ಕನ್ನಡ ಸಾಹಿತ್ಯದಲ್ಲಿ ಸಮನ್ವಯ ಚಿಂತನೆಯ ಒಳ ನೋಟಗಳು’ ರಾಷ್ಟ್ರೀಯ ವಿಚಾರ ಸಂಕಿರಣ

ಕಾರ್ಕಳ :  ಮನುಷ್ಯರ ನಡುವೆ ಸೌಹಾರ್ದಯತವಾದ ಮಾತೃತ್ವದ ಭಾವನೆಯ ಬಾಂಧವ್ಯ ವೃದ್ಧಿಸುವುದೇ ಸಾಹಿತ್ಯ. ಸಾಹಿತ್ಯದ ಉದ್ದೇಶವೇ ಸಮನ್ವಯ ಸಾಧಿಸುವುದು. ಸೃಜನಶೀಲ ಸಾಹಿತ್ಯಕ್ಕೆ ಮಾನವೀಯ ಮೌಲ್ಯಗಳನ್ನು ಪಸರಿಸುವ ಶಕ್ತಿಯಿದೆ. ಸಮನ್ವಯತೆ ಸಾರುವ ಇಂತಹ ಸಾರ್ಥಕ ವಿಚಾರಗೋಷ್ಠಿ ನಾಡಿನ ಎಲ್ಲೆಡೆ ನಡೆದಾಗ ಕನ್ನಡ, ಸಾಹಿತ್ಯದ ಸತ್ವ, ಶಕ್ತಿ ಹೆಚ್ಚುತ್ತದೆ ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಷಿ ಹೇಳಿದರು.

ಅವರು ಭುವನೇಂದ್ರ ಕಾಲೇಜಿನಲ್ಲಿ ಮಾ. 11 ಮತ್ತು 12ರಂದು ರಾಜ್ಯ ಸಾಹಿತ್ಯ ಅಕಾಡೆಮಿ ಹಾಗೂ ಭುವನೇಂದ್ರ ಕಾಲೇಜು ಇವುಗಳ ಜಂಟಿ ಆಶ್ರಯದಲ್ಲಿ ಆಯೋಜಿಸಿದ ’ಕನ್ನಡ ಸಾಹಿತ್ಯದಲ್ಲಿ ಸಮನ್ವಯ ಚಿಂತನೆಯ ಒಳ ನೋಟಗಳು’ ಎಂಬ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಇಂಧನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ. ಸುನಿಲ್ ಕುಮಾರ್ ಇಂದಿನ ಹೊಸ ಪೀಳಿಗೆಯವರಲ್ಲಿ ಸಾಹಿತ್ಯಾಸಕ್ತಿಯನ್ನು ಮೂಡಿಸಬೇಕು ಎಂಬ ಹಂಬಲವನ್ನು ಇಟ್ಟುಕೊಂಡು ಕಾರ್ಕಳ ಉತ್ಸವದ ಅಂಗವಾಗಿ ಸಾಹಿತ್ಯ ವಿಚಾರ ಸಂಕಿರಣವನ್ನು ಆಯೋಜಿಸಿಕೊಳ್ಳಲಾಗಿದೆ ಕಾರ್ಕಳದ ನೆಲದಲ್ಲಿ ಕನ್ನಡ, ತುಳು ಸಾಹಿತ್ಯದ ಕಸುವಿದೆ. ಕಾರ್ಕಳದ ಶ್ರೇಷ್ಠ ಸಾಹಿತಿಗಳನ್ನು ಉಲ್ಲೇಖಿಸಿದ ಅವರು ಶ್ರೇಷ್ಠ ಸಾಹಿತಿಗಳಿಂದ ಕಾರ್ಕಳ ಶ್ರೀಮಂತವಾಗಿದೆ. ಹತ್ತಾರು ಗಣ್ಯರು ಇಂತಹ ಸಾಹಿತ್ಯ ವಿಚಾರ ಸಂಕಿರಣದಲ್ಲಿ ಭಾಗವಹಿಸುವ ಮೂಲಕ ಯುವಕರಲ್ಲಿ ಹೊಸ ಇಚ್ಛಾಶಕ್ತಿ ಹೊರಹೊಮ್ಮುವಂತಾಗಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಬಿ.ವಿ. ವಸಂತ ಕುಮಾರ್ ಮಾತನಾಡಿ,ಪಾಠದಲ್ಲಿ ಓದಿದ ಸಾಹಿತ್ಯದ ವಿಷಯಗಳನ್ನು ಪರಿಷ್ಕರಿಸಿ ಸತ್ಯವಾದುದನ್ನು ಅರ್ಥಮಾಡಿಕೊಂಡಾಗ ಮಾತ್ರ ಕನ್ನಡ ನಾಡು ನುಡಿ ಬೆಳೆಯಲು ಸಾಧ್ಯ. ಸ್ವತಂತ್ರ ಚಿಂತಕರು ಮಾತ್ರ ರಾಷ್ಟ್ರದ ಭವಿಷ್ಯವನ್ನು ನಿರ್ಮಾಣ ಮಾಡುವ ಮೂಲಕ ಲೋಕ ಕಲ್ಯಾಣ ಬಯಸುತ್ತಾರೆ. ಇದನ್ನು ನಮ್ಮ ದೇಶ ಎಂದೋ ತಿಳಿಸಿಕೊಟ್ಟಿದೆ. ಆದರೆ ಇಂದು ನಮ್ಮ ರಾಷ್ಟ್ರವನ್ನೇ ಕೀಳಾಗಿ ನೋಡುವ ಪ್ರವೃತ್ತಿ ಜಾಸ್ತಿಯಾಗಿದೆ. ಸಾಹಿತ್ಯದ ಉದ್ದೇಶ ಗುಲಾಮರನ್ನು ಸೃಷ್ಟಿಸುವುದಲ್ಲ, ಸ್ವಾಭಿಮಾನಿಗಳನ್ನು ಸೃಷ್ಟಿಸುವುದು ಎಂದರು.

