ಕಾರ್ಕಳ : ಮಾ. 10 ರಿಂದ 20 ರವರೆಗೆ ನಡೆಯಲಿರುವ ಕಾರ್ಕಳ ಉತ್ಸವದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುವ ಕಾರಣ ಮೊಬೈಲ್ ನೆಟ್ವರ್ಕ್ ಸಮಸ್ಯೆ ತಲೆದೋರದಂತೆ ಹೆಚ್ಚುವರಿಯಾಗಿ 2 ಮೊಬೈಲ್ ಟವರ್ ಅಳವಡಿಕೆಯಾಗಲಿದೆ. ಜಿಯೋ ಹಾಗೂ ಏರ್ಟೆಲ್ ಟವರ್ಗಳನ್ನು ಹೊಸದಾಗಿ ಸ್ಥಾಪಿಸುವುದರೊಂದಿಗೆ ಟವರ್ ಸಾಮರ್ಥ್ಯವನ್ನು ಕೂಡಾ ಹೆಚ್ಚಿಸಲಾಗುವುದು.
ಮಾ. 9ರಂದು ವಿಶೇಷ ಅಂಚೆ ಕವರ್ ಬಿಡುಗಡೆ
ಕಾರ್ಕಳ ಉತ್ಸವದ ಅಂಗವಾಗಿ ಮಾ. 9ರಂದು ಸಂಜೆ 4 ಗಂಟೆಗೆ ಗಾಂಧಿ ಮೈದಾನದಲ್ಲಿ ಜಸ್ಟಿಸ್ ಕೆ. ಎಸ್. ಹೆಗ್ಡೆ, ಶಿಲ್ಪಿ ರೆಂಜಾಳ ಗೋಪಾಲಕೃಷ್ಣ ಶೆಣೈ, ಶಿಲ್ಪಿ ಶ್ಯಾಮರಾಯ ಆಚಾರ್ಯ ಸ್ಮರಣಾರ್ಥ ಅಂಚೆ ಲಕೋಟೆ ಬಿಡುಗಡೆಗೊಳಿಸಲಾಗುವುದು ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಹೆಚ್ಚುವರಿ ವೈದ್ಯಕೀಯ ಸೌಲಭ್ಯ
ಕಾರ್ಕಳ ಉತ್ಸವದ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಿಂದ ಹೆಚ್ಚುವರಿ ವೈದ್ಯಕೀಯ ಸೌಲಭ್ಯದ ಜೊತೆಗೆ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗುವುದು ಎಂದು ತಾಲೂಕು ವೈದ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದೆ.
ಹೆಲಿಕಾಪ್ಟರ್ ನಿಲ್ಲುವ ಹೆಲಿಪ್ಯಾಡ್ನಲ್ಲಿ ಮಾರ್ಚ್ 10 ರಿಂದ 14 ರವರೆಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ ೬ರ ವರೆಗೆ, ಕಾರ್ಕಳ ಗಾಂಧಿಮೈದಾನದಲ್ಲಿ ನಡೆಯುವ ಸಾಂಸ್ಕೃತಿಕ ಸಂದರ್ಭದಲ್ಲಿ ಮಾರ್ಚ್ ೧೦ರಿಂದ 17 ರವರೆಗೆ ಸಂಜೆ 6 ರಿಂದ 10 ರವರೆಗೆ, ವಸ್ತು ಪ್ರದರ್ಶನ ಮಳಿಗೆಯಲ್ಲಿ ಬೆಳಗ್ಗೆ 11 ಗಂಟೆಯಿಂದ ರಾತ್ರಿ 11 ರವರೆಗೆ ವೈದ್ಯರು ಹಾಗೂ ನರ್ಸ್ಗಳನ್ನು ಒಳಗೊಂಡ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗುವುದು. ಇದರಲ್ಲಿ ಸರಕಾರಿ ವೈದ್ಯರ ಜೊತೆಗೆ ಆಯುಷ್ ವೈದ್ಯರು ಕೂಡಾ ಸೇವೆ ಸಲ್ಲಿಸಲಿದ್ದಾರೆ.
ಮಾರ್ಚ್ ೧೪ರಿಂದ ವಸ್ತು ಪ್ರದರ್ಶನ ಮಳಿಗೆಯ ಬಳಿ ಹಾಗೂ ಸ್ವರಾಜ್ ಮೈದಾನದಲ್ಲಿ ಪ್ರತ್ಯೇಕ ೨ ಕ್ಲಿನಿಕ್ಗಳನ್ನು ತೆರೆಯಲಾಗುವುದು. ಮಾರ್ಚ್ 10 ರಿಂದ ಗಾಂಧಿ ಮೈದಾನದಲ್ಲಿ ಆರೋಗ್ಯ ಕ್ಲಿನಿಕ್ ತೆರೆಯಲಾಗುವುದು.
ಉತ್ಸವದ ಕೊನೆಯ 3 ದಿನ ಸರಕಾರಿ ಆಸ್ಪತ್ರೆಯಲ್ಲಿ 24 ಗಂಟೆ ವೈದ್ಯರು ಲಭ್ಯರಿರುತ್ತಾರೆ. ಈ ಎಲ್ಲಾ ಕಾರ್ಯದಲ್ಲಿ 50 ವೈದ್ಯರು ಸೇರಿದಂತೆ ಸುಮಾರು 150 ವೈದ್ಯಕೀಯ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ.
ಉಚಿತ ಚಲನಚಿತ್ರ ಪ್ರದರ್ಶನ
ಮಾ. 11ರಿಂದ 13ರವರೆಗೆ ಕಾರ್ಕಳದ ಪ್ಲಾನೆಟ್ ಮತ್ತು ರಾಧಿಕಾ ಚಿತ್ರ ಮಂದಿರದಲ್ಲಿ ಉಚಿತ ಚಲನಚಿತ್ರ ಪ್ರದರ್ಶನದ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ದಿನ ಬೆಳಿಗ್ಗೆ 10, ಮಧ್ಯಾಹ್ನ 1 ಹಾಗೂ ಸಂಜೆ 3-30ಕ್ಕೆ ಚಲನಚಿತ್ರ ಪ್ರದರ್ಶನಗೊಳ್ಳಲಿದೆ.
ಯಾವ್ಯಾವ ಚಿತ್ರ ಪ್ರದರ್ಶನ
ಉರಿ ದಿ ಸರ್ಜಿಕಲ್ ಸ್ಟ್ರೈಕ್, ಮಿಶನ್ ಮಂಗಲ್ (ಹಿಂದಿ), ಮೋಹನದಾಸ, ಯುವರತ್ನಾ, ರಾಜಕುಮಾರ, ರಾಬರ್ಟ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಒಂದು ಮೊಟ್ಟೆಯ ಕತೆ (ಕನ್ನಡ), ಮದಿಪು, ಪಡ್ಡಾಯಿ, ಗಿರಿಗಿಟ್, ಗಮ್ಜಾಲ್ (ತುಳು) ಚಲನಚಿತ್ರಗಳು ಮೂಡಿಬರಲಿವೆ.