ಕಾರ್ಕಳ : ದೇವರ ಚಿತ್ತಕ್ಕೆ ಅನುಗುಣವಾಗಿ ಬದುಕಿ ಸ್ವರ್ಗ ಸೇರುವುದು ಮಾನವ ಜೀವನದ ಗುರಿ. ಮನುಷ್ಯನ ಎಲ್ಲ ಪ್ರಯತ್ನಗಳು ಉತ್ತಮ ಜೀವನ ನಡೆಸುವ ಕಡೆಗಿರಬೇಕೆಂದು ಬೆಳ್ತಂಗಡಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ. ಲಾರೆನ್ಸ್ ಮುಕ್ಕುಝಿ ಹೇಳಿದರು.
ಅವರು ‘ಕ್ರೈಸ್ತ ಕುಟುಂಬಗಳು, ದೈವೀಕ ಕುಟುಂಬದ ಪ್ರತಿರೂಪಗಳು” ಎಂಬ ವಿಷಯದಲ್ಲಿ ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದ ಮಹೋತ್ಸವದ ಐದನೇ ದಿನ ಪ್ರಮುಖ ಬಲಿಪೂಜೆ ನೆರವೇರಿಸಿ ಪ್ರಬೋಧನೆ ನೀಡಿದರು.

ಫೆ. 20ರಂದು ಪ್ರಾರಂಭಗೊಂಡ ವಾರ್ಷಿಕ ಮಹೋತ್ಸವದ ಕೊನೆಯ ದಿನ ಗುರುವಾರ ಸಕಲ ಭಕ್ತಾದಿಗಳ ಒಳಿತಿಗಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ದಿನದ ಪ್ರಮುಖ ಬಲಿಪೂಜೆಯನ್ನು ವಂ. ಡಾ| ಲಾರೆನ್ಸ್ ಮುಕ್ಕುಝಿ, ವಂ. ಮ್ಯಾಕ್ಶಿಮ್ ನೊರೋನ್ಹಾ ನೆರವೇರಿಸಿದರು.
ದಿನದ ಇತರ ದಿವ್ಯ ಬಲಿಪೂಜೆಯನ್ನು ವಂ. ಜೇಸನ್ ಮಾರ್ಟಿಸ್ ಬಸ್ರೂರು, ವಂ. ಸುನಿಲ್ ವೇಗಸ್ ಕೆರೆಕಟ್ಟೆ, ವಂ. ಚಾರ್ಲ್ಸ್ ಮಿನೇಜಸ್ ಉಡುಪಿ ನಡೆಸಿದರು.

ದಿನದ ಅಂತಿಮ ಬಲಿಪೂಜೆ ಸಂಜೆ 7 ಗಂಟೆಗೆ ಕಲ್ಯಾಣಪುರ ಮಿಲಾಗ್ರಿಸ್ನ ವಂ. ವಲೇರಿಯನ್ ಮೆಂಡೊನ್ಸಾ ಅವರು ನೆರವೇರಿಸುವುದರೊಂದಿಗೆ ಮಹೋತ್ಸವದ ಐದನೇ ದಿನದ ಕಾರ್ಯಕ್ರಮಗಳು ಸಂಪನ್ನಗೊಂಡವು. ಅಂತಿಮ ಬಲಿಪೂಜೆಯ ತರುವಾಯ, ಮಂಟಪದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗಿದ್ದ ಸಂತ ಲಾರೆನ್ಸರ ಪವಿತ್ರ ಅವಶೇಷಗಳನ್ನು ಗೌರವಾದರಗಳಿಂದ ಮೆರವಣಿಗೆಯಲ್ಲಿ ಕೊಂಡೊಯ್ದು ಮತ್ತೆ ಅದರ ಸ್ವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು. ಪುಣ್ಯಕ್ಷೇತ್ರದ ಮುಖ್ಯಸ್ಥ ವಂ. ಆಲ್ಬನ್ ಡಿʼಸೋಜಾ ನೇತೃತ್ವದಲ್ಲಿ ಕಾರ್ಯಕ್ರಮ ಜರಗಿತು.
ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕಾರ್ಕಳದ ತಹಶೀಲ್ದಾರ್ ಪುರಂದರ ಕೆ ಸೇರಿದಂತೆ ಹಲವಾರು ಗಣ್ಯರು ಪುಣ್ಯಕ್ಷೇತ್ರಕ್ಕೆ ಭೇಟಿಯಿತ್ತರು.