ಬೆಂಗಳೂರು : ಸತತ ಎರಡು ವರ್ಷಗಳ ಕೋವಿಡ್ನಿಂದ ಕುಂಠಿತವಾದ ಶೈಕ್ಷಣಿಕ ವರ್ಷವನ್ನು ಸರಿದೂಗಿಸಲು ಶಿಕ್ಷಣ ಇಲಾಖೆ ಬೇಸಿಗೆ ರಜೆಯನ್ನು ಕಡಿತಗೊಳಿಸಿ, 2022-23ನೇ ಸಾಲಿನ ಶೈಕ್ಷಣಿಕ ವರ್ಷವನ್ನು ವಿಸ್ತರಿಸಿ ಆದೇಶ ಹೊರಡಿಸಿದೆ. ಸಾಮಾನ್ಯವಾಗಿ ಶೈಕ್ಷಣಿಕ ವರ್ಷ ಮೇ 29 ರಿಂದ ಆರಂಭವಾಗಿ ಏಪ್ರಿಲ್ 10ಕ್ಕೆ ಮುಕ್ತಾಯವಾಗುತ್ತದೆ. ಪ್ರತಿ ಸಾಲಿನ ಶೈಕ್ಷಣಿಕ ಚಟುವಟಿಕೆಗಳು 10 ತಿಂಗಳುಗಳ ಕಾಲ ನಿರ್ವಹಣೆಯಲ್ಲಿದ್ದು, ಕನಿಷ್ಠ 220 ಶಾಲಾ ಕರ್ತವ್ಯದ ದಿನಗಳನ್ನು ನಿಗದಿಪಡಿಸಿ, ವಿದ್ಯಾರ್ಥಿಗಳ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಹಂಚಿಕೆ ಮಾಡಲಾಗುತ್ತದೆ. ಆದರೆ ಇದೀಗ ಕಳೆದೆರಡು ಶೈಕ್ಷಣಿಕ ಸಾಲುಗಳಲ್ಲಿ ವಿದ್ಯಾರ್ಥಿಗಳ ಕಲಿಕೆಯು ಕಡಿಮೆ ಆಗಿದ್ದು, ಭೌತಿಕ ತರಗತಿಗಳು ಸಹ ಕಡಿಮೆ ಆಗಿವೆ. ಆದ್ದರಿಂದ ವಿದ್ಯಾರ್ಥಿಗಳ ಹಿನ್ನಡೆಯನ್ನು ಕಲಿಕಾ ಕೊರತೆಯನ್ನು ಸರಿದೂಗಿಸಲು ಬೇಸಿಗೆ ರಜೆಯನ್ನು ಇದೀಗ ಕಡಿಮೆ ಗೊಳಿಸಿ ಪ್ರಕಟಣೆ ಹೊರಡಿಸಲಾಗಿದೆ. ಈ ಸಂಬಂಧ ಆದೇಶ ಹೊರಡಿಸಿರುವ ಶಿಕ್ಷಣ ಇಲಾಖೆ ಆಯುಕ್ತರು, ಮುಂಬರುವ ಶೈಕ್ಷಣಿಕ ವರ್ಷ 2022-23 ರಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷ 2021-22ವನ್ನು 09-04-2022 ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ. ಜೊತೆಗೆ 2021-22ನೇ ಸಾಲಿನ ಬೇಸಿಗೆ ರಜೆಯನ್ನು 10-04-2022 ರಿಂದ 15-05 2022 ರವರೆಗೆ ನೀಡಲು ಆದೇಶಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷವನ್ನು 16-05-2022 ರಿಂದ ಪ್ರಾರಂಭಿಸಲ ನಿರ್ದೇಶನ ನೀಡಲಾಗಿದೆ.
ಕೋವಿಡ್ ಎಫೆಕ್ಟ್ : ಕಲಿಕಾ ಕೊರತೆ ಸರಿದೂಗಿಸಲು ಶಾಲೆಗಳ ಬೇಸಿಗೆ ರಜೆ ಕಡಿತಗೊಳಿಸಿದ ಶಿಕ್ಷಣ ಇಲಾಖೆ
