ಯಾವುದೇ ಒಂದು ಸ್ತಿರಾಸ್ತಿ ಅಂದರೆ ಭೂಮಿ ಅಥವಾ ಕಟ್ಟಡದ ಮೇಲೆ ಇಬ್ಬರು ಅಥವಾ ಇಬ್ಬರಿಗಿಂತ ಹೆಚ್ಚು ವ್ಯಕ್ತಿಗಳು ಜಂಟಿಯಾಗಿ ಹಕ್ಕನ್ನು ಹೊಂದಿದ್ದಲ್ಲಿ ಅಂತಹ ಆಸ್ತಿಯನ್ನು ಜಂಟಿ ಹಕ್ಕಿನ ಆಸ್ತಿ (Joint right property) ಎನ್ನುತ್ತಾರೆ. ಈ ರೀತಿಯ ಜಂಟಿ ಹಕ್ಕು ಸಾಮಾನ್ಯವಾಗಿ ಹಿರಿಯರಿಂದ ಅಂದರೆ ಮೂಲ ಹಕ್ಕುದಾರರ ವಾರೀಸುತನದ ಹಕ್ಕಿನಿಂದ ಅಥವಾ ಸ್ತಿರಾಸ್ತಿಯನ್ನು ಜಂಟಿಯಾಗಿ ಖರೀದಿಸುವುದರಿಂದ ಪ್ರಾಪ್ತಿಯಾಗಬಹುದು. ಜಂಟಿ ಹಕ್ಕಿನ ಸ್ತಿರಾಸ್ತಿಯ ಹಕ್ಕುದಾರರು ಸಹಜವಾಗಿ ಮತ್ತು ಕಾನೂನು ಸಮ್ಮತವಾಗಿ ಸ್ವತ್ತಿನ ಎಲ್ಲಾ ಸಂಪೂರ್ಣ ಭಾಗದಲ್ಲಿ ಅವಿಭಾಜ್ಯ ಹಕ್ಕನ್ನು ಹೊಂದಿರುತ್ತಾರೆ ಮತ್ತು ಇಂತಹ ಆಸ್ತಿಯ ಸ್ವಾಧೀನತೆಯನ್ನು ಕಾನೂನಿನ ಪ್ರಕಾರ ಜಂಟಿ ಹಕ್ಕಿನ ಸ್ವಾಧೀನತೆ ಎಂತ ಪರಿಗಣಿಸಬೇಕಾಗುತ್ತದೆ. ಜಂಟಿ ಹಕ್ಕಿನ ಆಸ್ತಿಗೆ ಅಥವಾ ಅದರಲ್ಲಿರುವ ಕಟ್ಟಡಕ್ಕೆ ಸಂಬಂಧಪಟ್ಟ ಆರ್. ಟಿ. ಸಿ., ಅಥವಾ ಇತರ ಯಾವುದೇ ಕಂದಾಯ ದಾಖಲೆಗಳು ಜಂಟಿ ಹಕ್ಕುದಾರರ ಪೈಕಿ ಯಾರಾದರೂ ಒಬ್ಬರ ಹೆಸರಿಗೆ ನಮೂದು ಆಗಿರುವ ಏಕ ಮಾತ್ರ ಕಾರಣದಿಂದ ಅಥವಾ ಅದರಲ್ಲಿ ಇರುವ ಯಾವುದೇ ಕಟ್ಟಡದಲ್ಲಿ ಜಂಟಿ ಹಕ್ಕುದಾರರ ಪೈಕಿ ಯಾರದರೂ ಒಬ್ಬರು ಅಥವಾ ಅವರ ವಾರೀಸುದಾರರು ವಾಸ ಮಾಡಿಕೊಂಡು ಬರುವುದರಿಂದ ಬಾಕಿ ಉಳಿದ ಹಕ್ಕುದಾರರು ಅಥವಾ ಅವರ ವಾರೀಸುದಾರರು ಅಂತಹ ಸ್ತಿರಾಸ್ತಿ ಅಥವಾ ಕಟ್ಟಡದ ಮೇಲಿನ ತಮ್ಮ ನ್ಯಾಯ ಸಮ್ಮತವಾದ ಜಂಟಿ ಹಕ್ಕನ್ನು ಕಳೆದುಕೊಳ್ಳುವುದಿಲ್ಲ. ಆಸ್ತಿಯ ವಿಭಾಗದ ಸಂದರ್ಭದಲ್ಲಿ ಪ್ರತಿಯೊಬ್ಬ ಜಂಟಿ ಹಕ್ಕುದಾರ ತನ್ನ ಜಂಟಿ ಹಕ್ಕಿನ ಸ್ಥಳ ಅಥವಾ ಕಟ್ಟಡದಲ್ಲಿ ತನಗೆ ಸಿಗಬೇಕಾದ ನ್ಯಾಯಬದ್ದವಾದ ಪಾಲನ್ನು ಕೇಳಿ ಪಡಕೊಳ್ಳಲು ಹಕ್ಕುದಾರನಾಗಿರುತ್ತಾನೆ. ಒಂದು ವೇಳೆ ಆಸ್ತಿ ವಿಭಜನೆಯ ಸಂದರ್ಭದಲ್ಲಿ ಅದರಲ್ಲಿ ಇರುವ ವಾಸದ ಅಥವಾ ವಾಣಿಜ್ಯ ಕಟ್ಟಡವನ್ನು ವಾಸ್ತವಿಕವಾಗಿ ವಿಭಾಗಿಸಲು ಅಸಾಧ್ಯವಾದಲ್ಲಿ ಅಂತಹ ಕಟ್ಟಡವನ್ನು ಏಲಂ ಮೂಲಕ ಜಂಟಿ ಹಕ್ಕುದಾರರ ನಡುವೆ ಯಾರಿಗಾದರೂ ಮಾರಾಟ ಮಾಡಿ ಏಲಂ ಮೂಲಕ ಬರುವ ಹಣವನ್ನು ಪ್ರತಿಯೊಬ್ಬ ಜಂಟಿ ಹಕ್ಕುದಾರರು ಸಮಾನವಾಗಿ ಹಂಚಿಕೊಳ್ಳಬೇಕಾಗುತ್ತದೆ. ಜಂಟಿ ಹಕ್ಕಿನ ಆಸ್ತಿಯ ಹಕ್ಕುದಾರರ ಪೈಕಿ ಎಲ್ಲರೂ ಖುದ್ದಾಗಿ ಅಂದರೆ ಸ್ವತಃ ಅದರಲ್ಲಿ ವಾಸ ಮಾಡಬೇಕೆಂಬ ಕಡ್ಡಾಯವಾದ ನಿಯಮ ಇರುವುದಿಲ್ಲ, ಮತ್ತು ಆಸ್ತಿ ಅಥವಾ ಕಟ್ಟಡದಿಂದ ದೂರದಲ್ಲಿ ಅಥವಾ ಪ್ರತ್ಯೇಕವಾಗಿ ವಾಸಮಾಡಿಕೊಂಡು ಬರುವ ಕಾರಣದಿಂದ ಜಂಟಿ ಹಕ್ಕುದಾರ ಆಸ್ತಿಯ ಮೇಲಿನ ತನ್ನ ಜಂಟಿ ಹಕ್ಕನ್ನು ಕಳೆದುಕೊಳ್ಳುವುದಿಲ್ಲ. ಅದರ ಬದಲಾಗಿ ಜಂಟಿ ಆಸ್ತಿಯ ಉತ್ಪನ್ನವನ್ನು ಆಸ್ತಿಯಲ್ಲಿರುವ ಜಂಟಿ ಹಕ್ಕುದಾರರ ಪೈಕಿ ಯಾರಾದರೂ ಇತರ ಜಂಟಿ ಹಕ್ಕುದಾರರಿಗೆ ಹಂಚದೇ ತಮ್ಮಷ್ಟಕ್ಕೆ ಉಪಯೋಗಿಸಿಕೊಂಡು ಬಂದಲ್ಲಿ ಮುಂದೆ ಆಸ್ತಿ ವಿಭಜನೆಯ ಸಂದರ್ಭದಲ್ಲಿ ಆತ ತಾನು ಪಡಕೊಂಡ ಉತ್ಪತ್ತಿ ವ ಆದಾಯದ ನ್ಯಾಯಬದ್ಧ ಪಾಲನ್ನು ಸಹಾ ಇತರ ಹಕ್ಕುದಾರರಿಗೆ ನೀಡಬೇಕಾಗುತ್ತದೆ. ಸ್ವತ್ತು ವರ್ಗಾವಣೆ ಅಧಿನಿಯಮ 1882(ಟ್ರಾನ್ಸ್ಫರ್ ಆಫ್ ಪ್ರಾಪರ್ಟಿ ಆಕ್ಟ್ 1882) ಪ್ರಕಾರ ಜಂಟಿ ಹಕ್ಕಿನ ಆಸ್ತಿಯಲ್ಲಿ ಯಾರಾದರೂ ಒಬ್ಬ ಜಂಟಿ ಹಕ್ಕುದಾರ ಇತರ ಹಕ್ಕುದಾರರ ಲಿಖಿತವಾದ ಒಪ್ಪಿಗೆ ಪಡೆಯದೇ ತನ್ನಷ್ಟಕ್ಕೇ ತಾನು ಯಾವುದೇ ರೀತಿಯ ಕೃಷಿ, ಕಟ್ಟಡ ನಿರ್ಮಾಣ ಅಥವಾ ರಿಪೇರಿ ಮುಂತಾದ ಅಭಿವೃದ್ಧಿ ಕಾರ್ಯಕ್ಕೆ ತನ್ನ ಹಣವನ್ನು ವಿನಿಯೋಗಿಸಿದ ಕಾರಣದಿಂದ ಆತ ಅಂತಹ ಆಸ್ತಿ ಅಥವಾ ಕಟ್ಟಡದ ಮೇಲೆ ತಾನು ಹೊಂದಿರುವ ಹಕ್ಕಿಗಿಂತ ವಿಶೇಷವಾದ ಅಥವಾ ಹೆಚ್ಚಿನ ರೀತಿಯ ಹಕ್ಕನ್ನು ಹೊಂದುವುದಿಲ್ಲ, ಕಾರಣ ಜಂಟಿ ಹಕ್ಕಿನ ಆಸ್ತಿಯಲ್ಲಿ ಯಾವುದೇ ಒಬ್ಬ ಹಕ್ಕುದಾರ ಇತರ ಜಂಟಿ ಹಕ್ಕುದಾರರಿಂದ ಲಿಖಿತವಾಗಿ ಒಪ್ಪಿಗೆ ಪಡೆಯದೆ ಮಾಡುವ ಯಾವುದೇ ಅಭಿವೃದ್ಧಿ ಕಾನೂನು ಸಮ್ಮತವಾಗಿರುವುದಿಲ್ಲ ಮತ್ತು ಅದಕ್ಕೆ ಬಾಕಿ ಉಳಿದ ಜಂಟಿ ಹಕ್ಕುದಾರರು ಬಾದ್ಯಸ್ಥರಾಗುವುದಿಲ್ಲ.

ಮೊ: 98452 32490/ 9611682681