Tuesday, July 5, 2022
spot_img
Homeಅಂಕಣಆರೋಗ್ಯಧಾರ - ಧ್ಯಾನವನ್ನು ಹೀಗೆಯೂ ಮಾಡಬಹುದು

ಆರೋಗ್ಯಧಾರ – ಧ್ಯಾನವನ್ನು ಹೀಗೆಯೂ ಮಾಡಬಹುದು

ಕಣ್ಣು ಮುಚ್ಚಿ ಕುಳಿತುಕೊಂಡು ಧ್ಯಾನ ಮಾಡುವುದು ಕೆಲವರಿಗೆ ಕಷ್ಟ. ಧ್ಯಾನಕ್ಕೆ ಕುಳಿತಾಗ ಮನಸ್ಸು ಎಲ್ಲೆಲ್ಲೋ ತಿರುಗಾಡಲು ಹೋಗುವುದು ಸುಳ್ಳಲ್ಲ. ಮನಸ್ಸಿನಲ್ಲಿ ಅನೇಕ ರೀತಿಯ ಆಲೋಚನೆಗಳು ತುಂಬಿ ತುಳುಕುವುದರಿಂದ ಧ್ಯಾನ ಮಾಡಲು ಕಷ್ಟವೆನಿಸುವುದು. ಇದೇ ಕಾರಣ ಹಿಡಿದು ಧ್ಯಾನಮಾಡಲು ಹಲವರು ನಿರಾಕರಿಸುತ್ತಾರೆ. ಸುಖಾಸನ ಅಥವಾ ಪದ್ಮಾಸನದಲ್ಲಿ ಕುಳಿತು ಧ್ಯಾನ ಮಾಡುವುದು ಶ್ರೇಷ್ಠ ಅದಕ್ಕೆ ಅದರದ್ದೇ ಆದ ಪ್ರಾಶಸ್ತ್ಯವಿದೆ. ನಮ್ಮ ಷಟ್ ಚಕ್ರಗಳನ್ನು ಜಾಗ್ರತಗೊಳಿಸಲು ಅದೇ ಭಂಗಿ ಉತ್ತಮವೆಂದು ಹೇಳುವರು ಜ್ಞಾನಿಗಳು. ಆದರೆ ಇದು ನಮ್ಮ ನಿಮ್ಮಂತಹ ಸಾಮಾನ್ಯ ಜನರಿಗೆ ಅನುಸರಿಸಲು ಕಷ್ಟವೆನಿಸುವುದು. ಇದೇ ಕಾರಣದಿಂದ ಧ್ಯಾನ ಮಾಡಲು ಮನಸ್ಸು ಒಪ್ಪುದವರಿಗೆ ಸುಲಭ ಉಪಾಯ ಇಲ್ಲಿದೆ .
ಮೊದಲಿಗೆ ಧ್ಯಾನ ಎಂದರೆ ಒಂದೇ ವಿಷಯದ ಬಗ್ಗೆ ಕೇಂದ್ರೀಕರಿಸುವುದು. ಇದೇ ಫಲಿತಾಂಶವನ್ನು ನೀಡುವ ಅನೇಕ ಬಗೆಯ ಕಾರ್ಯಗಳಲ್ಲಿ ನಿರತರಾದರೆ ನಾವು ಧ್ಯಾನದ ಸತ್ತ್ವವನ್ನು ಪಡೆಯಬಹುದು. ನಮ್ಮ ಚಿತ್ತದಲ್ಲಿ ಆಗುವಂತಹ ಅನೇಕ ನಿಷ್ಪ್ರಯೋಜಕ ಸಂಗತಿಗಳನ್ನು ಹೊರನೂಕಲು ಇದು ಸುಲಭ ಸಾಧನ. ಮನಸ್ಸು ಧನ್ಯಾತ್ಮಕ ಭಾವನೆಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. ಮನಸ್ಸಿನಲ್ಲಿ ಉದ್ಭವವಾಗುವ ಯೋಚನೆಗಳು ಸಂವೇದನೆಗಳ ತರಂಗಗಳು ನಮ್ಮ ಹಿಡಿತದಲ್ಲಿರುತ್ತದೆ. ಇದನ್ನು ಪಾಲಿಸಿದರೆ ಮನಸ್ಸಿನಲ್ಲಿ ನವೀನ ಅರಿವು ಮೂಡಲು ಪ್ರಾರಂಭಿಸುತ್ತದೆ. ಆಗ ನಮ್ಮ ನಿತ್ಯ ಕಾರ್ಯಗಳಲ್ಲಿ ಭಗವಂತನಿಗೆ ಸಮರ್ಪಣಾ ಭಾವದಿಂದ ಜೀವನದ ಪರಿಪೂರ್ಣತೆ ಅರಿವು ಮೂಡುವುದು. ಇದೇ ಜೀವನದಲ್ಲಿ ಆನಂದ ಶಾಂತಿಯನ್ನು ಜಾಗೃತಗೊಳಿಸಿ ಬದುಕನ್ನು ಸಾರ್ಥಕಗೊಳಿಸಬಹುದು.
