Tuesday, July 5, 2022
spot_img
Homeಸಾಹಿತ್ಯ/ಸಂಸ್ಕೃತಿಕಗ್ಗದ ಸಂದೇಶ - ಮೂರು ದಿನದ ಯಾತ್ರಿಕರು ನಾವು…

ಕಗ್ಗದ ಸಂದೇಶ – ಮೂರು ದಿನದ ಯಾತ್ರಿಕರು ನಾವು…

“ಯಾತ್ರಿಕರು ನಾವು,ದಿವ್ಯಕ್ಷೇತ್ರವೀ ಲೋಕ|
ಸತ್ರದಲಿ ನೇಮದಿಂದಿರಲಿಕೆಡೆಯುಂಟು||
ರಾತ್ರಿಮೂರಾಯ್ತುಹೊರಡೆನೆ ತೆರಳಿದೊಡೆ ಪಾರು|
ಪತ್ಯದವ ಮೆಚ್ಚುವನು – ಮಂಕುತಿಮ್ಮ||”.

ಈ ಜಗತ್ತು ಒಂದು ತೀರ್ಥಕ್ಷೇತ್ರ. ನಾವೆಲ್ಲಾ ಇಲ್ಲಿಗೆ ಯಾತ್ರಿಕರಾಗಿ ಬಂದವರು.ಈ ಪವಿತ್ರ ಕ್ಷೇತ್ರದಲ್ಲಿರುವ ಯಾತ್ರಿನಿವಾಸದಲ್ಲಿ ನಮಗೆಲ್ಲಾ ಉಳಿಯುವ ವ್ಯವಸ್ಥೆಯಾಗಿದೆ. ಇಲ್ಲಿನ ನಿಯಮದ ಪ್ರಕಾರ ಇದ್ದರೆ ಮೂರು ದಿನಗಳಷ್ಟೆ ಉಳಿಯಬಹುದು. ಮೂರು ದಿನವಾದ ಕೂಡಲೆ ಇಲ್ಲಿಂದ ತೆರಳಿದಾಗ ಈ ಕ್ಷೇತ್ರದ ಪಾರುಪತ್ಯದವನಾದ ಭಗವಂತ ಮೆಚ್ಚಿಕೊಳ್ಳುತ್ತಾನೆ ಎಂದು ಮಾನ್ಯ ಡಿವಿಜಿ ಯವರು ಈ ಮುಕ್ತಕದಲ್ಲಿ ತಿಳಿಸಿದ್ದಾರೆ.
ನಾವ್ಯಾರೂ ಕೂಡ ಇಲ್ಲಿ ಶಾಶ್ವತವಾಗಿ ಇರಲು ಸಾಧ್ಯವಿಲ್ಲ. “ಮಾನವರೆಂದರೆ ನೀರಿನ ಗುಳ್ಳೆಗಳು, ಬೆಳಗಾಗುತ್ತಲೇ ತಾರೆಗಳಂತೆ ಕಣ್ಮೇರೆಯಾಗುವರು” ಎಂದು ಸಂತ ಕಭೀರ್ ದಾಸರು ಹೇಳಿದ ಸಾಲುಗಳು ಜೀವನದ ವಾಸ್ತವವನ್ನು ಸಾರುತ್ತವೆ. ಒಂದು ತೀರ್ಥಕ್ಷೇತ್ರಕ್ಕೆ ಪ್ರವಾಸ ಹೋದರೆ ನಮಗೆ ಉಳಿದುಕೊಳ್ಳಲು ಅಲ್ಲಿನ ಛತ್ರದಲ್ಲಿ ಅವಕಾಶ ನೀಡುತ್ತಾರೆ. ಅಲ್ಲಿನ ನಿಯಮಗಳಿಗೆ ತಕ್ಕಂತೆ ಇದ್ದರೆ ಮೂರು ದಿನ ಉಳಿಯಲು ಅವಕಾಶ ಕೊಡುತ್ತಾರೆ. ನಿಯಮ ಮೀರಿದರೆ ತಕ್ಷಣ ಅಲ್ಲಿಂದ ಹೊರಡಿಸುತ್ತಾರೆ. ನಮಗೆ ಇಷ್ಟವಾಗಿದೆ ಅಂತ ಮೂರು ದಿನಗಳಿಗಿಂತ ಹೆಚ್ಚು ಅವಕಾಶ ಕೊಡುವುದಿಲ್ಲ. ಜೀವನವು ಕೂಡ ಹಾಗೆ ಯಾತ್ರಿಕರಂತೆ ಬಂದ ನಾವು ಇಲ್ಲಿನ ನಿಯಮ ಮತ್ತು ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸಿದರೆ ಪಾರುಪತ್ಯದವನಾದ ಪರಮಾತ್ಮ ಮೆಚ್ಚಿಕೊಳ್ಳುತ್ತಾನೆ. ಪ್ರತಿಯೊಬ್ಬರು ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ನಿಸ್ವಾರ್ಥತೆಯಿಂದ ನಿರ್ವಹಿಸಿದಾಗಲೇ‌ ಜೀವನಯಾನ ಸಾರ್ಥಕವಾಗುವುದು.
“ಕಡಲಿಂದ ಬಂದರಿಗೆ ಬರುವುದೆನಿತೋ ಹಡಗು! ಬಂದದ್ದೆ ಮತ್ತೊಮ್ಮೆ ಬಾರದಿರಬಹುದು| ಹೊಸಬರೋ ಪಯಣಿಗರು; ನಿಲ್ದಾಣ ಶಾಶ್ವತವೊ! ಬಾಳು ಮುಗಿಯದ ಪಯಣ-ಮುದ್ದುರಾಮ” ಎಂಬ ಕೆ. ಶಿವಪ್ಪನವರ ನುಡಿಯಂತೆ ಈ ಜಗತ್ತೆಂಬ ನಿಲ್ದಾಣದಲ್ಲಿರುವ ಪಯಣಿಗರು ನಾವು. ಯಾರ ಪ್ರಯಾಣ ಯಾವಾಗ? ಹೇಗೆ? ಮುಕ್ತಾಯವೆಂಬುದು ಯಾರಿಗೂ ಗೊತ್ತಿಲ್ಲ. ಈ ಬಗ್ಗೆ ಚಿಂತಿಸುವುದನ್ನು ಬಿಟ್ಟು ಪಯಣವನ್ನು ಆಸ್ವಾದಿಸಿ ಆನಂದಿಸಿದರಷ್ಟೇ ಲಾಭ. “ಈ ಬಾಳಿನುದ್ದೇಶ ಆನಂದ ರಸಪ್ರಾಪ್ತಿ; ಕಾಲ ಸವೆಸುವೆ ಏಕೆ ಗೊಣಗುವಿಕೆಯಲ್ಲಿ? ಇದೆ ದವನ, ಇದೆ ತೇರು; ಎಸೆ ಮೆಲ್ಲ, ಇರು ನಗುತ| ತೇರು ಸಾಗಲಿ ಮುಂದೆ-ಮುದ್ದುರಾಮ” ಎಂಬ ಕವಿವಾಣಿಯಂತೆ ಬಾಳಿನ ಉದ್ದೇಶವನ್ನು ಅರ್ಥ ಮಾಡಿಕೊಂಡು ಸಂತೋಷವಾಗಿ ನಗುನಗುತ ಎಲ್ಲರೊಂದಿಗೆ ಬೆರೆತು‌ ಸಾಗಿದಾಗಲೆ ಈ ಜೀವನ ಯಾತ್ರೆ ಸಾರ್ಥಕವಾಗುವುದಲ್ಲವೇ?

ಪ್ರಭಾಕರ ಶೆಟ್ಟಿ ಕೊಂಡಳ್ಳಿ ಅಧ್ಯಕ್ಷರು, ಕಸಾಪ ಕಾರ್ಕಳ ಘಟಕ.










---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!