ಹೆಬ್ರಿ : ಬಿಜೆಪಿ ಮುಂದಿನ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಹಿಂದೂ ಯುವಕರನ್ನು ಕೊಲೆ ಮಾಡಿಸಿ, ಹಿಜಾಬ್ ಗಲಾಟೆ, ಕೋಮುಗಲಭೆ ಸೃಷ್ಟಿಸುತ್ತಿದೆ. ಗಲಭೆಯ ಹಿಂದೆ ಬಿಜೆಪಿಯ ಕಾಣದ ಕೈಗಳ ಷಡ್ಯಂತ್ರ್ಯವಿದೆ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಹೇಳಿದರು.
ಗುರುವಾರ ಅವರು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ಧಿಗೋಷ್ಠಿ ಆಯೋಜಿಸಿ, ಮುಸ್ಲಿಮರನ್ನು ಗುರಿಯಾಗಿಸಿ ಹಿಂದೂ ಯುವಕನ ಹತ್ಯೆ ನಡೆದಿದೆ. ಜನಸಾಮಾನ್ಯರ ಆಸ್ತಿಪಾಸ್ತಿಗಳು ಹಾನಿಯಾಗಿವೆ. ಬಿಜೆಪಿಯ ಆಡಳಿತ, ಬೆಲೆ ಏರಿಕೆಯಿಂದ ಜನತೆ ಬಿಜೆಪಿಯ ವಿರುದ್ಧ ರೋಸಿ ಹೋಗಿರುವುದನ್ನು ಅರಿತು ದಾರಿ ತಪ್ಪಿಸುವ ನಿಟ್ಟಿನಲ್ಲಿ ಈ ರೀತಿ ಮಾಡಲಾಗುತ್ತಿದೆ ಎಂದು ಮಂಜುನಾಥ ಪೂಜಾರಿ ದೂರಿದರು.
ಈಶ್ವರಪ್ಪ ಅವರ ಕುಮ್ಮಕ್ಕಿನಿಂದಾಗಿ ಗಲಭೆಗಳಾಗುತ್ತಿದೆ. ಸಚಿವ ಈಶ್ವರಪ್ಪ ಅವರು ರಾಜೀನಾಮೆ ನೀಡಿದರೇ ಮಾತ್ರ ಪಾರದರ್ಶಕ ತನಿಖೆ ನಡೆಯಲು ಸಾಧ್ಯ. ಸಿದ್ಧರಾಮಯ್ಯ ಸರ್ಕಾರದಲ್ಲಿ ಯಾವೂದೇ ಗಲಭೆ ಇರಲಿಲ್ಲ, ಈ ಹಿಂದೂ ಪರ ಸರ್ಕಾರ, ಕೇಸರಿ ಧ್ವಜ ಹಾರಿಸುತ್ತೇವೆ ಎನ್ನುವವರಿಂದಲೇ ಗಲಭೆ ನಡೆಯುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಹೇಳಿದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಂಜನಿ ಹೆಬ್ಬಾರ್ ಕಬ್ಬಿನಾಲೆ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸಂತೋಷ್ ಕುಮಾರ್ ಅಜೆಕಾರ್, ಹಾಜಿ ಸಾಹೇಬ್, ಆಸ್ಟೀನ್ ರಾಡ್ರಿಗಸ್, ವಿಶು ಕುಮಾರ್, ಶಶಿಕಲಾ ಆರ್.ಪಿ., ಹರೀಶ ಕುಲಾಲ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.