ಕಾರ್ಕಳ : ಕಾರ್ಕಳ ಉತ್ಸವದ ಅಂಗವಾಗಿ ಯಕ್ಷ ರಂಗಾಯಣದ ಭೂಮಿ ಪೂಜೆ ಕೋಟಿ ಚೆನ್ನಯ್ಯ ಥೀಮ್ ಪಾರ್ಕ್ ಆವರಣದಲ್ಲಿ ಮಾ.10ರಂದು ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಅವರು ಮಾತನಾಡಿ, ಕರಾವಳಿ ಜಿಲ್ಲೆಗಳಿಗೆ ಕನ್ನಡ ಸಂಸ್ಕೃತಿ ಇಲಾಖೆಯಿಂದ ಕೊಡುಗೆಗಳನ್ನು ಕೊಡಬೇಕು ಎನ್ನುವ ಉದ್ದೇಶದಿಂದ ಮೊದಲ ಪ್ರಯೋಗವಾಗಿ ಕರ್ನಾಟಕದ 6 ನೇ ರಂಗಾಯಣ ಕಾರ್ಕಳದಲ್ಲಿ ಸ್ಥಾಪನೆಯಾಗಲಿದೆ ಎಂದರು.
ಕರಾವಳಿಯ 2 ಜಿಲ್ಲೆಗಳ ನಾಟಕ, ಯಕ್ಷಗಾನ ಕಲೆಗಳಿಗೆ ಸಂಬಂಧಿಸಿದಂತಹ ಚಟುವಟಿಕೆಗಳ ಕೇಂದ್ರ ಕಾರ್ಕಳವಾಗಬೇಕು. 10 ದಿನಗಳ ಕಾಲ ನಡೆಯಲಿರುವ ಉತ್ಸವದಲ್ಲಿ ಎಲ್ಲರೂ ಸಮಯಪ್ರಜ್ಞೆಯಿಂದ ಜೊತೆಗೂಡಿ ಪಾಲ್ಗೊಳ್ಳೋಣ,ಕಾರ್ಕಳದ ಮಣ್ಣಿನಲ್ಲಿ ಕಲೆ, ಶಿಲ್ಪಕಲೆ, ಸಾಹಿತ್ಯಗಳ ಸೊಗಡಿದೆ, ಇದು ಮುಂದಿನ ಎಲ್ಲಾ ಪೀಳಿಗೆಗೆ ಹಸ್ತಾಂತರವಾದಲ್ಲಿ ಮಾತ್ರ ಕಲೆಗಳ ಉಳಿವು ಸಾಧ್ಯ ಎಂದರು.
ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್ ರಾಮ್ ಸುಳ್ಯ ಮಾತನಾಡಿ, ಯಕ್ಷಗಾನವನ್ನು ಭಾರತದ ಗಡಿ ದಾಟಿಸಿ ಅದನ್ನು ಜಗತ್ತಿಗೆ ಪರಿಚಯಿಸಿದ್ದು ಕರಾವಳಿಯ ಕೋಟ ಶಿವರಾಮ ಕಾರಂತರು. ಬಿ.ವಿ.ಕಾರಂತರು ಯಕ್ಷಗಾನದಲ್ಲಿ ಅತ್ಯದ್ಭುತ ಪ್ರಯೋಗವನ್ನು ಮಾಡಿ ದೇಶಾದ್ಯಂತ ಯಕ್ಷಗಾನದ ಅಭಿಮಾನಿಗಳನ್ನು ಸೃಷ್ಟಿಸಿದ್ದಾರೆ.ಯಕ್ಷಗಾನ ಕಲಾವಿದರಿಗೆ ಪುನಶ್ಚೇತನ ಕಾರ್ಯವಾಗಿ, ಆಧುನಿಕ ರಂಗಭೂಮಿಯ ಪರಿಕಲ್ಪನೆಯೊಂದಿಗೆ, ನಮ್ಮ ಪೌರಾಣಿಕ ಸಂಸ್ಕೃತಿಯನ್ನಿಟ್ಟುಕೊಂಡು ರಂಗಭೂಮಿಯನ್ನು ಕಟ್ಟುವಂತಹ ಕಾರ್ಯ ಯಕ್ಷರಂಗಾಯಣದ ಮೂಲಕ ನಡೆಯಲಿ ಎಂದರು.
ಕಾರ್ಕಳ ಉತ್ಸವದ ವಿಶೇಷ ಆಕರ್ಷಣೆ ಹೆಲಿಕಾಪ್ಟರ್ ವಿಹಾರಕ್ಕೆ ಚಾಲನೆ ನೀಡಲಾಯಿತು.
ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಕೂರ್ಮಾ ರಾವ್, ಡಾ. ನವೀನ್ ಭಟ್, ಎನ್. ವಿಷ್ಣುವರ್ಧನ್, ಪ್ರಕಾಶ್ ಜಿ.ಟಿ ನಿಟ್ಟಾಳಿ, ಎನ್ ಮಲ್ಲಿಕಾರ್ಜುನ ಸ್ವಾಮಿ, ಭುವನೇಂದ್ರ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪದ್ಮನಾಭ ಗೌಡ, ಹವ್ಯಾಸಿ ಯಕ್ಷಗಾನ ಕಲಾವಿದ ರಘುನಾಥ ನಾಯಕ್, ಪುರಸಭಾ ಅಧ್ಯಕ್ಷೆ ಸುಮಾ ಕೇಶವ್ ಉಪಸ್ಥಿತರಿದ್ದರು.