Tuesday, July 5, 2022
spot_img
Homeಅಂಕಣಕಗ್ಗದ ಸಂದೇಶ- ಕೊಟ್ಟು ಪಡೆಯುವುದರಲ್ಲಿದೆ ಬಾಳಿನ ನೆಮ್ಮದಿ...

ಕಗ್ಗದ ಸಂದೇಶ- ಕೊಟ್ಟು ಪಡೆಯುವುದರಲ್ಲಿದೆ ಬಾಳಿನ ನೆಮ್ಮದಿ…

ಸುತೆಯ ಪೋಷಿಸಿ ಬೆಳೆಸಿ ಧನಕನಕದೊಡನವಳನ್|

ಇತರ ಗೃಹಕಿತ್ತು ನೀಂ ಕೇಳ್ವ ಮುಯ್ಯೇನು?||

ಪ್ರತಿಫಲವು ಬೇರೇಕೆ? ಸುಕೃತಕದು ತಾನೆ ಫಲ|

ಹಿತಮನದ ಪಾಕಕದು-ಮಂಕುತಿಮ್ಮ|”

   ತಂದೆ ತನ್ನ ಮಗಳನ್ನು ಪ್ರೀತಿಯಿಂದ ಪೋಷಿಸಿ, ಬೆಳೆಸಿ ದೊಡ್ಡವಳನ್ನಾಗಿ ಮಾಡಿ; ಪ್ರಾಯಕ್ಕೆ ಬಂದಾಗ ಸೂಕ್ತ ವರನನ್ನು ಹುಡುಕಿ ಧನಕನಕಗಳೊಂದಿಗೆ ವಿವಾಹ ಮಾಡಿ ಅನ್ಯರ ಮನೆಗೆ ಕಳುಹಿಸುತ್ತಾನೆ.ಇದಕ್ಕಾಗಿ ತಂದೆ ಯಾವ ಪ್ರತಿಫಲವನ್ನು ಅಪೇಕ್ಷೆ ಪಡುವುದಿಲ್ಲ.ಹೀಗೆಯೆ ಒಳ್ಳೆಯ ಕೆಲಸಗಳನ್ನು ಫಲಾಪೇಕ್ಷೆಯಿಲ್ಲದೆ ಪ್ರೀತಿಯಿಂದ ಮಾಡಿದಾಗ ಮನ ಸ್ಸಿಗೆ ಹಿತಾನುಭವ ಉಂಟಾಗುತ್ತದೆ. ಇದು ಮನಸ್ಸಿನ ಪಕ್ವತೆಗೆ ಹಾಗೂ ಪರಿಪಾಕಗೊಳ್ಳಲು ಕಾರಣವಾಗುತ್ತದೆ. ಮನಸ್ಸಿನ ಹಿತಕ್ಕಿಂತ ಬೇರೇನು ಬೇಕು? ಎಂದು ಡಿವಿಜಿಯವರು ಈ ಮುಕ್ತಕದಲ್ಲಿ ನಮ್ಮನ್ನು ಪ್ರಶ್ನಿಸಿದ್ದಾರೆ.

     ಒಬ್ಬ ತಂದೆ ತನ್ನ ಮಗಳನ್ನು ಪ್ರೀತಿಯಿಂದ ಬೆಳೆಸಿ ಅವಳು ದೊಡ್ಡವಳಾದಾಗ ಯೋಗ್ಯ ವರನನ್ನು ಹುಡುಕಿ ಬಹಳಷ್ಟು ಖರ್ಚು ಮಾಡಿ ಮದುವೆ ಮಾಡಿ ಇನ್ನೊಬ್ಬರ ಮನೆಗೆ ಕಳುಹಿಸಿ ಅವಳು ಅಲ್ಲಿ ಸಂತೋಷವಾಗಿದ್ದರೆ ಅದೇ ಪ್ರತಿಫಲವೆಂದು ಭಾವಿಸಿ ತೃಪ್ತಿಹೊಂದುತ್ತಾನೆ.ತಂದೆಯ ಈ ಕರ್ತವ್ಯ ಪ್ರಜ್ಞೆ ನಮಗೆ ಮಾದರಿಯಾಗಬೇಕು.ನಾವು ಮಾಡಬೇಕಾದ ಕರ್ತವ್ಯವನ್ನು ನಿರ್ವಹಿಸುವಾಗ ಪ್ರತಿಫಲದ ಅಪೇಕ್ಷೆ ಇರಬಾರದು. ಬೇರೆ ಏನನ್ನಾದರೂ ಪ್ರತಿಫಲವಾಗಿ ಬಯಸಿದರೆ ಅದು ಕರ್ತವ್ಯವಾಗದೆ ವ್ಯಾಪಾರವಾಗುತ್ತದೆ.ನಾವು ಮಾಡುವ ಪ್ರತಿ ಕೆಲಸದಲ್ಲಿ ಆರ್ಥಿಕ ಲಾಭ ನಷ್ಟವನ್ನು ಲೆಕ್ಕ ಹಾಕುವುದನ್ನು ಬಿಟ್ಟು ಮನಸ್ಸಿಗೆ  ಮತ್ತು ಆತ್ಮಕ್ಕೆ ಹಿತವನ್ನುಂಟುಮಾಡುವ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು.

