Thursday, May 26, 2022
spot_img
Homeಸುದ್ದಿ10 ದಿನಗಳ ಅದ್ದೂರಿಯ ಕಾರ್ಕಳ ಉತ್ಸವಕ್ಕೆ ಚಾಲನೆ

10 ದಿನಗಳ ಅದ್ದೂರಿಯ ಕಾರ್ಕಳ ಉತ್ಸವಕ್ಕೆ ಚಾಲನೆ

ಕಾರ್ಕಳ : ಅಚ್ಚುಕಟ್ಟಾಗಿ ನಡೆಯುತ್ತಿರುವ ಕಾರ್ಕಳ ಉತ್ಸವದ ಹಿಂದೆ ಸಾವಿರಾರು ಜನ ಸ್ವಯಂ ಸೇವಕರ ಪರಿಶ್ರಮವಿದೆ. ಎಲ್ಲಾ ಕ್ಷೇತ್ರಗಳನ್ನು ಒಗ್ಗೂಡಿಸಿ ವಿಶಿಷ್ಟವಾದ 10 ದಿನಗಳ ಕಾರ್ಕಳ ಉತ್ಸವ ನಡೆಯುತ್ತಿದ್ದು ಈ ಮೂಲಕ ಜನರಲ್ಲಿ ಪ್ರೀತಿ, ಅಭಿಮಾನಗಳು ನಿರ್ಮಾಣವಾಗಬೇಕು. ಕಾಂತಾವರದ ಕನ್ನಡ ಸಂಘ ಮತ್ತು ನಂದಳಿಕೆಯ ಕವಿ ಮುದ್ದಣ್ಣನವರ ಕೊಡುಗೆ ಕಾರ್ಕಳಕ್ಕೆ ಮಹತ್ವವಾದುದು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.

ಅವರು ಮಾ.10ರಂದು ಗಾಂಧಿ ಮೈದಾನದಲ್ಲಿ ನಡೆದ ಕಾರ್ಕಳ ಉತ್ಸವದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಕಳ ಉತ್ಸವ ಒಂದು ಸಮುದಾಯಕ್ಕೆ, ಒಂದು ವ್ಯಕ್ತಿಗಾಗಿ ನಡೆಸುತ್ತಿರುವಂತಹ ಉತ್ಸವವಲ್ಲ, ಕಾರ್ಕಳ ಉತ್ಸವದಲ್ಲಿ ಎಲ್ಲರ ಹೆಜ್ಜೆಯೂ ಮೂಡಬೇಕು, ಎಲ್ಲರೂ ಧ್ವನಿಯಾಗಬೇಕು, ಎಲ್ಲಾ ಕುಟುಂಬಗಳು ಕಾರ್ಕಳ ಉತ್ಸವದಲ್ಲಿ ಪಾಲ್ಗೊಳ್ಳಬೇಕು ಎಂದರು. 

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ , ಜಾನಪದ ಸಾಹಿತ್ಯ ಕಲೆ ಅಡಗಿರುವ ಈ ಪಂಚವರ್ಣದ ಮಣ್ಣಿನಲ್ಲಿ ಸ್ವರ್ಣ ಕಾರ್ಕಳ ಸ್ವಚ್ಚ ಕಾರ್ಕಳದ ಕನಸು ಸಾಕಾರಗೊಳ್ಳುತ್ತಿರುವಾಗಲೇ, ಸಾಂಸ್ಕೃತಿಕ ಲೋಕವನ್ನೇ ಕಾರ್ಕಳಕ್ಕೆ ತಂದಿಡುತ್ತಿದ್ದಾರೆ. ಕಾರ್ಕಳದಲ್ಲಿ ಗಂಡುಕಲೆ ಯಕ್ಷಗಾನವನ್ನು ರಾಜ್ಯಕ್ಕೆ ಪರಿಚಯಿಸುವುದಕ್ಕೆ ರಂಗಾಯಣವನ್ನು ಕಾರ್ಕಳದಲ್ಲಿ ಪ್ರಾರಂಭಿಸಿದ್ದಾರೆ. ಕಾರ್ಮಿಕರನ್ನು ತನ್ನೊಂದಿಗೆ ಮೊದಲು ಹೆಲಿಕಾಪ್ಟರ್‌ ವಿಹಾರಕ್ಕೆ ಕರೆದುಕೊಂಡು ಹೋಗುವುದರ ಮೂಲಕ ಅಸಾಧ್ಯವನ್ನು ಸಾಧ್ಯ ಮಾಡಿ ತೋರಿಸಿಕೊಟ್ಟವರು ಸುನಿಲ್‌ ಕುಮಾರ್ ಅವರು.ಸಚಿವನಾಗಿ ಮೊದಲು 1,40,000 ಮನೆಗಳಿಗೆ ಬೆಳಕು ಕಾರ್ಯಕ್ರಮದ ಮೂಲಕ ವಿದ್ಯುತ್ ಸಂಪರ್ಕ ಒದಗಿಸುವ ಕಾರ್ಯ ಮಾಡಿರುವುದು ಶ್ಲಾಘನೀಯ. ಕುಡಿಯುವ ನೀರು,  ಆರೋಗ್ಯ, ರಸ್ತೆ, ಅಭಿವೃದ್ಧಿ ಮಾಡಿ ಕಾರ್ಕಳ ಚಿತ್ರಣವನ್ನೇ ಬದಲಿಸಿದ್ದಾರೆ ಎಂದರು.  

ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಮಾತನಾಡಿ ,ಕಾರ್ಕಳ ವೈವಿದ್ಯಮಯವಾದ ನಗರ ಅದಕ್ಕೆ ಇಲ್ಲಿರುವ ಧಾರ್ಮಿಕ ಕ್ಷೇತ್ರಗಳು, ಆಚರಣೆಗಳೇ ಸಾಕ್ಷಿ. ಕಾರ್ಕಳ ಉತ್ಸವದ ಕನಸನ್ನು ನನಸಾಗಿರುವುದು ಸಚಿವರ ಪರಿಶ್ರಮ ಮತ್ತು ಕಾರ್ಯಕರ್ತರ ಸಹಕಾರದ ಫಲ. ಎಲ್ಲರೂ ಒಗ್ಗೂಡಿ ಕಾರ್ಕಳ ಉತ್ಸವದ ಕಾರ್ಯಕ್ರಮಗಳನ್ನು ಚಂದಗಾಣಿಸಬೇಕು ಎಂದರು. 

ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಚಿವ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಅಂಗಾರ ಮಾತನಾಡಿ ಇತಿಹಾಸವನ್ನು ನಿರ್ಮಿಸಬೇಕಾದರೆ ಅದನ್ನು ತಿಳಿದುಕೊಂಡು ನಮ್ಮ ಜೀವನದಲ್ಲಿ ಆ ವಿಚಾರಗಳನ್ನು ರೂಢಿಸಿಕೊಂಡಾಗ ಇತಿಹಾಸವನ್ನು ನಿರ್ಮಾಣ ಮಾಡಬಹುದು. ಕಾರ್ಕಳ ತಾಲೂಕಿನಲ್ಲಿರುವ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಯತ್ನಗಳು ನಡೆಯುತ್ತಿವೆ. ವಿಚಾರಗಳಿಗೆ ಮಹತ್ವವನ್ನು ಕೊಟ್ಟಾಗ ನಮ್ಮ ಯೋಚನೆಗಳಲ್ಲಿ ಬದಲಾವಣೆಯನ್ನು ಕಾಣಬಹುದು. ಮನುಷ್ಯನಿಗೆ ವಿಚಾರ ಶ್ರೀಮಂತಿಕೆ ಇದ್ದಾಗ ಇಡೀ ಜಗತ್ತಿಗೆ ಮೌಲ್ಯಗಳ ಬೆಳಕನ್ನು ಕೊಡಬಹುದು. ಕಾರ್ಕಳ ಉತ್ಸವ ಜನರ ಜೀವನದಲ್ಲಿ ಹುಮ್ಮಸ್ಸು ತರುವುದರೊಂದಿಗೆ ನಿರಂತರವಾಗಿರಲಿ ಎಂದರು.

ಈ  ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದಂತಹ ರೋಹಿತ್‌ ಕುಮಾರ್‌ ಕಟೀಲ್‌ ಮತ್ತು ವಿದ್ಯಾ ಪೈ ಅವರನ್ನು ಸನ್ಮಾನಿಸಲಾಯಿತು.                      

 ಕಾರ್ಯಕ್ರಮದ ಅತಿಥಿಗಳಾಗಿ ವಿಧಾನ ಪರಿಷತ್‌ನ ಮಾಜಿ ಮುಖ್ಯ ಸಚೇತಕ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ. ಮಣಿರಾಜ್‌ ಶೆಟ್ಟಿ, ಕುಂದಾಪುರದ ಎಸಿಪಿ ರಾಜು, ಕಾರ್ಕಳ ಪುರಸಭಾ ಅಧ್ಯಕ್ಷೆ ಸುಮಾ ಕೇಶವ್‌, ಉಪಾಧ್ಯಕ್ಷೆ ಪೂರ್ಣಿಮಾ ಪಲ್ಲವಿ, ಸರಕಾರದ ಕಾರ್ಯದರ್ಶಿ ಎನ್‌ ಮಂಜುಳಾ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಡುಪಿ  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯತ್‌ ಉಡುಪಿ ಡಾ. ನವೀನ್‌ ಭಟ್‌ ವೈ, ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌ ವಿಷ್ಣುವರ್ಧನ್‌, ಜಂಟಿ ನಿರ್ದೇಶಕ ವಿ. ಎನ್‌ ಮಲ್ಲಿಕಾರ್ಜುನ ಸ್ವಾಮಿ ಉಪಸ್ಥಿತರಿದ್ದರು.

ಆರತಿ ಪೈ ಮತ್ತು ಬಳಗದವರು ನಾಡಗೀತೆಯನ್ನು ಹಾಡಿದರು. ಕೆ.ಎಮ್‌,ಎಫ್‌ ಮಂಗಳೂರಿನ ನಿರ್ದೇಶಕ ನರಸಿಂಹ ಕಾಮತ್ ಸ್ವಾಗತಿಸಿ, ನವೀನ್‌ ನಾಯಕ್‌ ವಂದಿಸಿದರು.

ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಮತ್ತು ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!