Wednesday, July 6, 2022
spot_img
Homeಸುದ್ದಿಎಸ್‌.ಸಿ.ಡಿ.ಸಿ.ಸಿ. ಬ್ಯಾಂಕ್‌ ಬೈಲೂರು ಶಾಖೆ ಸ್ಥಳಾಂತರ- ನವೋದಯ ಸ್ವ-ಸಹಾಯ ಸಂಘಗಳ ಸಮಾವೇಶ

ಎಸ್‌.ಸಿ.ಡಿ.ಸಿ.ಸಿ. ಬ್ಯಾಂಕ್‌ ಬೈಲೂರು ಶಾಖೆ ಸ್ಥಳಾಂತರ- ನವೋದಯ ಸ್ವ-ಸಹಾಯ ಸಂಘಗಳ ಸಮಾವೇಶ

ಕಾರ್ಕಳ : ನಮ್ಮ ಇಚ್ಛಾಶಕ್ತಿ ಬದಲಾದಲ್ಲಿ ಸಮಾಜದಲ್ಲಿ ಪರಿವರ್ತನೆ ಕಾಣಲು ಸಾಧ್ಯ. ಸ್ವ-ಸಹಾಯ ಸಂಘಗಳು ನಿರುದ್ಯೋಗ ಸಮಸ್ಯೆ ನೀಗಿಸುವುದರೊಂದಿಗೆ ಆರ್ಥಿಕವಾಗಿ ಸಬಲರನ್ನಾಗಿಸಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.‌ ಅಂಗಾರ ಅಭಿಪ್ರಾಯಪಟ್ಟರು.

ಅವರು ಫೆ. 28 ರಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಬೈಲೂರು ಶಾಖೆಯ ಸ್ಥಳಾಂತರ ಸಮಾರಂಭ ಹಾಗೂ ನವೋದಯ ಸ್ವಸಹಾಯ ಸಂಘಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಸಹಕಾರಿ ಕ್ಷೇತ್ರದ ಕೊಡುಗೆ ಅಪಾರ
ಸಹಕಾರಿ ಕ್ಷೇತ್ರ ಸಮಾಜದಲ್ಲಿನ ರೈತರ, ಸಾಮಾನ್ಯ ಜನರ ಆರ್ಥಿಕ ಮಟ್ಟವನ್ನು ಸುಧಾರಿಸುವಲ್ಲಿ ಬಹಳ ದೊಡ್ಡ ಕೊಡುಗೆ ನೀಡಿದೆ. 25 ಶಾಖೆಯಿದ್ದ ಎಸ್‌ಸಿಡಿಸಿಸಿ ಬ್ಯಾಂಕ್‌ ಇದೀಗ 108 ಶಾಖೆ, 7 ಲಕ್ಷ ಸದಸ್ಯರನ್ನು ಹೊಂದಿದೆ. ನವೋದಯ ಸ್ವ-ಸಹಾಯ ಸಂಘಗಳ ಮೂಲಕ ಮಹಿಳೆಯರು ಆರ್ಥಿಕವಾಗಿ ಸದೃಢರಾಗಿದ್ದಾರೆ. ಸಹಕಾರಿ ಸಂಘವನ್ನು ಬಲಪಡಿಸುವಲ್ಲಿ ನಿರಂತರವಾಗಿ ಶ್ರಮ ವಹಿಸಿರುವ ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಎನ್.‌ ರಾಜೇಂದ್ರ ಕುಮಾರ್‌ ಅವರ ಕಾರ್ಯ ಶ್ಲಾಘನೀಯವೆಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಎಂ.ಎನ್.‌ ರಾಜೇಂದ್ರ ಕುಮಾರ್‌, ಬೈಲೂರಿನ ಜನತೆ ಹೃದಯ ಶ್ರೀಮಂತಿಕೆಯುಳ್ಳವರು. ಸಹಕಾರಿ ಬ್ಯಾಂಕಿನಲ್ಲಿ ೫ ಸಾವಿರ ಖಾತೆಗಳನ್ನು ತೆರೆಯುವುದರೊಂದಿಗೆ 20 ಕೋಟಿಗೂ ಮಿಕ್ಕಿ ಠೇವಣಿಯಿರಿಸಿದ್ದಾರೆ. ಜನತೆ ಬ್ಯಾಂಕ್ ಬಳಿ ಬರುವುದಲ್ಲ. ಬ್ಯಾಂಕ್‌ ಜನರತ್ತ ತಲುಪಬೇಕು ಎಂಬ ಆಶಯದೊಂದಿಗೆ ಮುಂಬರುವ ದಿನಗಳಲ್ಲಿ ಬೇರೆ ಬೇರೆ ಊರುಗಳಲ್ಲಿ 6 ಶಾಖೆಗಳನ್ನು ತೆರೆದು ಗ್ರಾಮದ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವ ಕಾರ್ಯ ಮಾಡಲಿದ್ದೇವೆ. ಇತರ ಬ್ಯಾಂಕ್ ಗಳಿಗೆ ಹೋಲಿಸಿದರೆ ನಮ್ಮ ಭಾಷೆ, ಸಂಸ್ಕೃತಿ ತಿಳಿದವರೇ ನಮ್ಮ ಸಹಕಾರಿ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿದ್ದಾರೆ ಎಂದರು.

