ಬೆಂಗಳೂರು : ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಧ್ಯೆ ವಾಗ್ವಾದ ಮುಂದುವರಿದಿದೆ. ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಡಿಕೆ ಶಿವಕುಮಾರ್ ಅವರ ಪ್ರಚೋದನಾಕಾರಿ ಹೇಳಿಕೆಯೇ ಕಾರಣ ಎಂದು ಸಚಿವ ಈಶ್ವರಪ್ಪ ಆರೋಪ ಮಾಡಿದ್ದರು.
ಅದಕ್ಕೆ ಪ್ರತ್ಯುತ್ತರ ನೀಡಿರುವ ಡಿಕೆ ಶಿವಕುಮಾರ್ ಇಂದು ಮಾತನಾಡಿ, ಶಿವಮೊಗ್ಗ ಹಿಂಸೆಗೆ ಸಚಿವ ಈಶ್ವರಪ್ಪ ಹೊಣೆ, ಖುದ್ದು ಮಂತ್ರಿಯೇ ಮುಂದೆ ನಿಂತು ಮೆರವಣಿಗೆ ಮಾಡಿಸಿದರು, ಮೆರವಣಿಗೆಯುದ್ದಕ್ಕೂ ಕಲ್ಲು ಹೊಡೆಸಿದ್ದಾರೆ. ನಿಷೇಧಾಜ್ಞೆ ಉಲ್ಲಂಘಿಸಿದ ಮಂತ್ರಿ ಅರೆಸ್ಟ್ ಯಾಕ್ ಮಾಡಿಲ್ಲ. ಈಶ್ವರಪ್ಪ ಮಾತುಗಳಿಂದಲೇ ಹಿಂಸೆಗೆ ಪ್ರಚೋದನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ 144 ಸೆಕ್ಷನ್ ಜಾರಿಯಲ್ಲಿದೆ. ಆದರೆ ಮಂತ್ರಿನೇ ಉಲ್ಲಂಘನೆ ಮಾಡಿದ್ದಾರೆ. ಸ್ವತಃ ಸಚಿವರೇ 144 ಉಲ್ಲಂಘನೆ ಮಾಡಿದರೂ ಯಾಕೆ ಕೇಸ್ ಹಾಕಿಲ್ಲ? ಎಂದು ಪ್ರಶ್ನಿಸಿದರು.
ಶಿವಮೊಗ್ಗ ಯುವಕನ ಹತ್ಯೆ ಯಾರೇ ಮಾಡಿದ್ರೂ ಅರೆಸ್ಟ್ ಮಾಡಿ. ಹೊರಗಿನವರ ಸಂಚಿದೆ, NIA ತನಿಖೆ ಮಾಡಿ ಅಂದರು, ನಮ್ಮ ಪೊಲೀಸರ ಮೇಲೆ ಬಿಜೆಪಿಗರಿಗೆ ನಂಬಿಕೆ ಇಲ್ಲ. ರಾಜಕೀಯಕ್ಕಾಗಿ ಗಲಭೆ ಸೃಷ್ಠಿ ಸರಿಯಲ್ಲ, ಶಿವಮೊಗ್ಗದ ಜನರನ್ನು ಈಶ್ವರಪ್ಪ ಬದುಕಿದ್ದಂತೆ ಸಾಯಿಸ್ತಿದ್ದಾರೆ, ಶಿವಮೊಗ್ಗ ಸಹಜ ಸ್ಥಿತಿಗೆ ಬರಲು ತುಂಬಾದಿನ ಬೇಕು.