ಧ್ಯಾನವನ್ನು ಈ ರೀತಿ ಕೂಡ ಮಾಡಬಹುದು
ಸಾಮಾನ್ಯ ವ್ಯಕ್ತಿಗಳು ತಮ್ಮ ನಿತ್ಯ ಜೀವನದಲ್ಲಿ ಮಾಡುವಂತಹ ಕಾರ್ಯಗಳಲ್ಲಿ ತಮಗೆ ಪ್ರಿಯವಾದ ಕೆಲಸವನ್ನು ಆರಿಸಿ ಆ ಕಾರ್ಯವನ್ನು ದಿನಾಲು ಮೂವತ್ತು ನಿಮಿಷಗಳ ಕಾಲ ಮಾಡಿರಿ. ಆದರೆ ನೆನಪಿನಲ್ಲಿಟ್ಟುಕೊಳ್ಳಿ ಒಂದೇ ಕಾರ್ಯವನ್ನು ಮಾಡಿರಿ ಬೇರೆಲ್ಲದನ್ನು ಬಿಟ್ಟು ಮನಸ್ಸನ್ನು ಒಂದೇ ಕಾರ್ಯದಲ್ಲಿ ಮಗ್ನರಾಗಿಸಿ. ಸಂಗೀತ ಹಾಡುವುದು, ಕೇಳುವುದು, ಬರೆಯುವುದು, ಓದುವುದು, ಅಡುಗೆ ಮಾಡುವುದು ಯಾವುದೇ ನಿಮಗೆ ಇಷ್ಟವಾದ ಕಾರ್ಯಗಳನ್ನು ಆರಿಸಿ ದಿನವೂ ಒಂದಿಷ್ಟು ಸಮಯ ಕಳೆಯಿರಿ. ಹೊಲಿಗೆ, ನೃತ್ಯ, ತೋಟಗಾರಿಕೆ, ಪೇಂಟಿಂಗ್, ಕ್ರಾಫ್ಟ್ ಏನೇ ಇರಬಹುದು ಆದರೆ ಆ ಮೂವತ್ತು ನಿಮಿಷಗಳಲ್ಲಿ ಒಂದೇ ಕೆಲಸವನ್ನು ಮಾಡಿ ಆನಂದಿಸಿ, ಪ್ರೀತಿಸಿ ಇತರ ಆಲೋಚನೆಗಳನ್ನು ದೂರವಿಡಿ. ಇದನ್ನು ರೂಡಿಮಾಡಿಕೊಂಡು ದಿನನಿತ್ಯ ಮಾಡಲು ಸಮಯ ಮೀಸಲಿಟ್ಟುಕೊಳ್ಳಿ. ನಿಮ್ಮಲ್ಲಿ ಆಗುವಂತಹ ಬದಲಾವಣೆಯನ್ನು ಅನುಭವಿಸಿ ಅದರ ಸ್ವಾದವನ್ನು ಸವಿಯಿರಿ. ನಮ್ಮ ವ್ಯಕ್ತಿತ್ವದಲ್ಲಿ ಹೊಸ ನಿಲುವು ಹೊಸ ಸಂಕಲ್ಪಗಳು ಸೃಷ್ಟಿಯಾಗುತ್ತದೆ. ಧ್ಯಾನವೆಂದರೆ ಬರೀ ಕುಳಿತು ಮಾಡುವ ಧ್ಯಾನವೆಂದು ಅದನ್ನ ತ್ಯಜಿಸಬೇಡಿರಿ. ಧ್ಯಾನವನ್ನು ಬೇರೆಯೇ ರೀತಿಯಲ್ಲಿ ಅನುಭವಿಸಿ ಹೀಗೆ ಮುಂದುವರಿದು ಒಂದು ದಿನ ಬೇರೆ ಕೆಲಸವನ್ನು ಬಿಟ್ಟು ಸ್ವಲ್ಪ ಹೊತ್ತು ಧ್ಯಾನ ಮಾಡುವ ಮನಸ್ಸಾಗುವುದು ಸತ್ಯ.
