ನವದೆಹಲಿ : ಐಪಿಎಲ್ ಪ್ರಸಕ್ತ ಸಾಲಿನ ಪಂದ್ಯಾವಳಿಯ ಅಧಿಕೃತ ವೇಳಾಪಟ್ಟಿಯನ್ನು ಬಿಸಿಸಿಐ ಮಾ. 6ರಂದು ಬಿಡುಗಡೆ ಮಾಡಿದೆ.
ಇದರ ಅಡಿಯಲ್ಲಿ ಮೊದಲ ಪಂದ್ಯ ಮಾ. 26ರಂದು ನಡೆಯಲಿದ್ದು, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಮಾ. ೨೮ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಹೊಸದಾಗಿ ಸೇರ್ಪಡೆಗೊಂಡ ತಂಡಗಳಾದ ಗುಜರಾತ್ ಟೈಟನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಮ್ಮ ಮೊದಲ ಪಂದ್ಯಗಳಲ್ಲೇ ಮುಖಾಮುಖಿಯಾಗಲಿದೆ.
65 ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ 70 ಲೀಗ್ ಪಂದ್ಯಗಳಿದ್ದು, ಮುಂಬೈ ಮತ್ತು ಪುಣೆಯಲ್ಲಿ ಪಂದ್ಯಗಳು ನಡೆಯಲಿವೆ. ಒಟ್ಟು 12 ಡಬಲ್ ಹೆಡರ್ (ಒಂದು ದಿನದಲ್ಲಿ ಎರಡು ಪಂದ್ಯಗಳು) ಆಯೋಜಿಸಲಾಗಿದೆ.
ವೇಳಾಪಟ್ಟಿಯ ಪ್ರಕಾರ ತಲಾ 20 ಪಂದ್ಯಗಳು ವಾಂಖೆಡೆ ಮತ್ತು ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಪುಣೆಯ ಬ್ರಬೋರ್ನ್ ಮತ್ತು ಎಂಸಿಎ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ತಲಾ 15 ಪಂದ್ಯಗಳು ನಡೆಯಲಿದೆ.