಗವಾನ್ ಬಾಹುಬಲಿ ಇಲ್ಲಿನ ಪಡುತಿರುಪತಿ ವೆಂಕಟರಮಣ, ಅತ್ತೂರು ಬಸಿಲಿಕಾ ಇವೆಲ್ಲವು ಈ ನೆಲದ ಕೀರ್ತಿಯನ್ನು ಜಗತ್ತಿಗೆ ಸಾರಿವೆ. ಹಿರಿಯರು ನಮ್ಮ ಜ್ಞಾನ, ಸಂಸ್ಕೃತಿ, ಸಾಹಿತ್ಯದ ಆಸಕ್ತಿಯನ್ನು ಪ್ರಪಂಚದಾದ್ಯಂತ ಹಂಚಿದ್ದಾರೆ. ಈ ಕಾರಣದಿಂದ ವಿದೇಶಿಗರು ಭಾರತದತ್ತ ಆಕರ್ಷಿತರಾಗಿ ಆಗಮಿಸುತ್ತಿದ್ದಾರೆ. ಭಾರತದ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಜೊತೆಗೆ ಭಾರತವೂ ಬೆಳೆದು ವಿಶ್ವಶಾಂತಿ ನೆಲೆಯಾಗುವಲ್ಲಿ ಇಂತಹ ಉತ್ಸವ ಯಶಸ್ವಿಯಾಗಲಿ. ಸರ್ವ ಧರ್ಮ ಸಮನ್ವಯದ ಪುಣ್ಯಭೂಮಿಯಾಗಿರುವ ಇಲ್ಲಿನ ಈ ಉತ್ಸವ ಸಂಸ್ಕೃತಿಯ ಇತಿಹಾಸವನ್ನು ಜೀವಂತವಾಗಿಡುವ ಕಾರ್ಯವೆನಿಸಲಿ. ಇದಕ್ಕಾಗಿ ರಾಜ್ಯ ಸರ್ಕಾರವನ್ನು ಇಂಧನ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಅವರನ್ನು ಹಾಗೂ ಇದರ ಯಶಸ್ಸಿನಲ್ಲಿ ತೊಡಗಿಸಿಕೊಂಡಿರುವ ನಿಮ್ಮನ್ನು ಅಭಿನಂದಿಸುತ್ತೇನೆ ಎಂದರು.

ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಭಾರತೀಯ ವಿಚಾರ ಪದ್ದತಿ ಇರುವಂತದ್ದೇ ಕಲೆ, ಸಂಸ್ಕೃತಿಗಳ ಆರಾಧನೆ ಮೂಲಕ ಬದುಕಿನ ಆದರ್ಶವನ್ನು ಹೊರಹೊಮ್ಮಿಸುವುದು. ಕಾರ್ಕಳ ಉತ್ಸವ ಮಾತ್ರ ಸ್ವರ್ಣ ಕಾರ್ಕಳ ಎಂಬ ಕನಸಿನ ಭಾಗವಲ್ಲ. ಇದು ಈಗ ಮೊಳಕೆಯೊಡೆದಿದೆ ಮಾತ್ರ. ಇನ್ನು ಐದಾರು ವರ್ಷಗಳಲ್ಲಿ ಇಲ್ಲಿ ಕೆಲವರು ಶಿಲ್ಪಿಗಳಾಗಿ, ಸಾಹಿತಿಗಳಾಗಿ, ನೇತಾರರಾಗಿ ಮೂಡಿ ಬರಬೇಕಾಗಿದೆ. ಈ ನೆಲದ ಸಂಸ್ಕೃತಿ ಹತ್ತಾರು ಕಡೆ ಪ್ರಸಾರಗೊಳ್ಳಬೇಕು ಜನಪ್ರತಿನಿಧಿಗಳ ಸಹಕಾರ, ಸಾರ್ವಜನಿಕರ ಸಹಭಾಗಿತ್ವದಿಂದ ಮುಂದೆ ಇದು ಹೆಮ್ಮರವಾಗಿ ಬೆಳೆದು ಸ್ವರ್ಣ ಕಾರ್ಕಳ ನಿರ್ಮಾಣವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ “ಕಾರ್ಕಳ ಉತ್ಸವ” ಶೀರ್ಷಿಕೆ ಗೀತೆಯನ್ನು ಸಂಯೋಜನೆ ಮಾಡಿದ ಕಾರ್ಕಳದ ಸಂಗೀತ ನಿರ್ದೇಶಕ ಸುನಾದ್ ಗೌತಮ್, “ಕರಿಯಕಲ್ಲಿನ ಊರಿಗೆ ಕಲಶ ಕನ್ನಡಿ ಸ್ವಾಗತ” ಎಂಬ ಸಾಹಿತ್ಯವನ್ನು ರಚಿಸಿದ ಕೆ. ರಾಜೇಂದ್ರ ಭಟ್ ಅವರನ್ನು ಗೌರವಿಸಲಾಯಿತು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಡಾ. ಎನ್ ಮಂಜುಳಾ, ಕಾರ್ಕಳ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ, ಹಿರಿಯ ಸಾಹಿತಿ ಡಾ. ನಾ ಮೊಗಸಾಲೆ, ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ ಸ್ವಾಗತಿಸಿ, ಉಪನ್ಯಾಸಕಿ ಸಂಗೀತಾ ಕುಲಾಲ್ ನಿರೂಪಿಸಿದರು. ಉಡುಪಿ ಜಿಲ್ಲಾ ಪೊಲೀಸ್ ಬ್ಯಾಂಡ್ ರಾಷ್ಟ್ರಗೀತೆ ನುಡಿಸಿದರು. ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ವಂದಿಸಿದರು.