ರಾಷ್ಟ್ರಕವಿ ಕುವೆಂಪು ಅವರು ಮನುಜ ಮತ, ವಿಶ್ವಪಥ, ಸಮನ್ವಯ, ಸರ್ವೋದಯ, ಪೂರ್ಣದೃಷ್ಟಿ ಎಂಬ 5 ತತ್ವಗಳನ್ನು ತಿಳಿಸಿದ್ದು, ಅವರಿಂದ ಆಧುನಿಕ ಸಾಹಿತ್ಯ ಮೈಕೊಡವಿ ನಿಂತಿದೆ. ಕನ್ನಡ ಸಾಹಿತ್ಯ ಸಂಸ್ಕೃತಿ ಏಕತೆಯನ್ನು ಹೇಳಿದೆ, ವಿಘಟನೆಯನ್ನಲ್ಲ ಎಂದು ವಸಂತ ಕುಮಾರ್ ಹೇಳಿದರು.

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸಿ.ಎ. ಶಿವಾನಂದ ಪೈ ಕಾರ್ಯಕ್ರಮಕ್ಕೆ ಶುಭ ಕೋರಿದರು. ರಾಜ್ಯ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ ಎನ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ.ಅರುಣ್ ಕುಮಾರ್ ಎಸ್.ಆರ್. ಉಪಸ್ಥಿತರಿದ್ದರು.

ಕನ್ನಡ ಉಪನ್ಯಾಸಕಿ ವನಿತಾ ಶೆಟ್ಟಿ ನಿರೂಪಿಸಿ, ಪ್ರಾಂಶುಪಾಲ ಡಾ. ಮಂಜುನಾಥ ಕೋಟ್ಯಾನ್ ಸ್ವಾಗತಿಸಿ, ಸಾಹಿತ್ಯ ಅಕಾಡೆಮಿ ಸಂಚಾಲಕ ಡಾ. ಶರಬೇಂದ್ರ ಸ್ವಾಮಿ ವಂದಿಸಿದರು.





























































































































































































































error: Content is protected !!
Scroll to Top