ನನ್ನ ಅನುಭವದ ಮಾತು
ಆ ಕೆಲಸ ಈ ಕೆಲಸವೆಂದು ಮನಸ್ಸು ಎಲ್ಲೆಲ್ಲೋ ಓಡುತ್ತಿತ್ತು. ಕುಳಿತು ಧ್ಯಾನ ಮಾಡುವುದು ಕಷ್ಟವೆನಿಸುತ್ತಿತ್ತು. ನಾನು ಅನೇಕ ಹವ್ಯಾಸಗಳನ್ನು ನನ್ನನ್ನು ತೊಡಗಿಸಿಕೊಂಡಿದ್ದೆ. ಮೊದಲಿಗೆ ಮಲ್ಟಿಟಾಸ್ಕಿಂಗ್ ಮಾಡುತ್ತಿದ್ದೆ. ಕ್ರಮೇಣ ಒಂದೊಂದೇ ಹವ್ಯಾಸವನ್ನು ಮಾಡಲು ಶುರುಮಾಡಿದೆ. ಪ್ರತಿಕ್ಷಣ ಅನುಭವಿಸಬೇಕೆಂದು ಪ್ರತಿ ಹವ್ಯಾಸದಲ್ಲಿ ತೊಡಗಿದಾಗ ಅದರ ಮೇಲೆ ಮಗ್ನಳಾದೆ. ಅದರಲ್ಲಿ ಸಿಗುವ ಆನಂದ ಹೇಳಲು ಪದಗಳೇ ಸಾಕಾಗುವುದಿಲ್ಲ. ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ಈಗ ಕೆಲವೊಮ್ಮೆ ಸುಮ್ಮನೆ ಕುಳಿತು ಧ್ಯಾನ ಮಾಡುವ ಆಸೆಯಾಗಲು ಆರಂಭವಾಗಿದೆ. ಕುಳಿತು ಧ್ಯಾನವನ್ನೂ ಮಾಡುತ್ತೇನೆ. ಬದುಕು ಯಾವ ರೀತಿಯಲ್ಲಿ ಕಾಣಬೇಕೆಂದು ಅರಿವು ಮೂಡಿದೆ. ಮನಸ್ಸು ಶಾಂತವಾಗಿ ಜೀವನ ಏನೆಂಬುದು ತಿಳಿಯಲು ಸಾಧ್ಯವಾಗಿದೆ .
ಧ್ಯಾನ ಮಾಡುವ ಮೂಲ ಉದ್ದೇಶ ಆತ್ಮಸ್ವರೂಪವನ್ನು ತಿಳಿದುಕೊಳ್ಳುವುದು. ನಾನು ಯಾರು ಎನ್ನುವುದನ್ನು ಸಂಶೋಧನೆ ಮಾಡುವುದು. ಆದರೆ ನಮ್ಮಲ್ಲಿ ಆ ಇಂಗಿತವೇ ಹುಟ್ಟಿಲ್ಲದಿದ್ದರೆ ಏನು ಮಾಡುವುದು? ಆದರೆ ಧ್ಯಾನವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕಿನಲ್ಲಿ ಬೇರೆ ಯಾವುದರ ಅವಶ್ಯಕತೆ ಬೀಳುವುದಿಲ್ಲ. ಆದರೆ ನಾವು ಆ ಹಂತಕ್ಕೆ ತಲುಪಲಿಲ್ಲ. ಅಲ್ಲಿ ತಲುಪಬೇಕಾದರೆ ತಯಾರಿಕೆ ಅವಶ್ಯಕ. ಅದು ಸಾಮಾನ್ಯರಿಗೆ ತಿಳಿಯುವುದಿಲ್ಲ. ನಾವು ಕಾಲವನ್ನು ಪೋಲು ಮಾಡುತ್ತಿರುತ್ತೇವೆ. ಈ ಪೋಲು ಮಾಡುವ ಸಮಯದಲ್ಲಿ ಅನೇಕ ಸಂಕಷ್ಟಗಳಲ್ಲಿ ಸಿಲುಕುತ್ತೇವೆ. ಆ ಕಷ್ಟಗಳನ್ನು ದೂರ ಸರಿಸಲು ಮನಸ್ಸು ಶಾಂತಗೊಳಿಸಲು ಧ್ಯಾನದ ಮೊರೆ ಹೋಗುತ್ತೇವೆ. ಆದರೆ ನಮ್ಮ ಮನಸ್ಸು ಅಷ್ಟು ಚಂಚಲವಾಗಿದ್ದುದರಿಂದ ಕುಳಿತುಕೊಂಡು ಧ್ಯಾನ ಮಾಡಲು ಮನಸ್ಸು ಕೇಳುವುದಿಲ್ಲ. ಆಗ ಬೇರೆ ರೀತಿಯಲ್ಲಿ ಧ್ಯಾನ ಮಾಡಬಹುದು ನಮಗೆ ಇಷ್ಟವಾಗುವಂಥ ರೀತಿಯಲ್ಲೇ ಧ್ಯಾನ ಮಾಡುವುದು ಒಳ್ಳೆಯದು

ಡಾ. ಹರ್ಷಾ ಕಾಮತ್


---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!