Thursday, May 19, 2022
spot_img
Homeಸಾಹಿತ್ಯ/ಸಂಸ್ಕೃತಿಕಗ್ಗದ ಸಂದೇಶ - ಬದುಕಲು ಬಿಡುವುದು ಮಾನವ ಧರ್ಮ...

ಕಗ್ಗದ ಸಂದೇಶ – ಬದುಕಲು ಬಿಡುವುದು ಮಾನವ ಧರ್ಮ…

“ಮಾನವರೋದಾನವರೋ ಭೂಮಾತೆಯನು ತಣಿಸೆ|
ಶೋಣಿತವನೆರೆಯುವರು ಬಾಷ್ಷ ಸಲುವುದಿರೆ||
ಏನುಹಗೆ! ಏನು ಧಗೆ!ಏನು ಹೊಗೆ! ಯೀ ಧರಣಿ|
ಸೌನಿಕನ ಕಟ್ಟೆಯೇಂ?-ಮಂಕುತಿಮ್ಮ||”.

ಇವರು ಮನುಷ್ಯರಾ? ಇಲ್ಲ ರಾಕ್ಷಸರಾ? ಭೂಮಿ ತಾಯಿಯನ್ನು ತೃಪ್ತಿಗೊಳಿಸಲು ಕಣ್ಣೀರು ಸುರಿಸುವ ಬದಲು ಶೋಣಿತ ಅಂದರೆ ರಕ್ತವನ್ನು ಹರಿಸುತ್ತಿದ್ದಾರೆ. ಎಂತಹ ಹಗೆತನ! ಎಂತಹ ದ್ವೇಷ! ಎಂತಹ ಮತ್ಸರ! ಈ ಭೂಮಿ ಕಟುಕನ ಕಟ್ಟೆ ಎನ್ನುವಂತಾಗಿದೆ ಎಂದು ಮಾನ್ಯ ಡಿವಿಜಿಯವರು ಮಾನವನ ಕ್ರೌರ್ಯದ ಮುಖವನ್ನು ಈ ಮುಕ್ತಕದಲ್ಲಿ ಮನಮುಟ್ಟುವಂತೆ ಚಿತ್ರಿಸಿದ್ದಾರೆ.
ಮಾನವೀಯ ಸಂಬಂಧವನ್ನು ಮರೆತ ಮಾನವ ಮೋಸ, ವಂಚನೆ, ಕಪಟ, ಸ್ವಾರ್ಥ ಮತ್ತು ಪ್ರತಿಷ್ಠೆಗೆ ಬಲಿಯಾಗಿ ಕೊಲೆಗಡುಕನಾಗುತ್ತಿದ್ದಾನೆ. ಜಾತಿ, ಮತ, ದೇಶದ ಹೆಸರಿನಲ್ಲಿ ಸ್ವಾರ್ಥ ಮತ್ತು ಅಹಂಕಾರದಿಂದ ಬಡಿದಾಡಿಕೊಂಡು ಬಲಿಯಾಗುತ್ತಿರುವುದನ್ನು ನೋಡುವಾಗ ಮಾನವೀಯತೆಯು ಕಡಿಮೆಯಾಗಿ ರಾಕ್ಷಸೀಯ ಗುಣ ಹೆಚ್ಚಾಗುತ್ತಿದೆ ಅನ್ನಿಸುತ್ತಿದೆ.
ಎರಡು ಮಹಾಯುದ್ಧದಗಳ ಘನಘೋರ ದೃಷ್ಯ ನಮ್ಮ ಕಣ್ಣ ಮುಂದೆ ಇದ್ದರೂ ಮೂರನೇ ಮಹಾಯುದ್ದಕ್ಕೆ ಈ ಜಗತ್ತು ಅಣಿಯಾಗುತ್ತಿರುವುದನ್ನು ಕಂಡಾಗ ಈ ಮನುಷ್ಯನ ಕೌರ್ಯತೆಗೆ ಕೊನೆಯೆಂದು? ಎನ್ನುವ ಪ್ರಶ್ನೆ ಮೂಡುತ್ತದೆ. ‘ನರಹತ್ಯೆ ಎಂಬುವುದು ನರಕದಾ ನಡುಮನೆಯು, ಗುರು ಶಿಶುವ ನರರ ಹತ್ಯೆಯನು ಮಾಡಿದನ ಇರವು ರೌರವವು ಸರ್ವಜ್ಞ” ಎಂಬ ಸರ್ವಜ್ಞನ ನುಡಿಯಂತೆ ಶಿಶುಹತ್ಯೆ, ಗುರುಹತ್ಯೆ ಮತ್ತು ನರಹತ್ಯೆ ಇವುಗಳೆಲ್ಲ ಘೋರ ಪಾಪಗಳಾಗಿದ್ದು ಅದನ್ನೆಸುಗಿದವರು ಅತ್ಯಂತ ಭಯಂಕರವಾದ ನರಕವಾದ ರೌರವ ನರಕಕ್ಕೆ ಹೋಗುತ್ತಾರೆ. ಎಲ್ಲೆಡೆಯಿಂದ ಕೇಳಿಬರುತ್ತಿರುವ ಸಾವು-ನೋವಿನ ಆಕ್ರಂದನವನ್ನು ನೋಡುವಾಗ ಪರಸ್ಪರ ಹೊಡೆದಾಡಿ ನಾಶವಾದ ಯಾದವರ ನೆನಪಾಗುತ್ತದೆ.
“ದ್ವೇಷ ಸುಳಿದರೆ ಮನದಿ ಬೀಸುವುದೆ ತಂಗಾಳಿ?| ತಣ್ಣೇರಿನೊಳಗಿರ್ದು ಅದು ಬೆವರಿದಂತೆ! ತಾಪಕುಂಡಕೆ ಏಕೆ ಆಜ್ಯ ನೀ ಅರ್ಪಿಸುವೆ? ವೈರ ಸಾಧಿಸುದೇಕೆ?-ಮುದ್ದುರಾಮ” ಎಂದು ಕೆ. ಶಿವಪ್ಪ ಅವರು ಹೇಳುವಂತೆ ಸೇಡು ಕಾರವುದನ್ನು ಬಿಟ್ಟು ಪ್ರೀತಿಸುವುದನ್ನು ಕಲಿಯಬೇಕು. ದ್ವೇಷ ಅಸೂಯೆಯ ಕುಂಡಕ್ಕೆ ತುಪ್ಪ ಸುರಿಯುವ ಬದಲು ತಣ್ಣೀರನ್ನು ಸುರಿದು ನಂದಿಸಲು ಪ್ರಯತ್ನಿಸಬೇಕು. ‘ಸುತ್ತಲು ಕವಿಯುವ ಕತ್ತಲೆಯೊಳಗೆ ಪ್ರೀತಿಯ ಹಣತೆಯ ಹಚ್ಚೋಣ. ಬಿರುಗಾಳಿಗೆ ಹೊದ್ದಾಡುವ ಹಡಗನು ಎಚ್ಚರದಲಿ ಮುನ್ನಡೆಸೋಣ” ಎಂಬ ರಾಷ್ಟ್ರಕವಿ ಡಾ. ಜಿ ಎಸ್ ಶಿವರುದ್ರಪ್ಪನವರ ಮಾತಿನಂತೆ ದ್ವೇಷ ಅಸೂಯೆಗಳು ಅಳಿದು, ಭಯ ಮತ್ತು ಹಿಂಸೆಗಳು ದೂರವಾಗಿ ಪ್ರೀತಿಯ ಹಣತೆಯ ಹಚ್ಚಿ ಬಾಂಧವ್ಯದ ಬೆಳಕು ಎಲ್ಲಡೆ ಪಸರಿಸುವಂತಾಗಿ, ಶಾಂತಿ, ನೆಮ್ಮದಿಯ ತಂಗಾಳಿ ಬೀಸಲಿ. ಕೊಲ್ಲುವುದು ಮನುಷ್ಯ ಗುಣವಲ್ಲ. ಬದುಕುವುದು ಬದುಕಲು ಬಿಡುವುದು ಆ ಮೂಲಕ ಬೆಳೆಯುವುದು ನಿಜವಾದ ಮಾನವ ಧರ್ಮ ಎನ್ನುವುದನ್ನರಿತು ನಡೆದಾಗಲೇ‌ ಜೀವನ ಸಾರ್ಥಕವಾಗುವುದಲ್ಲವೆ?

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!