ಕಾರ್ಕಳ : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಂಡಿಸಿರುವ ಬಜೆಟ್ ರಾಜ್ಯದ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿದ್ದು, ಬಡವರ ಮನೆಗೆ “ಬೆಳಕು” ನೀಡುವ ಯೋಜನೆಗೆ ಆದ್ಯತೆ ನೀಡಿರುವುದು ಸ್ವಾಗತಾರ್ಹ ಎಂದು ಇಂಧನ, ಕನ್ನಡ ಹಾಗೂ ಸಂಸ್ಕ್ರತಿ ಸಚಿವ ವಿ. ಸುನೀಲ್ ಕುಮಾರ್ ಶ್ಲಾಘಿಸಿದ್ದಾರೆ.
ವಿದ್ಯುತ್ ರಹಿತವಾದ ೧. ೬೫ ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್ಲದ ಮನೆಗಳನ್ನು ಈಗಾಗಲೇ ಗುರುತಿಸಲಾಗಿದೆ. ಈ ಪೈಕಿ ಬೆಳಕು ಯೋಜನೆ ಅನ್ವಯ ೯೮, ೪೪೮ ಮನೆಗಳಿಗೆ ಸಂಪರ್ಕ ನೀಡಲಾಗಿದ್ದು, ಉಳಿದ ಮನೆಗಳಿಗೆ ಅತಿ ಶೀಘ್ರದಲ್ಲಿ ಸಂಪರ್ಕ ಕಲ್ಪಿಸುವುದಾಗಿ ಆಯವ್ಯಯದಲ್ಲಿ ಪ್ರಸ್ತಾಪಿಸಿದ್ದಾರೆ. ಬೆಳಕು ಯೋಜನೆಯ ಸಂಕಲ್ಪ ಸಿದ್ಧಿಗೆ ಇದರಿಂದ ಬಲ ಬಂದಂತಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದೇ ಮೊದಲ ಬಾರಿಗೆ ವಿದ್ಯುತ್ ಸರಬರಾಜು ನಿಗಮಗಳ ಪುನರ್ ರಚನೆ, ಆಸ್ತಿ ಗಳಿಕೆ, ಆರ್ಥಿಕ ಸ್ವಾವಲಂಬನೆ ಹಾಗೂ ಸಂಪನ್ಮೂಲ ಕ್ರೋಢೀಕರಣ ಮಾಡುವ ಸಲುವಾಗಿ ತಜ್ಞರ ಸಮಿತಿ ರಚನೆ ಮಾಡಲಾಗಿದೆ. ವಿದ್ಯುತ್ ಅಡಚಣೆ ಹೊಂದಿರುವ ೧೫ ಕೈಗಾರಿಕಾ ಪ್ರದೇಶಗಳನ್ನು ಗುರುತಿಸಲಾಗಿದ್ದು, ಕೆಪಿಟಿಸಿಎಲ್ ಮೂಲಕ ಪೂರೈಕೆಗೆ ತ್ವರಿತ ಕ್ರಮ ಕೈಗೊಳ್ಳಲಾಗುತ್ತದೆ. ಇಂಧನ ಕ್ಷೇತ್ರದ ಸುಧಾರಣೆಗೆ ಬಜೆಟ್ ನಲ್ಲಿ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವುದಕ್ಕೆ ೨೦ ಕೋಟಿ ರೂ. ಒದಗಿಸಲಾಗಿದ್ದು, ನೆರೆ ರಾಜ್ಯಗಳಲ್ಲೂ ಕನ್ನಡ ಭಾಷೆ ಹಾಗೂ ಸಂಸ್ಕ್ರತಿ ಬೆಳಗಿಸಲು ಕಾಸರಗೋಡಿನಲ್ಲಿ ಕೈಯ್ಯಾರ ಕಿಂಜ್ಞಣ್ಣ ರೈ ಹಾಗೂ ಅಕ್ಕಲಕೋಟೆಯಲ್ಲಿ ಜಯದೇವಿತಾಯಿ ಲಿಗಾಡೆ ಹೆಸರಿನಲ್ಲಿ ಹಾಗೂ ಗೋವಾದಲ್ಲಿ ಕನ್ನಡ ಭವನ ನಿರ್ಮಾಣ ಮಾಡುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದ್ದಾರೆ.
ಎಲ್ಲದಕ್ಕಿಂತ ಮುಖ್ಯವಾಗಿ ರಾಜ್ಯದಲ್ಲಿ ನಾಲ್ಕು ಕಡೆ ಮಹರ್ಷಿ ನಾರಾಯಣಗುರು ವಸತಿ ಶಾಲೆ ನಿರ್ಮಾಣಕ್ಕೆ ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ. ನಾರಾಯಣ ಗುರುಗಳ ಬಗ್ಗೆ ನಮ್ಮ ಸರಕಾರ ಹಾಗೂ ಪಕ್ಷಕ್ಕೆ ಇರುವ ಗೌರವ ಎಂಥದ್ದು ಎಂಬುದು ಇದರಿಂದ ಅನಾವರಣವಾಗಿದೆ. ಕಾಂಗ್ರೆಸ್ ನಡೆಸಿದ ಸ್ಥಬ್ದಚಿತ್ರ ವಿವಾದಕ್ಕೆ ನಮ್ಮ ಸರಕಾರ ಕೃತಿಯ ಮೂಲಕ ಉತ್ತರ ನೀಡಿದೆ. ನಾರಾಯಣಗುರುಗಳ ಬಗ್ಗೆ ನಮಗೆ ವೈಯಕ್ತಿವಾಗಿಯೂ ಅಪಾರ ಗೌರವ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ಬಜೆಟ್ : ಸುನೀಲ್ ಕುಮಾರ್ ಬಣ್ಣನೆ
Recent Comments
ಕಗ್ಗದ ಸಂದೇಶ
on