ಕಾರ್ಕಳ : ಭುವನೇಂದ್ರ ಕಾಲೇಜು ಬಳಿಯಲ್ಲಿನ ಇಂಡಸ್ಟೀಯಲ್ ಏರಿಯಾದಲ್ಲಿರುವ ಕೈಗಾರಿಕೆಗಳಿಗೆ ಕಳೆದ ಒಂದೂವರೆ ತಿಂಗಳಿನಿಂದ ನೀರು ಸರಬರಾಜಗುತ್ತಿಲ್ಲ. ಹೀಗಾಗಿ ಇಲ್ಲಿ ಕಾರ್ಯನಿರ್ವಹಿಸುತ್ತಿರುವ 4 ಕೈಗಾರಿಕೆಗಳಿಗೆ ತೊಂದರೆಯಾಗಿದೆ. ಈ ಬಗ್ಗೆ ಕೈಗಾರಿಕೆಯವರು ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದಾಗ್ಯೂ ಯಾವುದೇ ಪ್ರಯೋಜನವಾಗಿಲ್ಲ.
ಕೈಗಾರಿಕೆಗಳ ಹಿಂದೇಟು
ಇಂಡಸ್ಟ್ರೀಯಲ್ ಏರಿಯಾದಲ್ಲಿನ ಮೂಲಭೂತ ಸಮಸ್ಯೆ ಕುರಿತು ನಿಗಮಕ್ಕೆ ತಿಳಿಸಿದರೂ ಅವರು ಪುರಸಭೆಯತ್ತ ಬೆರಳು ತೋರುತ್ತಾರೆ. ಪುರಸಭೆಗೆ ತಿಳಿಸಿದರೆ ಅವರು ದಿವ್ಯ ನಿರ್ಲಕ್ಷ್ಯ ತೋರುತ್ತಾರೆ. ಇಂಡಸ್ಟ್ರೀಯಲ್ ಏರಿಯಾ ಕುರಿತು ಸಂಬಂಧಪಟ್ಟವರು ಗಮನ ಹರಿಸದಿರುವುದರಿಂದ ಕೈಗಾರಿಕೆ ನಡೆಸುವವರಿಗೆ ಭಾರಿ ಕಷ್ಟವಾಗಿದೆ. ಹೊಸ ಕೈಗಾರಿಕೆಗಳು ಇತ್ತ ಬರಲು ಹಿಂದೇಟು ಹಾಕುತ್ತಿವೆ. ಇದೇ ಕಾರಣಕ್ಕಾಗಿ ಕೆಲವೊಂದು ಕೈಗಾರಿಕೆಗಳು ಇಲ್ಲಿಂದ ಜಾಗ ಖಾಲಿ ಮಾಡಿವೆ. ಸುಮಾರು 40 ವರ್ಷಗಳ ಹಿಂದೆ ಬೃಹತ್ ಟ್ಯಾಂಕ್ ಒಂದು ಇಲ್ಲಿ ನಿರ್ಮಾಣವಾಗಿದ್ದರೂ ನಿರ್ವಹಣೆ ಇಲ್ಲದೇ ಪಾಳು ಬಿದ್ದಿದೆ.
ನೀರಿನ ಸಮಸ್ಯೆ ಕುರಿತು ಫೆ. 9ರಂದು ಪುರಸಭೆಗೆ ದೂರು ನೀಡಿ, ಇಂಡಸ್ಟ್ರೀಯಲ್ ಏರಿಯಾಗೆ ನೀರು ಸರಬರಾಜು ಮಾಡುವಂತೆ ಕೈಗಾರಿಕೆ ಮಾಲಕರು ಮನವಿ ಮಾಡಿಕೊಂಡಿರುತ್ತಾರೆ.
ಟ್ಯಾಂಕರ್ನಲ್ಲಿ ನೀರು ಪೂರೈಕೆ
ಪುರಸಭೆಯಿಂದ ನೀರು ಸರಬರಾಜಾಗದ ಹಿನ್ನೆಲೆಯಲ್ಲಿ ಕೈಗಾರಿಕೆಯವರು ಇದೀಗ ಟ್ಯಾಂಕರ್ನಲ್ಲಿ ನೀರು ಪೂರೈಸುತ್ತಿದ್ದಾರೆ. ಒಂದು ಟ್ಯಾಂಕರ್ ನೀರಿಗೆ 2 ಸಾವಿರ ರೂ. ವೆಚ್ಚಮಾಡಬೇಕಿದೆ. ವಾರಕ್ಕೆ ಕನಿಷ್ಠ ಎರಡ್ಮೂರು ಟ್ಯಾಂಕರ್ ನೀರು ಕೈಗಾರಿಕೆಗೆ ಬೇಕಾಗುವುದು. ಸಣ್ಣ ಪ್ರಮಾಣದ ಕೈಗಾರಿಕೆಯವರು ಇಷ್ಟೊಂದು ವೆಚ್ಚ ಮಾಡುವುದು ಕಷ್ಟ ಸಾಧ್ಯವಾಗಿದೆ. ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಕಂಡುಬರುತ್ತಿದ್ದರೂ ಸಂಬಂಧಪಟ್ಟವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ. ನೀರಿನ ಸಮಸ್ಯೆಗೆ ಒಂದು ಶಾಶ್ವತ ಪರಿಹಾರ ಕಲ್ಪಿಸಿದಲ್ಲಿ ಮತ್ತಷ್ಟು ಕೈಗಾರಿಕೆಗಳು ಸ್ಥಾಪನೆಗೊಂಡು ಸ್ಥಳೀಯರಿಗೆ ಉದ್ಯೋಗ ದೊರೆಯಬಲ್ಲದು. ಇನ್ನಾದರೂ ಎಚ್ಚೆತ್ತುಕೊಂಡು ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ಕೈಗಾರಿಕೆಗಳಿಗೆ ಉತ್ತಮ ವಾತಾವರಣ ಒದಗಿಸಬೇಕಿದೆ.
ಇಂಡಸ್ಟ್ರೀಯಲ್ ಏರಿಯಾಗೆ ನೀರು ಪೂರೈಕೆಯಾಗದಿರುವ ಕುರಿತು ಕೈಗಾರಿಕೆಯವರು ದೂರು ನೀಡಿರುತ್ತಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ನೀರು ಪೂರೈಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ.
ರೂಪಾ ಶೆಟ್ಟಿ
ಮುಖ್ಯಾಧಿಕಾರಿ, ಕಾರ್ಕಳ ಪುರಸಭೆ