ಕಾರ್ಕಳ : ಹಲವಾರು ವಿಚಾರಗಳನ್ನು ಜೋಡಿಸಿಕೊಂಡು ಕಾರ್ಕಳ ಉತ್ಸವ ನಡೆಯುತ್ತಿದೆ. ಚಲನಚಿತ್ರಗಳು ಮನೋರಂಜನೆಯ ಜೊತೆ ಸಾಮಾಜಿಕ ಜಾಗೃತಿಯನ್ನು ನಿರ್ಮಾಣ ಮಾಡಬೇಕು. ಈ ನಿಟ್ಟಿನಲ್ಲಿ ಉತ್ತಮ ಚಿತ್ರಗಳನ್ನು ಆಯ್ದುಕೊಂಡು ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಅವರು ಮಾ.11ರಂದು ಪ್ಲಾನೆಟ್ ಚಿತ್ರಮಂದಿರದಲ್ಲಿ ನಡೆದ ಕಾರ್ಕಳ ಉತ್ಸವದ ಪ್ರಯುಕ್ತ ಆಯೋಜಿಸಿರುವ ಚಲನಚಿತ್ರೋತ್ಸವದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ನಡುವೆ ಇದ್ದಂತಹ ಕಲಾವಿದರು ಸೇರಿ ಮಾಡಿದಂತಹ ಚಿತ್ರಗಳು ಇಂದು ವಿದೇಶದಲ್ಲಿ ಕೂಡಾ ಪ್ರದರ್ಶಿಸಲ್ಪಡುತ್ತಿದೆ. ಎಲ್ಲಾ ಮನಸ್ಸಿನಲ್ಲಿರುವ ಭಾರವನ್ನು ತಿಳಿಗೊಳಿಸುವ ಕಾರ್ಯವನ್ನು ತುಳು ಚಲನಚಿತ್ರಗಳು ಮಾಡುತ್ತವೆ ಎಂದು ಸುನೀಲ್ ಕುಮಾರ್ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತುಳುಚಿತ್ರರಂಗದ ನಟ, ನಿರ್ದೇಶಕ, ನಿರ್ಮಾಪಕ ದೇವದಾಸ್ ಕಾಪಿಕಾಡ್, ಸಿನಿಮಾಗಳು ನಿರ್ಮಾಣವಾಗುವುದಕ್ಕೆ ಚಿತ್ರಮಂದಿರಗಳ ಕೊರತೆಯಿರುವುದರಿಂದ ವರ್ಷಕ್ಕೆ ಬೆರಳೆಣಿಕೆಯಷ್ಟೇ ಚಿತ್ರಗಳು ಮೂಡಿಬರುತ್ತಿದೆ. ಒಳ್ಳೆಯ ಚಿತ್ರಗಳಿಗೆ ಸಬ್ಸಿಡಿ ಸಿಗುವಂತಾದರೆ ಭವಿಷ್ಯದಲ್ಲಿ ನಿರ್ಮಾಪಕರಿಗೆ ಇನ್ನೂ ಉತ್ತಮ ರೀತಿಯಲ್ಲಿ ಚಿತ್ರನಿರ್ಮಾಣಕ್ಕೆ ಹುರುಪು ಬರುತ್ತದೆ. ಸಿನಿಮಾ ಯಶಸ್ವಿಯಾಗುವುದರಲ್ಲಿ ಪತ್ರಕರ್ತರ ಪಾತ್ರವೂ ಮಹತ್ವವಾದುದು. ಕಾರ್ಕಳ ಉತ್ಸವ ಸಾಂಸ್ಕೃತಿಕವಾಗಿ ಹೊಸ ಲೋಕವನ್ನು ಸೃಷ್ಟಿಸಿದೆ ಎಂದರು.
ಕಾರ್ಕಳ ಪುರಸಭಾ ಅಧ್ಯಕ್ಷೆ ಸುಮಾ ಕೇಶವ್, ರಾಧಿಕಾ ಚಿತ್ರಮಂದಿರದ ಮಾಲಕ ಮನೋಹರ್, ದಾವಣಗೆರೆ ವೃತ್ತಿರಂಗಭೂಮಿ ರಂಗಾಯಣ ಭೂಮಿ ಯ ನಿರ್ದೇಶಕ ಯಶವಂತ ಸರ್ದೇಶ್ ಪಾಂಡೆ ಉಪಸ್ಥಿತರಿದ್ದರು.
ಪ್ಲಾನೆಟ್ ಚಿತ್ರಮಂದಿರದ ಮಾಲಕ ಜೆರಾಲ್ಡ್ ಸ್ವಾಗತಿಸಿ, ಶಿಕ್ಷಕ ದಿನೇಶ್ ಶೆಟ್ಟಿಗಾರ್ ವಂದಿಸಿದರು. ಶಿಕ್ಷಕ ನಾರಾಯಣ ಶೆಣೈ ನಿರೂಪಿಸಿದರು.
ಮಾ. 11ರಿಂದ 13ರವರೆಗೆ ಕಾರ್ಕಳದ ಪ್ಲಾನೆಟ್ ಮತ್ತು ರಾಧಿಕಾ ಚಿತ್ರ ಮಂದಿರದಲ್ಲಿ ಉಚಿತ ಚಲನಚಿತ್ರ ಪ್ರದರ್ಶನದ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರತಿ ದಿನ ಬೆಳಿಗ್ಗೆ 10, ಮಧ್ಯಾಹ್ನ 1 ಹಾಗೂ ಸಂಜೆ 3-30ಕ್ಕೆ ಚಲನಚಿತ್ರ ಪ್ರದರ್ಶನಗೊಳ್ಳಲಿದೆ.
ಚಲನ ಚಿತ್ರಗಳ ವಿವರ ಈ ಕೆಳಗಿನಂತಿದೆ
ಉರಿ ದಿ ಸರ್ಜಿಕಲ್ ಸ್ಟ್ರೈಕ್, ಮಿಶನ್ ಮಂಗಲ್ (ಹಿಂದಿ), ಮೋಹನದಾಸ, ಯುವರತ್ನಾ, ರಾಜಕುಮಾರ, ರಾಬರ್ಟ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಒಂದು ಮೊಟ್ಟೆಯ ಕತೆ (ಕನ್ನಡ), ಮದಿಪು, ಪಡ್ಡಾಯಿ, ಗಿರಿಗಿಟ್, ಗಮ್ಜಾಲ್ (ತುಳು) ಚಲನಚಿತ್ರಗಳು ಮೂಡಿಬರಲಿವೆ.