ಉಡುಪಿ : ಉಡುಪಿಯ ಸಂತೆಕಟ್ಟೆಯಲ್ಲಿ ಬಸ್ ಹಾಗೂ ಲೂನಾ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಕರಾವಳಿ ಕಾವಲು ಪಡೆಯ ಎಎಸ್‌ಐ ಟಿ. ಗಣೇಶ್ ಪೈ (58 ವ.) ಮತ್ತು ಅವರ ಪುತ್ರಿ ಗಾಯತ್ರಿ ಪೈ (25 ವ.) ಸ್ಥಳದಲ್ಲೇ ಮೃತಪಟ್ಟ ಘಟನೆ ಮಾ. 2ರ ಬೆಳಿಗ್ಗೆ ಸಂಭವಿಸಿದೆ. ಸಂತೆಕಟ್ಟೆ ಜಂಕ್ಷನ್ ಬಳಿ ದ್ವಿಚಕ್ರ ವಾಹನದಲ್ಲಿ ರಸ್ತೆ ದಾಟುತ್ತಿದ್ದಾಗ ಕೇರಳದಿಂದ ಕೊಲ್ಲೂರು ಕಡೆಗೆ ಸಾಗುತ್ತಿದ್ದ ಬಸ್ ಡಿಕ್ಕಿ ಹೊಡೆದಿದೆ.
ಊರಿನಲ್ಲಿ ನಡೆಯುವ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಳ್ಳುವ ಸಲುವಾಗಿ ಹುಬ್ಬಳ್ಳಿಯಿಂದ ಬಂದಿದ್ದ ತನ್ನ ಮಗಳನ್ನು ಕರೆ ತರಲು ಗಣೇಶ್ ಪೈ ತೆರಳಿದ್ದು, ವಾಪಸ್ ಮನೆಗೆ ಬರುವಾಗ ಉಡುಪಿಯ ಸಂತೆಕಟ್ಟೆಯಲ್ಲಿ ಮುಂಜಾನೆ 5:30 ರ ಸುಮಾರಿಗೆ ಅಪಘಾತ ಸಂಭವಿಸಿದೆ. ಇಬ್ಬರ ಮೃತದೇಹಗಳನ್ನು ಅಜ್ಜರಕಾಡು ಶವಾಗಾರದಲ್ಲಿ ಇರಿಸಲಾಗಿದೆ. ಉಡುಪಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.