ಕಾರ್ಕಳ : ಮಿಯ್ಯಾರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆನರಾ ಬ್ಯಾಂಕ್ ಪ್ರಾಯೋಜಿತ ಸಿ.ಇ. ಕಾಮತ್ ಕುಶಲಕರ್ಮಿಗಳ ಸಂಸ್ಥೆಯ ರಜತ ಮಹೋತ್ಸವ ಫೆ. 22ರಂದು ಜರುಗಿತು. ಕೆನರಾ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕಿ ಮಣಿಮೇಖಲೈ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಿಯ್ಯಾರು ಸಿ.ಇ. ಕಾಮತ್ ಕುಶಲಕರ್ಮಿಗಳ ಸಂಸ್ಥೆಯು ರಜತ ಮಹೋತ್ಸವ ಆಚರಿಸುತ್ತಿರುವುದು ಬಹಳ ಸಂತಸದ ವಿಚಾರ. ಶಿಲ್ಪ, ಮರ, ಲೋಹದ ಕೆತ್ತೆನೆಯಲ್ಲಿ ಒಂದೂವರೆ ವರ್ಷಗಳ ಕಾಲ ಉಚಿತವಾಗಿ ತರಬೇತಿಗೊಳಿಸಿ, ಕೆನರಾ ಬ್ಯಾಂಕ್ ವತಿಯಿಂದ ಸ್ವಉದ್ಯೋಗ ನಡೆಸಲು ಆರ್ಥಿಕ ಸಹಕಾರ ನೀಡಲಾಗುತ್ತಿದೆ. ಈ ಸಂಸ್ಥೆಯಲ್ಲಿ 780 ವಿದ್ಯಾರ್ಥಿಗಳು ತರಬೇತಿ ಪಡೆದು ಉತ್ತಮವಾಗಿ ಆದಾಯ ಸಂಪಾದಿಸುತ್ತಿದ್ದಾರೆ ಎಂದರು.
3ನೇ ಬ್ಯಾಂಕ್
ದೇಶದ ಅತಿ ದೊಡ್ಡ ಬ್ಯಾಂಕ್ಗಳ ಪೈಕಿ ಕೆನರಾ ಬ್ಯಾಂಕ್ 3ನೇ ಸ್ಥಾನದಲ್ಲಿದೆ. ಬ್ಯಾಂಕ್ ವತಿಯಿಂದ ಗ್ರಾಮೀಣ ಮಟ್ಟದಲ್ಲಿ ಕೌಶಲ್ಯಾಧಾರಿತ ತರಬೇತಿ ನೀಡಲಾಗುತ್ತಿದ್ದು, ಸಾವಿರಾರು ಮಂದಿ ಈ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ ಎಂದು ಮಣಿಮೇಖಲೈ ಹೇಳಿದರು.
ಪುರಸ್ಕಾರ
ರಜತ ಮಹೋತ್ಸವದ ಅಂಗವಾಗಿ ಹಿರಿಯ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ ನೀಡಲಾಯಿತು. ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ (ಎಫ್ಐ) ಮುರುಳಿ ಕೃಷ್ಣ, ಮಣಿಪಾಲ ವೃತ್ತ ಕಚೇರಿಯ ಜನರಲ್ ಮ್ಯಾನೇಜರ್ ರಾಮ ನಾಯಕ್, ಮಂಗಳೂರು ವೃತ್ತ ಕಚೇರಿಯ ಜನರಲ್ ಮ್ಯಾನೇಜರ್ ಬಿ. ಯೋಗೀಶ್ ಆಚಾರ್ಯ, ಮಿಯ್ಯಾರು ಕರಕುಶಲ ತರಬೇತಿ ಸಂಸ್ಥೆಯ ಜಿ.ಪಿ. ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರವಿಕಲಾ ಹಾಗೂ ಹರೀಶ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.