ಎಲ್ಲೆಡೆ ಪ್ರಚಾರದಲ್ಲಿರುವ ಚ್ಯವನ್ಪ್ರಾಶ್ ಅವಲೇಹದ ಬಗ್ಗೆ ತಿಳಿದುಕೊಳ್ಳೋಣ. ಯಾರು ಸೇವಿಸಬೇಕು? ಯಾರು ಸೇವಿಸಬಾರದು? ಎಷ್ಟು ಸೇವಿಸಬೇಕು ಎಂದು ತಿಳಿದುಕೊಳ್ಳೋಣ.
ಅನೇಕ ಗಿಡ ಮೂಲಿಕೆಗಳನ್ನು ಬಳಸಿ ಅದರಲ್ಲಿ ಪ್ರಮುಖವಾಗಿ ನೆಲ್ಲಿಕಾಯಿಯನ್ನು ಬಳಸಿ ಚ್ಯವನ್ಪ್ರಾಶ್ ಅವಲೇಹ ತಯಾರಿಸಲಾಗುವುದು.
ಇದರ ಉಪಯೋಗಗಳು
ಶೀತ, ನೆಗಡಿ, ಕೆಮ್ಮು, ಶ್ವಾಸ, ಉಸಿರಾಟದ ತೊಂದರೆ, ಶ್ವಾಸಕೋಶದ ಇನ್ಫೆಕ್ಷನ್, ನಿಮೋನಿಯಾ, ಅಸ್ತಮಾ, ಬ್ರಾಂಕೈಟಿಸ್, ಅಲರ್ಜಿಗಳಿಗೆ ಇದು ಅತ್ಯುಪಯೋಗಿ. ಮಲಬದ್ಧತೆಯನ್ನು ದೂರ ಮಾಡಿ, ದೀರ್ಘಕಾಲೀನ ರೋಗಗಳಲ್ಲಿ ದುರ್ಬಲತೆಯನ್ನು ದೂರಮಾಡುತ್ತದೆ. ವಯಸ್ಸಾದಂತೆ ಅನೇಕ ರೋಗಗಳು ಕಾಡುವುದನ್ನು ಚ್ಯವನ್ಪ್ರಾಶ್ ಲೇಹ ಸೇವಿಸುವುದರಿಂದ ಕಡಿಮೆ ಮಾಡಬಹುದು. ಕೀಲು ನೋವು, ಅಜೀರ್ಣ, ವೃದ್ಯಾಪ್ಯದ ರೋಗ, ಟ್ಯೂಬರ್ಕ್ಯುಲಾಸಿಸ್, ದುರ್ಬಲ ಮಕ್ಕಳಿಗೆ, ಹೃದಯ ರೋಗ, ವಾತರಕ್ತ, ಮೂತ್ರರೋಗ, ಶುಕ್ರ ರೋಗ, ತ್ವಚೆಯ ರೋಗಗಳಲ್ಲಿ ಬಹಳ ಒಳ್ಳೆಯದು. ಮಲಬದ್ಧತೆಯನ್ನು ದೂರ ಮಾಡುತ್ತದೆ, ಬಂಜೆತನದಲ್ಲಿ ಉಪಯೋಗಿಸಬಹುದು, ಯಕೃತ್ತಿಗೆ ಒಳ್ಳೆಯದು, ರಕ್ತ ಶುದ್ಧಿ ಮಾಡುತ್ತದೆ, ಮಾನಸಿಕ ಖಿನ್ನತೆಯನ್ನು ದೂರ ಮಾಡುತ್ತದೆ. ಶರೀರದ ಎಲ್ಲಾ ಧಾತುಗಳಿಗೆ ಪೋಷಣೆ ನೀಡುವುದರೊಂದಿಗೆ ಇದು ನಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸುತ್ತದೆ. ಶರೀರದ ಎಲ್ಲಾ ಧಾತುಗಳಿಗೆ ಪೋಷಕಾಂಶವನ್ನು ಶಕ್ತಿಯನ್ನು ನೀಡಿ ವ್ಯಾಧಿಕ್ಷಮತ್ವವನ್ನು ಹೆಚ್ಚಿಸುತ್ತದೆ, ಸ್ಮರಣ ಶಕ್ತಿಯನ್ನು ವೃದ್ಧಿಸುತ್ತದೆ, ಅಂಗ ದೌರ್ಬಲ್ಯವನ್ನು ದೂರ ಮಾಡುತ್ತದೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಹೇಗೆ ಸೇವಿಸುವುದು
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಅಥವಾ ಎರಡು ಚಮಚ ಚವನ್ ಪ್ರಾಶ್ ಲೇಹವನ್ನು ಅರ್ಧ ಗ್ಲಾಸ್ ಅಥವಾ ಒಂದು ಗ್ಲಾಸ್ ಹಾಲಿನ ಜೊತೆ ಸೇವಿಸಿದರೆ ಉತ್ತಮ. ಸೇವಿಸಿದ ಮೂರು ಗಂಟೆಯವರೆಗೆ ಬೇರೆ ಏನನ್ನು ಸೇವಿಸಕೂಡದು. ಲೇಹವು ಉಷ್ಣವಿರುವುದರಿಂದ ಕಿಂಚಿತ್ ಪಿತ್ತವನ್ನು ವೃದ್ಧಿಸುತ್ತದೆ. ಆದ್ದರಿಂದ ಹಾಲಿನ ಜೊತೆ ಸೇವಿಸಿದರೆ ಒಳ್ಳೆಯದು. ಹಾಲು ಪಿತ್ತವನ್ನು ಕಡಿಮೆಗೊಳಿಸುತ್ತದೆ. ಹಾಲು ಸೇರದಿದ್ದರೆ ನೀರಿನ ಜೊತೆ ಕೂಡ ಸೇವಿಸಬಹುದು.
ಯಾರೂ ಸೇವಿಸಬಾರದು
ಕೊಲೆಸ್ಟ್ರಾಲ್, ಫ್ಯಾಟಿಲಿವರ್, ಪಿಸಿಓಡಿ, ಹೈಪೊಥೈರಾಯ್ಡಿಸಂ, ಡಯಾಬಿಟಿಸ್, ಬೊಜ್ಜುತನ, ಅಜೀರ್ಣ ಸಮಸ್ಯೆ ಇರುವವರು ಚವನ್ ಪ್ರಾಶ್ ಅವಲೇಹವನ್ನು ಸೇವಿಸಬಾರದು.