25 ಲಕ್ಷ ರೂ. ಪರಿಹಾರ
ಸಹಕಾರಿ ಸಂಘವು ಕೊರೊನಾದಿಂದ ಮೃತಪಟ್ಟ ಸದಸ್ಯರ ಕುಟುಂಬದವರಿಗೆ ಒಟ್ಟು 25 ಲಕ್ಷ ರೂ. ಪರಿಹಾರ, ಅಪಘಾತದಿಂದ ಮೃತಪಟ್ಟ ಕುಟುಂಬಕ್ಕೆ 1 ಲಕ್ಷ ರೂ. ಆರೋಗ್ಯ ವಿಮೆ ನೀಡುವ ಮೂಲಕ ನೆರವಾಗಿದೆ. ಮುಂದಿನ ದಿನಗಳಲ್ಲಿ ಸ್ವ ಉದ್ಯೋಗ ಮಾಡುವವರಿಗೆ ೨೦ ಲಕ್ಷ ರೂ. ಗಳ ಸಾಲ ನೀಡಲಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ ಅಧ್ಯಕ್ಷ, ಶಾಸಕ ಬೆಳ್ಳಿ ಪ್ರಕಾಶ್‌ ಸಮಾವೇಶ ಉದ್ಘಾಟಿಸಿದರು. ಮಂಗಳೂರು ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಪಿ. ಜಯಕರ ಶೆಟ್ಟಿ ಇಂದ್ರಾಳಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶ್ಪಾಲ್ ಎ. ಸುವರ್ಣ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ್‌ ಹೆಗ್ಡೆ, ರಾಜಾಪುರ ಸಾರಸ್ವತ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಕಡಾರಿ ರವೀಂದ್ರ ಪ್ರಭು, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಬಳ್ಳಾಲ್‌, ಲ್ಯಾಂಪ್ಸ್‌ ಸೊಸೈಟಿ ಅಧ್ಯಕ್ಷ ನಾರಾಯಣ ನಾಯಕ್‌, ಮಾಳ ಸೊಸೈಟಿ ಅಧ್ಯಕ್ಷ ಅನಿಲ್ ಕುಮಾರ್‌, ಹಿರ್ಗಾನ ಸೊಸೈಟಿ ಅಧ್ಯಕ್ಷ ಸಿರಿಯಣ್ಣ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯ ಸುಮಿತ್‌ ಶೆಟ್ಟಿ ಕೌಡೂರು, ನೀರೆ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಶಾಲಿನಿ, ಗೀತಾಂಜಲಿ ಸಿಲ್ಕ್ಸ್‌ಮಾಲಕ ಸಂತೋಷ್‌ ವಾಗ್ಳೆ,‌ ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ್‌ ಕುಮಾರ್‌ ಸೂರಿಂಜೆ, ನಿರ್ದೇಶಕರಾದ ಭಾಸ್ಕರ್‌ ಕೋಟ್ಯಾನ್‌ ಬೈಲೂರು ಕೆ.ಎಸ್‌. ಹೆಗ್ಡೆ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ದಿನೇಶ್ಚಂದ್ರ ಹೆಗ್ಡೆ, ನೀರೆ ಬೈಲೂರು ಸೇವಾ ಸಹಕಾರಿ ಬ್ಯಾಂಕ್‌ ನ ಅಧ್ಯಕ್ಷ ನೀರೆ ರವೀಂದ್ರ ನಾಯಕ್‌, ಕೌಡೂರು ಗ್ರಾಮ ಪಂಚಾಯತ್‌ ಅಧ್ಯಕ್ಷ ಜಗದೀಶ್‌ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುರೇಶ್‌ ಸಾಲಿಯಾನ್‌ ಪ್ರಾರ್ಥಿಸಿ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನ ನಿರ್ದೇಶಕ ಬೆಳಪು ದೇವಿಪ್ರಸಾದ್‌ ಶೆಟ್ಟಿ ಸ್ವಾಗತಿಸಿ, ಅಜಿತ್‌ ಕುಮಾರ್‌ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು. ದ.ಕ. ಜಿಲ್ಲಾ ಸಹಕಾರಿ ಬ್ಯಾಂಕ್‌ ನ ನಿರ್ದೇಶಕ ಶಶಿಕುಮಾರ್‌ ರೈ ಬಿ. ವಂದಿಸಿದರು.

ಆಕರ್ಷಕ ಮೆರವಣಿಗೆ
ಬ್ಯಾಂಕ್‌ ಕಚೇರಿ ಉದ್ಘಾಟನೆ ಬಳಿಕ ಸಭಾಂಗಣವಿರುವ ಬೈಲೂರು ಬಸ್‌ ನಿಲ್ದಾಣ ಬಳಿಗೆ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಸ್ವ-ಸಹಾಯ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು.

ನೆರವು
ಬೈಲೂರು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸಹಾಯಧನ ನೀಡಲಾಯಿತು. ಮೂವರಿಗೆ ಚೈತನ್ಯ ವಿಮಾ ಚೆಕ್‌ ನೀಡಲಾಯಿತು.

ಬೈಲೂರಿನ ಉದ್ಯಮಿ ಸುಧೀರ್‌ ಕುಮಾರ್‌ ಹೆಗ್ಡೆ, ಕಟ್ಟಡದ ಮಾಲಕ ರಾಮಕೃಷ್ಣ ಶೆಟ್ಟಿ, ಬೈಲೂರು ಶಾಖಾ ವ್ಯವಸ್ಥಾಪಕ ಜಗದೀಶ್‌ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಬೈಲೂರು ಜನತೆ ಪರವಾಗಿ ಡಾ. ಎಂ.ಎನ್.‌ ರಾಜೇಂದ್ರ ಕುಮಾರ್‌ ಅವರನ್ನುಸನ್ಮಾನಿಸಲಾಯಿತು.

ಎಂ.ಎನ್‌. ರಾಜೇಂದ್ರ ಕುಮಾರ್‌ ಅವರಿಗೆ ಬೈಲೂರಿನ ಜನತೆ ಪರವಾಗಿ ಸನ್ಮಾನ

ಸಂಗೀತ ಕಾರ್ಯಕ್ರಮ
ಕಾರ್ಯಕ್ರಮದ ಕೊನೆಯಲ್ಲಿ ಗೆಜ್ಜೆಗಿರಿ ಮ್ಯೂಸಿಕಲ್ ಬಜಗೋಳಿಯ ಸುರೇಶ್‌ ಸಾಲಿಯಾನ್‌ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ಜರಗಿತು.---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!