     ’ಸುಖವೆಂಬುದು ನೀಡುವುದರ ಮೂಲಕ ಪಡೆಯಬಹುದಾದ ಸಂಪತ್ತು. ಅದು ವೃತ್ತಿಗಿಂತಲೂ ಮನೋವೃತ್ತಿಯನ್ನು ಹೆಚ್ಚು ಅವಲಂಬಿಸಿದೆ.”ಸ್ವಾರ್ಥವನ್ನು  ಕೊಲ್ಲುವುದರಲ್ಲಿಯೇ ನಿಜವಾದ ಸುಖವಡಗಿದೆ” ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ.  ಸುಖವೆಂಬ ಸುಗಂಧವನ್ನು ಇತರರ ಮೇಲೆ ಎರಚುವಾಗ ನಮ್ಮ ಮೇಲೂ ಕೂಡಾ ಕೆಲವು ಬಿಂದುಗಳಾದರೂ ಬಿದ್ದೆ ಬೀಳುತ್ತವೆ ಎಂಬ ಅನುಭವಿಗಳ ಅನುಭವದ ನುಡಿಯನ್ನರಿತು ನಡೆಯಬೇಕು.ಸ್ವಾರ್ಥದ ಲೇಪವಿಲ್ಲದ ಮುಗ್ಧ ಮನಸ್ಸಿನ ಮಗುವಿನಂತೆ ಸತ್ಕಾರ್ಯಗಳನ್ನುಮಾಡಿ ಸಂತೋಷ ಪಡಬೇಕು

     

“ಸಂಗೀತ ತಲೆದೂಗಿಪುದು,ಹೊಟ್ಟೆ ತುಂಬೀತೆ? ತಂಗದಿರನೆಸಕ ಕಣ್ಗಮೃತ,ಕಣಜಕದೇಂ?|| ಅಂಗಡಿಯ ಮಾಡದಿರು ಸುಕೃತ ಪ್ರಸಕ್ತಿಯಲಿ

ಪೊಂಗುವಾತ್ತವೆ ಲಾಭ- ಮಂಕುತಿಮ್ಮ” ಎಂಬ ಡಿವಿಜಿಯವರ ಇನ್ನೊಂದು ಮುಕ್ತಕದಲ್ಲಿ ಹೇಳುವಂತೆ ಜೀವನವೆಂದರೆ ಅಂಗಡಿಯ ವ್ಯಾಪಾರವಲ್ಲ.ಸುಮಧುರ ಸಂಗೀತ ಮತ್ತು ಚಂದ್ರನ ಬೆಳದಿಂಗಳು ಹೊಟ್ಟೆಯನ್ನು ಹಾಗೂ ಕಣಜವನ್ನು ತುಂಬಿಸುವುದಿಲ್ಲ.ಆದರೆ ಮನಸ್ಸಿಗೆ ಹಿತವನ್ನುಂಟುಮಾಡುವುದರೊಂದಿಗೆ ಆತ್ಮೋನ್ನತಿಗೆ ಕಾರಣವಾಗುತ್ತದೆ.ಭೌತಿಕವಾದ ಪ್ರಯೋಜನಕ್ಕಿಂತ ಅಂತರಂಗದ ಮನಸ್ಸಿನ ಸಂಸ್ಕಾರ ಮತ್ತು ಉನ್ನತಿಯೇ ಮುಖ್ಯ.

       “ಕೋಟಿಗಟ್ಟಲೆ ಆಸ್ತಿ ತರದು ಶಾಂತಿಯ ಮನಕೆ| ತೃಪ್ತಿ ಮನೆಮಾಡಿದರೆ ಎಷ್ಟಿದ್ದರೇನು?| ಚಿತ್ತ ಹದವಿದ್ದರೆ ಸಕಲ ಸಂಪದ ಸುತ್ತ| ಸಂತುಷ್ಟಿ ಸೌಭಾಗ್ಯ -ಮುದ್ದುರಾಮ” ಎಂಬ ಕೆ. ಶಿವಪ್ಪನವರ ಮಾತಿನಂತೆ ಕೋಟಿಗಟ್ಟಲೆ ಆಸ್ತಿಯಿಂದ ಮನಸ್ಸಿಗೆ ಶಾಂತಿ ದೊರಕದು.ಸತ್ಕರ್ಮಗಳಿಂದ  ಮನಸ್ಸು ಹದಗೊಂಡರೆ ಅದುವೆ ಶಾಂತಿಗೆ ಮೂಲ.ಹೀಗೆ ನಿಸ್ವಾರ್ಥ ಮನಸ್ಸಿನಿಂದ ನಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವಿಹಿಸಿದಾಗಲೇ ಜೀವನ ಸಾರ್ಥಕವಾಗುವುದಲ್ಲವೇ?

ಪ್ರಭಾಕರ ಶೆಟ್ಟಿ ಕೊಂಡಳ್ಳಿ

 ಅಧ್ಯಕ್ಷರು, ಕಸಾಪ ಕಾರ್ಕಳ ಘಟಕ.---

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!